Crime News: ಮಕ್ಕಳ ಕಳ್ಳರೆಂದು ಮಹಿಳೆಯರಿಗೆ ಥಳಿಸಿದ ಜನರು
ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗುತ್ತಿರುವುದು ಜಿಲ್ಲೆಗೆ ಬೆರೊಂದು ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಅಪರಿಚಿತ ಜನರಿಗೆ ಭೀತಿ ಎದುರಾಗಿದೆ. ತೆಲಂಗಾಣದಿಂದ ಬಂದ ಇಬ್ಬರು ಮಹಿಳೆಯರ ಮೇಲೆ ಜನರು ಥಳಿಸಿದ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ: ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗುತ್ತಿದ್ದು, ಶಂಕೆ ವ್ಯಕ್ತಪಡಿಸಿ ಹಲ್ಲೆ ನಡೆಸಲಾಗುತ್ತಿದೆ. ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಮಹಿಳೆಯರಿಗೆ ಜನರು ಥಳಿಸಿದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ನಡೆದಿದೆ. ತೆಲಂಗಾಣದ ಕೊತ್ಲಾಪುರ ಗ್ರಾಮದಿಂದ ಇಬ್ಬರು ಮಹಿಳೆಯರು ಪೋಲಕಪಳ್ಳಿ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರನ್ನು ನೋಡಿ ಅನುಮಾನಿಸಿದ ಜನರು ಮಕ್ಕಳ ಕಳ್ಳರೆಂದು ಭಾವಿಸಿ ಥಳಿಸಿದ್ದಾರೆ. ಬಳಿಕ ಚಿಂಚೋಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅದರಂತೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಥಳಿತಕ್ಕೊಳಗಾದ ಇಬ್ಬರು ಮಹಿಳೆಯರು ಗ್ರಾಮದಲ್ಲಿರುವ ತಮ್ಮ ಸಂಬಂಧಿರ ಮನೆಗೆ ಬಂದಿರುವುದು ಎಂದು ತಿಳಿದುಬಂದಿದೆ.
ಸಿಕ್ಕಿಬಿದ್ದ ಕಾನ್ಸ್ಟೇಬಲ್ಗಳು ಅಮಾನತು
ಕಲಬುರಗಿ: 30 ಸಾವಿರ ರೂಪಾಯಿ ಲಂಚಕ್ಕೆ ಕೈಯೊಡ್ಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಿ ಕಲಬುರಗಿ ಎಸ್ಪಿ ಇಶಾ ಪಂತ್ ಆದೇಶ ಹೊರಡಿಸಿದ್ದಾರೆ. ಮರಳು ಸಾಗಣೆಗೆ ಲಂಚ ಪಡೆಯುತ್ತಿದ್ದ ಮೂವರು ಪೊಲೀಸರು ಲೋಕಾಯುಕ್ತ ಅಧಿಕಾರಿಗಳ ಬಲೆ ಬಿದ್ದಿದ್ದರು. ಜೇವರ್ಗಿ ಠಾಣೆ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಶಹಪುರದ ಮರಳು ವ್ಯಾಪಾರಿ ಅಖಿಲ್ ಎಂಬವರು ನೀಡಿದ ದೂರಿನ ಅನ್ವಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಸದ್ಯ ಕಾನ್ಸ್ಟೇಬಲ್ಗಳಾದ ಶಿವರಾಯ್ ಹಾಗೂ ಅವ್ವಣ್ಣ ಅವರನ್ನು ಅಮಾನತುಗೊಳಿಸಲಾಗಿದೆ.
ತಂದೆಯನ್ನೇ ಕೊಂದ ಮಗ
ಬಾಗಲಕೋಟೆ: ಜಮೀನು ವಿಚಾರವಾಗಿ ತಂದೆಯನ್ನೇ ಪಾಪಿ ಮಗನೊಬ್ಬ ಕೊಲೆ ಮಾಡಿದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಬನಹಟ್ಟಿ ಕೆರೆ ಬಡಾವಣೆಯಲ್ಲಿ ನಡೆದಿದೆ. 65 ವರ್ಷದ ಮಾಳಪ್ಪ ಹಳ್ಳೂರ ಮೃತ ದುರ್ದೈವಿ. 2 ಗುಂಟೆ ಜಾಗಕ್ಕಾಗಿ ತಂದೆ ಮಾಳಪ್ಪ ಅವರನ್ನು ಮಗನಾದ ತುಕ್ಕಪ್ಪ ಶೆಡ್ ಮನೆಯಲ್ಲಿ ಕಟ್ಟಿಗೆಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ. ನಿನ್ನೆ ರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದ್ದು, ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 am, Sat, 24 September 22