ಉಡುಪಿಯಲ್ಲಿ ನಡೆದ ನಾಲ್ವರ ಬರ್ಬರ ಹತ್ಯೆ ಪ್ರಕರಣ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಘಟನೆ ನಡೆದು 90 ದಿನಗಳು ಪೂರ್ಣಗೊಂಡು ಚಾರ್ಜ್ ಶೀಟ್ ನ್ನು ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೌದು ಉಡುಪಿಯ ನೇಜಾರು ಸಮೀಪದ ತೃಪ್ತಿ ಲೇ ಔಟ್ ನಲ್ಲಿ ದೀಪಾವಳಿಯ ದಿನವೇ ತಾಯಿ ಮತ್ತು ಮಕ್ಕಳ ಭೀಕರ ಹತ್ಯೆ ನಡೆದಿತ್ತು.. ಬೆಳಗಿನ ಜಾವ ಬೆಳಕು ಹರಿಯುವ ವೇಳೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿ ಚೂರಿಯಿಂದ ಇರಿದು ತಾಯಿ ಹಾಗೂ ಆಕೆಯ ಮೂವರು ಮಕ್ಕಳನ್ನು ಕೊಂದು ಹಾಕಿದ ಪ್ರಕರಣ ಕಂಡು ನಾಡಿಗೆ ನಾಡೇ ಬೆಚ್ಚಿಬಿದ್ದಿತ್ತು.
ಕೃತ್ಯ ನಡೆದು 90 ದಿನಗಳು ಪೂರ್ಣಗೊಂಡಿದೆ. ನಿಯಮಾನಸಾರ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪೊಲೀಸ್ ತನಿಖೆ ಪೂರ್ಣಗೊಂಡಿದ್ದು 244 ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಎಫ್ ಎಸ್ ಎಲ್ ವರದಿಯೂ ಕೈ ಸೇರಿದೆ. ಮಾರ್ಗ ಮಧ್ಯೆ ಬಿಸಾಕಿರುವ ಬಟ್ಟೆ ಆರೋಪಿಯದ್ದೆ ಎನ್ನುವುದು ಎಫ್ ಎಸ್ ಎಲ್ ವರದಿಯಿಂದ ಸಾಬೀತು ಅಗಿದೆ.
ನವೆಂಬರ್ 12 ರಂದು ಏಕಾಏಕಿ ಮನೆಗೆ ನುಗ್ಗಿದ್ದ ಆರೋಪಿ ಪ್ರವೀಣ್ ಚೌಗುಲೆ, ತಾಯಿ ಹಸೀನಾ ಮತ್ತು ಆಕೆಯ ಮೂವರು ಮಕ್ಕಳಾದ ಆಫ್ನಾನ್, ಐನಾಜ್ ಹಾಗೂ ಆಸೀಮ್ ರನ್ನು ಚೂರಿಯಿಂದ ಇರಿದು ಕೊಂದಿದ್ದ. ಈ ಪೈಕಿ ಐನಸ್ ಬಗ್ಗೆ ಏಕಮುಖ ಪ್ರೀತಿ ಹೊಂದಿದ್ದ ಪ್ರವೀಣ್ ಆಕೆ ಒಪ್ಪದೇ ಹೋದಾಗ ಈ ಕೃತ್ಯಕ್ಕೆ ಮುಂದಾಗಿದ್ದ. ಪ್ರಕರಣ ಸಂಬಂಧ 8 ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದ ಪೊಲೀಸರು, ಘಟನೆ ನಡೆದು ಎರಡು ದಿನಗಳಲ್ಲಿ ಆರೋಪಿಯನ್ನು ಬೆಳಗಾವಿಯಲ್ಲಿ ಬಂಧಿಸಿದ್ದರು.
Also Read: ಉಡುಪಿ ನಾಲ್ವರ ಹತ್ಯೆ ಪ್ರಕರಣ: ಹತ್ಯೆಗೆ ನಿಖರ ಕಾರಣ ಬಿಚ್ಚಿಟ್ಟ ಹಂತಕ ಪ್ರವೀಣ, ಭಯಾನಕ ಸಂಗತಿಗಳು ಬಹಿರಂಗ
ಇದೀಗ ಆರೋಪಿ ಪ್ರವೀಣ್ ಚೌಗಲೆ ಬೆಂಗಳೂರು ಜೈಲಿನಲ್ಲಿದ್ದು, ನೊಂದ ಕುಟುಂಬದ ಪರ ವಾದ ಮಾಡಲು ವಿಶೇಷ ಸರಕಾರಿ ಅಭಿಯೋಜಕ ರನ್ನು ಸರ್ಕಾರ ನೇಮಕ ಮಾಡಿ ಆದೇಶಿಸಿದೆ. ಘಟನೆಯ ನಂತರ ಸಾಕ್ಷ್ಯ ನಾಶ ಮಾಡುವ ವೇಳೆ ಕೃತ್ಯದ ವೇಳೆ ಧರಿಸಿದ್ದ ಬಟ್ಟೆ ಹಾಗೂ ಇತರ ವಸ್ತುಗಳನ್ನು ಮಂಗಳೂರಿನ ಮಾರ್ಗ ಮಧ್ಯದಲ್ಲಿ ಆರೋಪಿ ಸುಟ್ಟು ಹಾಕಿದ್ದ.
ಈ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಪೊಲೀಸರ ಕೈ ಸೇರಿದೆ. ಎಫ್ ಎಸ್ ಎಲ್ ವರದಿ ಸಹಿತ ಪೊಲೀಸರು ತಮ್ಮ ಬೇರೆ ತನಿಖೆಯಿಂದ ಸಂಗ್ರಹಿಸಿದ 244 ಸಾಕ್ಷಿಗಳ ಸಹಿತ 2022 ಪುಟಗಳ ಸಮಗ್ರ ವಾದ ಚಾರ್ಜ್ ಶೀಟ್ ಅನ್ನು ಉಡುಪಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂ ಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಒಂದು ನಿರ್ಣಾಯಕ ಹಂತ ತಲುಪಿದ್ದು ಚಾರ್ಜ್ ಶೀಟ್ ಸಲ್ಲಿಕೆ ಯಾಗಿದೆ. ಈ ಹಂತದಲ್ಲಿ ಸಾಕ್ಷಿಗಳು, ತನಿಖಾಧಿಕಾರಿಗಳ ವಿಚಾರಣೆ ನಡೆಯಲಿದೆ. ಇಂತಹ ಕೃತ್ಯ ಎಸಗಿದ ಆರೋಪಿಗೆ ಮರಣದಂಡನೆಯಂತ ಶಿಕ್ಷೆಯಾಗಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Wed, 14 February 24