ಮಂಡ್ಯ, ಸೆ.13: ಹಳೇ ವೈಷಮ್ಯ ಹಾಗೂ ಗಣಪತಿ ಕೂರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಏರಿಯಾದ ಯುವಕರ ನಡುವೆ ಗಲಾಟೆ ನಡೆದು, ಆನಂತರ ಅದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಡ್ಯ (Mandya)ದ ಗಾಂಧಿನಗರದಲ್ಲಿ ನಡೆದಿದೆ. ಹೌದು, ಗಾಂಧಿನಗರದ ಐದನೇ ಕ್ರಾಸ್ನ ನಿವಾಸಿ ಅಕ್ಷಯ್ ಅಲಿಯಾಸ್ ಗಂಟ್ಲು(22) ಕೊಲೆಯಾದ ದುರ್ದೈವಿ. ನಿನ್ನೆ(ಸೆ.13) ಸಂಜೆ ಅಕ್ಷಯ್, ಮನೆಯ ಸಮೀಪವೇ ಇರುವ ಮಂಡ್ಯದ ಹೊಸಳ್ಳಿ ರಸ್ತೆಯಲ್ಲಿರುವ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ. ಈ ವೇಳೆ ಬೈಕ್ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಮಾರಾಕಾಸ್ತ್ರಗಳಿಂದ ಆಟ್ಯಾಕ್ ಮಾಡಿದ್ದರು.
ಇನ್ನು ಅಲ್ಲಿಂದ ತಪ್ಪಿಸಿಕೊಂಡು ನೂರು ಮೀಟರ್ ಓಡಿ ಹೋಗಿ, ಪ್ರದೀಪ್ ಎಂಬುವವರ ಮನೆಯ ಕಾಂಪೌಂಡ್ನ ಒಳಗೆ ಹೋಗಲು ಯತ್ನಿಸಿದ್ದಾನೆ. ಆದರೆ, ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು, ಮನೆಯ ಕಾಂಪೌಂಡ್ ಒಳಗೆ ಲಾಕ್ ಆದ ಅಕ್ಷಯ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಇನ್ನು ಸಂಜೆ ವೇಳೆ ಜನನಿಬಿಡ ಪ್ರದೇಶದಲ್ಲಿ ನಡೆದ ಭೀಕರ ಹತ್ಯೆ ಮಂಡ್ಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಇದನ್ನೂ ಓದಿ:ಕಲಬುರಗಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಮಗಳದ್ದು ಆತ್ಮಹತ್ಯೆಯಲ್ಲ, ಕೊಲೆ ಅಂತಿರೋ ಕುಟುಂಬ
ಅಂದಹಾಗೆ ಕೊಲೆಯಾದ ಅಕ್ಷಯ್, ಮೂಲತಃ ಮಂಡ್ಯ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ. ಅಕ್ಷಯ್ ತಾಯಿ ಗ್ರಾಮ ಪಂಚಾಯತ್ ಸದಸ್ಯೆ. ಕೆಲವು ತಿಂಗಳು ಕೆಳಗೆ ಅಲ್ಲಿಂದ ಬಂದು ಮಂಡ್ಯದ ಗಾಂಧಿನಗರದಲ್ಲಿ ವಾಸವಾಗಿದ್ದರು. ಏನೂ ಕೆಲಸ ಮಾಡದ ಅಕ್ಷಯ್, ತಿರುಗಾಡಿಕೊಂಡು ಕಾಲ ಕಳೆಯುತ್ತಿದ್ದ. ಇದೇ ವೇಳೆ ಏರಿಯಾದ ಕೆಲವು ಯುವಕರ ಜೊತೆ ದ್ವೇಷ ಕಟ್ಟಿಕೊಂಡಿದ್ದ. ಇದೇ ವಿಚಾರವಾಗಿ ಕೆಲ ದಿನಗಳ ಕೆಳಗೆ ಗಲಾಟೆ ಕೂಡ ನಡೆದಿತ್ತು.
ಅಲ್ಲದೆ ಇದೀಗ ಏರಿಯಾದಲ್ಲಿ ಗಣಪತಿ ಕೂರಿಸುವ ವಿಚಾರವಾಗಿ ಕೂಡ ಕಿರಿಕ್ ಆಗಿತ್ತು. ಇದೇ ವಿಚಾರವನ್ನು ಮುಂದೆ ಇಟ್ಟುಕೊಂಡು, ಸ್ಕೇಚ್ ಹಾಕಿದ ಅದೇ ಏರಿಯಾದ ಯುವಕರ ಗುಂಪು, ನಿನ್ನೆ ಸಂಜೆ ಅಕ್ಷಯ್ನ ಕಥೆ ಮುಗಿಸಿದ್ದಾರೆ. ಇನ್ನು ಈ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಒಟ್ಟಾರೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕರ ನಡುವೆ ವೈಷಮ್ಯ ಬೆಳೆದು ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ