ತನ್ನ ಮೂರು ಗಂಡುಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಶಿಶುಕಾಮಿಯ ಕೊಂದ ಘಳಿಗೆಯನ್ನು ಸಾರಾ ಸ್ಯಾಂಡ್ಸ್ ನೆನಪಿಸಿಕೊಂಡಿದ್ದಾರೆ
2014 ರಲ್ಲಿ ಈಸ್ಟ್ ಲಂಡನ್ ನಲ್ಲಿರುವ ತನ್ನ ಮನೆಯಲ್ಲಿ ಎರಡು ಬಾಟಲಿ ವೈನ್ ಹೊಟ್ಟೆಗಿಳಿಸಿದ ನಂತರ ಸಾರಾ, ಕೈಯಲ್ಲಿ ಚಾಕುವೊಂದನ್ನು ಬಹಿರಂಗವಾಗಿಯೇ ಝಳಪಳಿಸುತ್ತ ತನ್ನ ಮನೆ ಪಕ್ಕದ ಬ್ಲಾಕೊಂದಕ್ಕೆ ನುಗ್ಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಬಿಬಿಸಿಯಲ್ಲಿ ಬಿತ್ತರವಾದ ‘ಕಿಲ್ಲಿಂಗ್ ಮೈ ಚಿಲ್ಡ್ರನ್ಸ್ ಅಬ್ಯೂಸರ್’ ಸಾಕ್ಷ್ಯಚಿತ್ರದಲ್ಲಿ ಸಾರಾ ಸ್ಯಾಂಡ್ಸ್ (Sarah Sands) ತನ್ನ ಮೂರು ಗಂಡುಮಕ್ಕಳನ್ನು ಲೈಂಗಿಕವಾಗಿ ಶೋಷಿಸುತ್ತಿದ (sexual abuse) ಶಿಶುಕಾಮಿಯನ್ನು (pedophile) ತಿವಿದು ಕೊಂದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. 77-ವರ್ಷ-ವಯಸ್ಸಿನ ಮೈಕೆಲ್ ಪ್ಲೀಸ್ಟೆಡ್ (Michael Pleasted) ಹೆಸರಿನ ಶಿಶುಕಾಮಿಯನ್ನು ಎಂಟುಬಾರಿ ತಿವಿದು ಕೊಂದ ಅಪರಾಧದಲ್ಲಿ 4-ವರ್ಷ ಸೆರೆವಾಸ ಅನುಭವಿಸಿ ಹೊರಬಂದಿದ್ದಾರೆ. ಅಸಲಿಗೆ ಸಾರಾ ತಮ್ಮ ನೆರೆಮನೆಯ ಮುದಿಯನನ್ನು ಒಬ್ಬ ಸ್ನೇಹಮಯಿ ವ್ಯಕ್ತಿ ಅಂತ ಭಾವಿಸಿದ್ದರು ಮತ್ತು ಅವನ ಬಗ್ಗೆ ಕಾಳಜಿ ವಹಿಸಿ ಆಗಾಗ್ಗೆ ಊಟ ತಯಾರಿಸಿಕೊಡುತ್ತಿದ್ದರು. ಅವನು ತನ್ನ ಗಂಡು ಮಕ್ಕಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಸಂಗತಿ ಅವರ ಗಮನಕ್ಕೆ ಬಂದಿರಲೇ ಇಲ್ಲ.
2014 ರಲ್ಲಿ ಈಸ್ಟ್ ಲಂಡನ್ ನಲ್ಲಿರುವ ತನ್ನ ಮನೆಯಲ್ಲಿ ಎರಡು ಬಾಟಲಿ ವೈನ್ ಹೊಟ್ಟೆಗಿಳಿಸಿದ ನಂತರ ಸಾರಾ, ಕೈಯಲ್ಲಿ ಚಾಕುವೊಂದನ್ನು ಬಹಿರಂಗವಾಗಿಯೇ ಝಳಪಳಿಸುತ್ತ ತನ್ನ ಮನೆ ಪಕ್ಕದ ಬ್ಲಾಕೊಂದಕ್ಕೆ ನುಗ್ಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಮೈಕೆಲ್ ನನ್ನು ಕೊಲ್ಲುವ ಉದ್ದೇಶವೇನೂ ತನಗಿರಲಿಲ್ಲ, ಆದರೆ ಅವನು ತನ್ನ ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಅಂತ ಹೇಳಿ ಚಾಕು ಕಸಿದುಕೊಳ್ಳಲು ಬಂದಾಗ ಸ್ಥಿಮಿತ ಕಳೆದುಕೊಂಡೆ ಎಂದು ಸಾರಾ ಹೇಳಿದ್ದಾರೆ.
ಬಿಬಿಸಿಯ ಅಸಾಧರಣ ಸಾಕ್ಷ್ಯಚಿತ್ರ ‘ಕಿಲ್ಲಿಂಗ್ ಮೈ ಚಿಲ್ಡ್ರನ್ಸ್ ಅಬ್ಯೂಸರ್’ ದಲ್ಲಿ ಮಾತಾಡಿರುವ ಸಾರಾ, ‘ನಾನೇನು ಮಾಡುತ್ತಿದ್ದೇನೆ ಅನ್ನೋದು ನನಗೆ ಗೊತ್ತಾಗಲಿಲ್ಲ, ನಾನು ಘೋರ ಪ್ರಮಾದವೆಸಗಿದ್ದೆ ಮತ್ತು ನನಗೆ ಹೆದರಿಕೆಯಾಗತೊಡಗಿತ್ತು. ಆದರೆ ಅವನಲ್ಲಿ ಎಳ್ಳಷ್ಟೂ ಹೆದರಿಕೆ, ಪಶ್ಚಾತ್ತಾಪ ಇರಲಿಲ್ಲ,’ ಅಂತ ಹೇಳಿದ್ದಾರೆ.
‘ನಿನ್ನ ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಅಂತ ಅವನು ಹೇಳಿದಾಗ ನಾನು ಮಡುಗಟ್ಟಿದವಳಂತಾಗಿದ್ದೆ. ಅವನ ಮಾತಿನ ಧಾಟಿಯನ್ನ ನಾನು ಗಮನಿಸುತ್ತಿದ್ದೆ. ನನ್ನ ಎಡಗೈಯಲ್ಲಿದ್ದ ಚಾಕುವನ್ನು ಅವನು ಕಿತ್ತುಕೊಳ್ಳಲು ಪ್ರಯತ್ನಿಸಿದ. ಅದಾದ ಮೇಲೆ ನನಗೆ ಅವನ ಮನೆಯಿಂದ ಹೊರಬಂದಿದಷ್ಟೇ ನೆನಪು.
‘ನಿಜ ಹೇಳಬೇಕೆಂದರೆ ಅವನನ್ನು ಕೊಲ್ಲಬೇಕೆಂದು ನಾನು ಹೋಗಿರಲಿಲ್ಲ. ನನ್ನನ್ನು ಪ್ರಶ್ನಿಸುವ ಎಲ್ಲ ಅಧಿಕಾರ ಪೊಲೀಸರಿಗಿತ್ತು. ನಾನು ಕಾನೂನನ್ನು ಕೈಗತ್ತಿಕೊಂಡಿದ್ದೆ,’ ಎಂದು ಸಾರಾ ಹೇಳಿದ್ದಾರೆ. ಅವನು ಸತ್ತಿರುವುದು ಮನಸ್ಸುಗಳಲ್ಲಿ ನಿರಾಳತೆಯ ಭಾವ ಮೂಡಿಸಿದೆ ಎಂದು ಸಾರಾ ಅವರ ಅವಳಿ ಸಹೋದರ ಹೇಳಿದ್ದಾರೆ.
ಬಿಬಿಸಿಯ ಕಾರ್ಯಕ್ರಮದಲ್ಲಿ ಸಂತ್ರಸ್ತ ಮಕ್ಕಳಿಗೆ ಮೈಕೆಲ್ ಸತ್ತಿರುವುದು ನಿಮಗೆ ಖುಷಿ ನೀಡಿದೆಯೇ ಅಂತ ಕೇಳಿದಾಗ, ‘ಹೌದು, ನಿಸ್ಸಂದೇಹವಾಗಿ,’ ಅಂತ ಒಕ್ಕೊರಲಿನಿಂದ ಹೇಳಿದ್ದಾರೆ.
‘ಅವನು ಬದುಕಿದ್ದರೆ ಜಾಮೀನು ಪಡೆದು ಹೊರಬರುತ್ತಿದ್ದ ಮತ್ತು ತನ್ನ ಚಾಳಿಯನ್ನು ಮುಂದುವರಿಸುತ್ತಿದ್ದ. ಇನ್ನೂ ಐದಾರು ಮಕ್ಕಳನ್ನು ಆಹುತಿಯಾಗಿಸಿಕೊಳ್ಳುತ್ತಿದ್ದ,’ ಎಂದು ಸಾರಾ ಹೇಳಿದ್ದಾರೆ.
ಈಗ 39 ವರ್ಷದವರಾಗಿರುವ ಸಾರಾಗೆ ಒಟ್ಟು ಐದು ಮಕ್ಕಳು. ಮೈಕೆಲ್ ನನ್ನು ಮನಬಂದಂತೆ ತಿವಿದು ಅವನ ಮನೆಯಿಂದ ಹೊರಬಂದು ಅಳುತ್ತಾ ನಿಂತು ಬಿಟ್ಟಿದ್ದರಂತೆ. ತನ್ನಿಂದ ಅವತ್ತು ಏನು ನಡೆಯಿತು ಅಂತ ತನಗೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
‘ಅದೊಂದು ಕನಸೆಂದು ನಾನು ಹೇಳುವುದಿಲ್ಲ ಯಾಕೆಂದರೆ, ಅದು ವಾಸ್ತವ ಆಗಿತ್ತು. ಅವನು ನಮ್ಮ ಬದುಕಿನ ದುಸ್ವಪ್ನವಾಗಿದ್ದ. ಅವನು ನನ್ನ ಮಕ್ಕಳನ್ನು ಪೀಡಿಸುತ್ತಿದ್ದ ಸಂಗತಿ ನನ್ನಲ್ಲಿ ಕ್ರೋಧ ಹುಟ್ಟಿಸುತ್ತಿತ್ತು. ಮಕ್ಕಳಿಗಾಗಿ ನನ್ನ ಪ್ರಾಣವನ್ನೂ ಒತ್ತೆಯಿಡುತ್ತೇನೆ,’ ಎಂದು ಸಾರಾ ಹೇಳಿದ್ದಾರೆ.
ತನ್ನ ಮೂರು ಮಕ್ಕಳ ಜೊತೆಗೆ ಮೈಕೆಲ್ ಇತರ ಮಕ್ಕಳನ್ನೂ ಲೈಂಗಿಕವಾಗಿ ಶೋಷಿಸಿದ್ದ. ಶಿಶುಕಾಮದ ಅಪರಾಧಗಳನ್ನೆಸಗಿ ಅವನು ತನ್ನ ಬದುಕಿನ ಮೂರು ದಶಕಗಳನ್ನು ಜೈಲಿನಲ್ಲಿ ಕಳೆದಿದ್ದ. ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧಗಳು ಮತ್ತು ಮೈಕೆಲ್ ನ ಹಾಗೆ ಲೈಂಗಿಕ ಅಪರಾಧಿಗಳು ಹೆಸರು ಬದಲಾಯಿಸಿಕೊಂಡು ತಿರುಗಾಡುವದಕ್ಕೆಎ ಪೂರ್ಣವಿರಾಮ ಹಾಕಲು ಸಾರಾ ಅಭಿಯಾನವೊಂದನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ.
ಬಿಬಿಸಿ ಬ್ರೇಕ್ ಫಾಸ್ಟ್ ಗೆ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ‘ಶಿಶುಕಾಮಿಗಳೇ ಎಚ್ಚರ, ಮಕ್ಕಳನ್ನು ಮುಟ್ಟ್ಟಿದರೆ ನಿಮ್ಮ ಗತಿ ನೆಟ್ಟಗಿರುವುದಿಲ್ಲ, ಹೆಸರು ಬದಲಾಯಿಸಿಕೊಂಡು ತಿರುಗಿದರೂ ನೀವು ತಪ್ಪಿಸಿಕೊಳ್ಳಲಾರಿರಿ. ಹೆಸರು ಬದಲಿಸುವ ಅವರ ಹಕ್ಕನ್ನು ಅವರಿಂದ ಕಿತ್ತುಕೊಳ್ಳಬೇಕು,’ ಎಂದು ಸಾರಾ ಹೇಳಿದ್ದಾರೆ.
ಮೈಕಲ್ ಒಬ್ಬ ಸ್ನೇಹಮಯಿ ನೆರೆಹೊರೆಯವನಾಗಿದ್ದ ಎಂದು ಸಾರಾ ಕುಟುಂಬ ಭಾವಿಸಿತ್ತು. ಮಕ್ಕಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ತನ್ನ ಕ್ರಿಮಿನಲ್ ಇತಿಹಾಸವನ್ನು ಮರೆಮಾಡಲು ರಾಬಿನ್ ಮೌಲ್ಟ್ ಎಂಬ ತನ್ನ ಅಸಲು ಹೆಸರನ್ನು ಮುಚ್ಚಿಟ್ಟು ಮೈಕೆಲ್ ಪ್ಲೀಸ್ಟೆಡ್ ಹೆಸರಲ್ಲಿ ತಿರುಗಾಡುತ್ತಿದ್ದ.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ