ಮೈಸೂರು: ಪ್ರೀತಿಸಿ ಮದುವೆ (Love Marriage) ಆದ ಒಂದು ವರ್ಷಕ್ಕೆ ಪತಿಮಹಾಶಯನೊಬ್ಬ ತನ್ನ ಬಾಳಸಂಗಾತಿಗೆ ಕೈಕೊಟ್ಟ (Breakup) ಪ್ರಕರಣ ಜಿಲ್ಲೆಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದುವೆ ನಂತರ ಗಂಡನ ಮನೆಯವರೇ ಸಂಸಾರಕ್ಕೆ ಸಮಸ್ಯೆ ತಂದಿದ್ದಾರೆ ಎಂದು ಗಂಡ ಕೈಕೊಟ್ಟ ನಂತರ ಅತಂತ್ರಳಾಗಿರುವ ಮಹಿಳೆ ಆರೋಪಿಸಿ ಠಾಣೆ ಮೆಟ್ಟಿಲೇರಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿ ಸೇರಿದಂತೆ ಒಟ್ಟು 16 ಮಂದಿ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಚಿತ್ರದುರ್ಗದ ಅಶ್ವಿನಿ (24) ಮತ್ತು ಮೈಸೂರಿನ ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ ಪರಸ್ಪರ ಪ್ರೀತಿಸುತ್ತಿದ್ದರು. ಅದರಂತೆ ಕಳೆದ ಒಂದು ವರ್ಷದ ಹಿಂದೆ ಅಶ್ವಿನಿ ತನ್ನ ಪ್ರಿಯತಮನೊಂದಿಗೆ ಸಪ್ತಪದಿ ತುಳಿದು ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಲ್ಲಿ ಅಭಿಷೇಕ್ ಮತ್ತು ಅಶ್ಚಿನಿ ನಡುವೆ ಪ್ರೀತಿ ಕಮರಿಸಿದೆ. ಸದ್ಯ ಅಭಿಷೇಕ್ ಪ್ರೀತಿಸಿ ಮದುವೆಯಾದ ಅಶ್ಚಿನಿಗೆ ಕೈಕೊಟ್ಟಿದ್ದು, ಅತಂತ್ರಳಾಗಿರುವ ಅಶ್ವಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಅಭಿಷೇಕ್ ಮನೆಯವರಿಂದಲೇ ಸಮಸ್ಯೆ ಎಂದು ಆರೋಪಿಸಿದ್ದಾರೆ. ಅಶ್ವಿನಿ ನೀಡಿದ ದೂರಿನ ಅನ್ವಯ ಆಕೆಯ ಪತಿ ಅಭಿಷೇಕ್ ಸೇರಿದಂತೆ ಒಟ್ಟು 16 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಾಂಗಲ್ಯಸರ ಸುಲಿಗೆ ಮಾಡಿದ್ದ ನಾಲ್ವರು ಅರೆಸ್ಟ್
ರಾಮನಗರ: ಚಿನ್ನದ ಮಾಂಗಲ್ಯಸರ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ತಾವರೆಕೆರೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿ ಗ್ರಾಮದ ಗಂಗರಾಜು, ಮಲ್ಲಿಕಾರ್ಜುನ, ನಟರಾಜು, ವಿನಯಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಒಂಟಿಯಾಗಿ ನಡೆದುಕೊಂಡು ಬರುತ್ತಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.
ಬೆಂಗಳೂರು ದಕ್ಷಿಣ ತಾಲೂಕಿನ ಕುರುಬನಪಾಳ್ಯ ಗ್ರಾಮದ ಬಳಿ ಸೆಪ್ಟೆಂಬರ್ 18 ರಂದು ಆರೋಪಿಗಳು ಜಯಲಕ್ಷಮ್ಮ ಎಂಬ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಮಹಿಳೆ ಕೆಳಗೆ ಬಿದ್ದ ನಂತರ 60 ಗ್ರಾಂ ಮಾಂಗ್ಯಲಸರ ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು ಮಾಂಗ್ಯಲಸರ, ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಮೋಟರ್ ಹಾಗೂ ಪಂಪ್ ಕಳ್ಳತನ
ಕೋಲಾರ: ಮೋಟರ್ ರಿವೈಂಡಿಂಗ್ ಅಂಗಡಿಗೆ ನುಗ್ಗಿದ ಕಳ್ಳರು ಮೋಟರ್ ಹಾಗೂ ಪಂಪ್ ಕದ್ದು ಪರಾರಿಯಾಗಿರುವ ಘಟನೆ ತಾಲುಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಕಾವೇರಿ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದ್ದು, ಸುಮಾರು 4.5 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 am, Sat, 24 September 22