ಬೆಂಗಳೂರು, ಡಿಸೆಂಬರ್ 28: ಹೊಸ ವರ್ಷಾಚರಣೆ (New Year) ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿ ನಾಲ್ವರು ಡ್ರಗ್ಸ್ ಪೆಡ್ಲರ್ಗಳನ್ನು (Drug Peddlers) ಬಂಧಿಸಿದ್ದಾರೆ. ಆರೋಪಿಗಳು ಡಿ.31ರಂದು ವಿವಿಧೆಡೆ ಡ್ರಗ್ಸ್ ಸರಬರಾಜು ಮಾಡಲು ಅಪಾರ ಪ್ರಮಾಣದ ಆರ್ಡರ್ ಪಡೆದಿದ್ದರು.
ಬಂಧಿತರನ್ನು ಗಂಗೊಂಡನಹಳ್ಳಿ ಅನಿಲ್ (21), ಅಂದ್ರಹಳ್ಳಿ ಕಾರ್ತಿಕ್ (18), ನವೀನ್ (20) ಮತ್ತು ದೊಂಬರಹಳ್ಳಿ ಮಂಜುನಾಥ್ (19) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 2 ಕೆಜಿ ಗಾಂಜಾ, ಎರಡು ಬೈಕ್ ಹಾಗೂ ಚಾಕುಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆ ಪ್ರದೇಶದ ಮನೆ ಮೇಲೆ ದಾಳಿ ನಡೆಸಿದಾಗ ನಿಷೇಧಿತ ಡ್ರಗ್ಸ್ ಪತ್ತೆಯಾಗಿವೆ.
ನಾಲ್ವರು ಆರೋಪಿಗಳು ಹೊಸ ವರ್ಷದ ಮುನ್ನಾದಿನದಂದು ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡಲು ಭಾರಿ ಮೊತ್ತದ ಆರ್ಡರ್ ತೆಗೆದುಕೊಂಡಿರುವುದು ಆರಂಭಿಕ ವಿಚಾರಣೆಯಲ್ಲಿ ಪೊಲೀಸರಿಗೆ ಗೊತ್ತಾಗಿದೆ. ಆರೋಪಿಗಳು ಹೋಟೆಲ್‌ಗಳು, ಢಾಬಾಗಳು, ಲಾಡ್ಜ್‌ಗಳು ಮತ್ತು ಟ್ರಕ್ ಪಾರ್ಕಿಂಗ್ ಪ್ರದೇಶಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಬೈಕ್ ವ್ಹೀಲಿಂಗ್, ದರೋಡೆ ಮುಂತಾದ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದರು. ಆರೋಪಿಗಳ ಜಾಲ ಮತ್ತು ಮಾದಕವಸ್ತು ಸಂಗ್ರಹದ ಮೂಲವನ್ನು ಗುರುತಿಸಲು ಪೊಲೀಸರು ಆರೋಪಿಗಳ ಮೊಬೈಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಶೀಘ್ರ ಹಣ ಗಳಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ನಾಲ್ವರನ್ನು ಮದುವೆಯಾಗಿ ವಂಚಿಸಿದ ಮಹಿಳೆ, ಪ್ರಕರಣ ದಾಖಲು
ಈ ತಿಂಗಳ ಆರಂಭದಲ್ಲಿ ಬೆಂಗಳೂರು ಪೊಲೀಸರು ವ್ಯಾಪಾರಿ ವೀಸಾದ ಮೇಲೆ ದೇಶಕ್ಕೆ ಬಂದಿದ್ದ ಆಫ್ರಿಕನ್ ಪ್ರಜೆಯೊಬ್ಬರಿಂದ ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ