Kalaburagi News; ಮನೆಯಿಂದಲೇ ಪಾರ್ಟ್ ಟೈಮ್ ಕೆಲಸಕ್ಕೆ ಆಫರ್; ವಂಚಕರ ಮಾತು ಕೇಳಿ ಲಕ್ಷಾಂತರ ಹಣ ಕಳೆದುಕೊಂಡ ಮಹಿಳೆ

ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿ ನಿವಾಸಿಯಾಗಿರುವ ಶಿಲ್ಪಾ ಅನ್ನೋರು, ಮನೆಗೆಲಸ ಮಾಡಿಕೊಂಡಿದ್ದಾರೆ. ಮನೆಯಲ್ಲೇ ಕೂತು ಬೋರಾಗುತ್ತಿದ್ದರಿಂದ ಏನಾದ್ರು ಕೆಲಸ ಮಾಡಬೇಕು ಅನ್ನೋ ಉತ್ಸಾಹ ಶಿಲ್ಪಾ ಅವರಿಗೆ ಇತ್ತಂತೆ. ಇನ್ನು ಕಳೆದ ಏಪ್ರೀಲ್ 30 ರಂದು ಶಿಲ್ಪಾ ಅವರ ವಾಟ್ಸಪ್ ನಂಬರ್ ಗೆ 9818643765 ನಂಬರಿಂದ ಸಂದೇಶವೊಂದು ಬಂದಿತ್ತು. ಆಮೇಲೇನಾಯ್ತು? ಇಲ್ಲಿದೆ ವಿವರ.

Kalaburagi News; ಮನೆಯಿಂದಲೇ ಪಾರ್ಟ್ ಟೈಮ್ ಕೆಲಸಕ್ಕೆ ಆಫರ್; ವಂಚಕರ ಮಾತು ಕೇಳಿ ಲಕ್ಷಾಂತರ ಹಣ ಕಳೆದುಕೊಂಡ ಮಹಿಳೆ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on:Sep 13, 2023 | 5:35 PM

ಕಲಬುರಗಿ, ಸೆಪ್ಟೆಂಬರ್ 13: ಅನೇಕರು ಮನೆಯಲ್ಲೇ ಕೂತು ಕೂತು ಬೋರಾಗುತ್ತಿದೆ. ಏನಾದ್ರು ಕೆಲಸ ಮಾಡಬೇಕು, ಮನೆಯಲ್ಲೇ ಕೂತು ಕೆಲಸ ಮಾಡಿ, ಹಣ ಸಂಪಾದಿಸುವ ಯಾವುದಾದ್ರು ಕೆಲಸ ಸಿಕ್ಕರೆ ಉತ್ತಮ. ಇದರಿಂದ ಮನೆಯಲ್ಲೇ ಕೂತು ಕೆಲಸವನ್ನು ಮಾಡಿ ಹಣವನ್ನು ಸಂಪಾದಿಸಬಹುದು. ಜೊತೆಗೆ ಸಮಯವನ್ನು ಕಳೆದಂತಾಗುತ್ತದೆ ಅಂತ ಅಂದುಕೊಳ್ಳುತ್ತಿರುತ್ತಾರೆ. ಆದ್ರೆ ಹೀಗೆ ಅಂದುಕೊಂಡು ಗೊತ್ತು ಗುರಿಯಿಲ್ಲದವರ ಮಾತು ಕೇಳಿ, ವಾಟ್ಸಪ್, ಪೇಸಬುಕ್ ನಲ್ಲಿ ಬರೋ ಮೆಸೆಜ್ ಗಳನ್ನು ನೋಡಿ ಮಾಡಬಾರದ ಕೆಲಸ ಮಾಡಲು ಹೋದ್ರೆ ನೀವು ವಂಚಕರ (Online Fraud) ಬಲೆಗೆ ಬಿದ್ದು ಸಮಯದ ಜೊತೆಗೆ ನಿಮ್ಮ ಹಣವನ್ನು ಕಳೆದುಕೊಳ್ಳುತ್ತಿರಿ ಎಚ್ಚರ, ಎಚ್ಚರ.

ಹೌದು ಕಲಬುರಗಿ ನಗರದ ಮಹಿಳೆಯೊಬ್ಬರು, ಮನೆಯಲ್ಲೇ ಕೂತು ಕೆಲಸ ಮಾಡಿ ಹಣ ಸಂಪಾದಿಸಿ ಅನ್ನೋ ವಂಚಕರ ಮಾತಿಗೆ ಮರುಳಾಗಿ ಬರೋಬ್ಬರಿ ನಾಲ್ಕು ಲಕ್ಷ ಮೂವತ್ತೈದು ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಅನೇಕ ದಿನಗಳ ಸಮಯದ ಜೊತೆಗೆ ಕಷ್ಟಪಟ್ಟು ದುಡಿದು, ಅನೇಕ ವರ್ಷಗಳಿಂದ ಸಂಗ್ರಹಿಸಿಟ್ಟುಕೊಂಡಿದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದು, ವಂಚಕರ ಪತ್ತೆಗಾಗಿ ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಮನೆಯಲ್ಲೇ ಕೂತು ಹಣ ಸಂಪಾದನೆ ಹೆಸರಲ್ಲಿ ಮೋಸ

ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿ ನಿವಾಸಿಯಾಗಿರುವ ಶಿಲ್ಪಾ ಅನ್ನೋರು, ಮನೆಗೆಲಸ ಮಾಡಿಕೊಂಡಿದ್ದಾರೆ. ಮನೆಯಲ್ಲೇ ಕೂತು ಬೋರಾಗುತ್ತಿದ್ದರಿಂದ ಏನಾದ್ರು ಕೆಲಸ ಮಾಡಬೇಕು ಅನ್ನೋ ಉತ್ಸಾಹ ಶಿಲ್ಪಾ ಅವರಿಗೆ ಇತ್ತಂತೆ. ಇನ್ನು ಕಳೆದ ಏಪ್ರೀಲ್ 30 ರಂದು ಶಿಲ್ಪಾ ಅವರ ವಾಟ್ಸಪ್ ನಂಬರ್ ಗೆ 9818643765 ನಂಬರಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ ಆನಲೈನ್ ಮೂಲಕ ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಗಳಿಸಬಹುದು ಅನ್ನೋ ಸಂದೇಶ ಶಿಲ್ಪಾ ಅವರಿಗೆ ಬಂದಿತ್ತು. ಮೆಸೆಜ್ ಗೆ ಶಿಲ್ಪಾ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದರು. ನಂತರ 9818643765 ನಂಬರ್ ನಿಂದ ವಂಚಕಿ ಸಾಕ್ಷಿ ಅನ್ನೋ ಮಹಿಳೆ ಕರೆ ಮಾಡಿ, ಶಿಲ್ಪಾ ಅವರಿಗೆ ನೀವು ಮನೆಯಲ್ಲೇ ಕೂತು ಕೆಲಸ ಮಾಡಿ, ಸಾವಿರಾರು ರೂಪಾಯಿ ಹಣ ಸಂಪಾದಿಸಬಹುದು. ಸುಲಭ ಕೆಲಸ ಮಾಡಿ, ಹಣ ಸಂಪಾದಿಸಿ ಅಂತ ಹೇಳಿದ್ದಳಂತೆ. ವಂಚಕಿ ಸಾಕ್ಷಿ ಮಾತನ್ನು ನಂಬಿದ್ದ ಶಿಲ್ಪಾ, ವಂಚಕಿಯ ಮಾತಿಗೆ ಎಸ್ ಅಂದಿದ್ದರಂತೆ.

ಅದರಂತೆ ವಂಚಕರು ಟೆಲಿಗ್ರಾಮ ಗ್ರೂಪ್ ಮಾಡಿ ಅದರಲ್ಲಿ ಶಿಲ್ಪಾ ಅವರ ನಂಬರ್ ನ್ನು ಸೇರಿಸಿದ್ದರು. ನೀವು ವಿವಿಧ ಹೋಟೆಲ್ ಗಳ ವೆಬ್ ಪೇಜ್ ಗೆ ಹೋಗಿ, ಅಲ್ಲಿ ಸ್ಟಾರ್ ರೇಟಿಂಗ್ ಮಾಡಿ, ನಿಮಗೆ ಹಣ ಬರುತ್ತದೆ ಅಂತ ವಂಚಕರು ಹೇಳಿದ್ದರು. ಅದರಂತೆ ಶಿಲ್ಪಾ ಅವರು, ವಂಚಕರು ಹೇಳಿದ್ದ ಹೋಟೆಲ್ ಗಳ ವೆಬ್ ಪೇಜ್ ಗೆ ಹೋಗಿ ಸ್ಟಾರ್ ರೇಟಿಂಗ್ ಮಾಡಿದ್ದರು. ಮೂರು ಹೋಟೆಲ್ ಗಳ ಸ್ಟಾರ್ ರೇಟಿಂಗ್ ಮಾಡಿ, ಅವುಗಳ ಸ್ಕ್ರೀನ್ ಶಾಟ್ ನ್ನು ಟೆಲಿಗ್ರಾಂ ಮೂಲಕ ವಂಚಕರ ಗ್ರೂಪ್ ಗೆ ಕಳುಹಿಸಿದ್ದರು. ಆಗ ವಂಚಕರು ಆರನೂರು ರೂಪಾಯಿಯನ್ನು ಶಿಲ್ಪಾ ಅವರ ಅಕೌಂಟ್ ಗೆ ಜಮೆ ಮಾಡಿದ್ದಾರೆ. ಮತ್ತೊಮ್ಮೆ ಕೂಡಾ ಆರು ನೂರಾ ಐವತ್ತು ರೂಪಾಯಿ ಜಮೆ ಮಾಡಿದ್ದಾರೆ. ಮನೆಯಲ್ಲೇ ಕೂತು ಸುಲಭವಾಗಿ ಹಣ ಗಳಿಸಬಹುದು ಅನ್ನೋ ಖುಷಿ ಶಿಲ್ಪಾ ಅವರಿಗೆ ಆಗಿದೆ.

ಆಸೆ ಹುಟ್ಟಿಸಿ ವಂಚನೆ ಆರಂಭಿಸಿದ್ದ ವಂಚಕಿಯರು

ಆರಂಭದಲ್ಲಿ ಎರಡು ಬಾರಿ ಆರುನೂರು, ಆರುನೂರಾ ಐವತ್ತು ರೂಪಾಯಿ ಜಮೆ ಮಾಡಿದ್ದ ವಂಚಕಿಯರು ಶಿಲ್ಪಾ ಅವರಿಗೆ ತಮ್ಮ ಮೋಸದ ಆಟ ಆರಂಭಿಸಿದ್ದರು. ನೀವು ಇನ್ನು ಮೇಲೆ ನೆಕ್ಟೆಲೆವಲ್ ಪ್ರಿಪೇಡ್ ಟಾಸ್ಕ್ ಗಳನ್ನು ಮಾಡಬೇಕು ಅಂತ ಹೇಳಿದ್ದರು. ಆಗ ಕೂಡಾ ಶಿಲ್ಪಾ ಅವರು 2000 ರೂಪಾಯಿ ಹಣವನ್ನು ವಂಚಕರ ಖಾತೆಗೆ ಜಮೆ ಮಾಡಿ ಟಾಸ್ಕ್ ಮಾಡಿದ್ದಾರೆ. ಆಗ ವಂಚಕರು 2800 ರೂಪಾಯಿ ಜಮೆ ಮಾಡಿದ್ದಾರೆ. ಇದು ಶಿಲ್ಪಾ ಅವರಿಗೆ ಖುಷಿ ಕೊಟ್ಟಿದೆ. ಹೀಗಾಗಿ ಮತ್ತೆ ನೀವು ನಾಲ್ಕು ಪ್ರಿಪೇಡ್ ಟಾಸ್ಕ್ ಗಳನ್ನು ಮಾಡಿ ಅಂತ ವಂಚಕರು ದುಂಬಾಲು ಬಿದ್ದಿದ್ದಾರೆ.

ವಂಚಕರ ಮಾತನ್ನು ಕೇಳಿದ್ದ ಶಿಲ್ಪಾ, ಕಳೆದ ಮೇ 5 ರಂದು ಐದು ಸಾವಿರ ಜಮೆ ಮಾಡಿದ್ದಾರೆ. ಮತ್ತೆ ಮತ್ತೆ ನೆಕ್ಟ್ ಪ್ರಿಪೇಡ್ ಟಾಸ್ಕ್ ಗಳನ್ನು ಮಾಡಿ ಅಂತ ದುಂಬಾಲು ಬಿದ್ದಿದ್ದಾರೆ. ಎರಡನೇ ಟಾಸ್ಕ್ ನಲ್ಲಿ ನಲವತ್ತು ಸಾವಿರ,ಮೂರನೇ ಟಾಸ್ಕ್ ನಲ್ಲಿ ತೊಂಬತ್ತು ಸಾವಿರ.ನಾಲ್ಕನೇ ಟಾಸ್ಕ್ ನಲ್ಲಿ ಮೂರು ಲಕ್ಷ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ನಾಲ್ಕು ಟಾಸ್ಕ್ ಗಳು ಮುಗಿದ ಮೇಲೆ ನಿಮಗೆ ಒಟ್ಟು ಏಳು ಲಕ್ಷ ಹಣ ಬರುತ್ತೆ ಅಂತ ವಂಚಕರು ಹೇಳಿದ್ದ ಮಾತನ್ನು ನಂಬಿ ಶಿಲ್ಪಾ ಅವರು ಹಣ ಜಮೆ ಮಾಡಿದ್ದಾರೆ.

ಹಣ ಜಮೆಯಾದ ಮೇಲೆ ಕಳ್ಳಾಟವಾಡಿದ ವಂಚಕರು

ವಂಚಕರು ಹೇಳಿದ ನಾಲ್ಕು ಟಾಸ್ಕ್ ಗಳನ್ನು ಮಾಡಿದ್ದ ಶಿಲ್ಪಾ ಅವರು ನಾಲ್ಕು ಟಾಸ್ಕ್ ಗಳಿಗೆ ಒಟ್ಟು ನಾಲ್ಕು ಲಕ್ಷ ಮೂವತ್ತೈದು ಸಾವಿರ ಜಮೆ ಮಾಡಿದ್ದರು. ನಂತರ ನನ್ನ ಟಾಸ್ಕ್ ಗಳು ಮುಗಿದಿವೆ. ಹೀಗಾಗಿ ತನಗೆ ನೀಡಬೇಕಾದ ಏಳು ಲಕ್ಷ ಹಣವನ್ನು ನೀಡುವಂತೆ ಶಿಲ್ಪಾ ಅವರು ಕೇಳಿದ್ದರು. ಆಗ ವಂಚಕರು ನೀವು ಪೈನಾನ್ಸ್ ಟೀಂಗೆ ಸಂಪರ್ಕ ಮಾಡಿ ಅಂತ ಹೇಳಿದ್ರು. ಪೈನಾನ್ಸ್ ಟೀಂ ಗೆ ಸಂಪರ್ಕ ಮಾಡಿದಾಗ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದೆ. ನಿಮಗೆ ಹಣ ಜಮೆ ಮಾಡಲು ಬರೋದಿಲ್ಲಾ ಅಂತ ವಂಚಕರು ಹೇಳಿದ್ದಾರೆ. ಆಗ ಶಿಲ್ಪಾ ಅವರಿಗೆ ತಾನು ವಂಚನೆಗೊಳಗಾಗಿದ್ದು ಅರಿವಿಗೆ ಬಂದಿದೆ.

ಇದನ್ನೂ ಓದಿ: ಮಹೆಂದ್ರಾ ಥಾರ್​ನಲ್ಲಿ 3 ದೇಶ, 8000 ಕಿ.ಮೀ ಸುತ್ತಾಟ: ಇದು ಕಲಬುರಗಿಯ ವೈದ್ಯನ ಸಾಹಸಮಯ ಟ್ರಿಪ್

ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಾಕ್ಷಿ, ಮೀರಾ ಅನ್ನೋರ ವಿರುದ್ದ ಐಟಿ ಕಾಯ್ದೆ 66 ಸಿ, 66 ಡಿ, ಮತ್ತು ಐಪಿಸಿ ಕಾಯ್ದೆ 419,420 ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೆ ವಂಚಕರು ವಂಚನೆ ಮಾಡಲು ಹತ್ತಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಆದ್ರೆ ಜನರು ವಂಚಕರ ಬಣ್ಣದ ಮಾತುಗಳನ್ನು ನಂಬಿ, ಹಣ ಹಾಕುವ ಮುನ್ನ, ಅವರ ಪೂರ್ವಾಪರಗಳನ್ನು ವಿಚಾರಿಸಿ, ಮುಂದಿನ ಹೆಜ್ಜೆ ಇಡುವದು ಉತ್ತಮ. ಇಲ್ಲದಿದ್ದೆರ ಅನೇಕ ವರ್ಷಗಳ ಕಾಲ ಉಳಿಸಿದ್ದ ಹಣ ಕೆಲವೇ ನಿಮಿಷಗಳಲ್ಲಿ ವಂಚಕರ ಪಾಲಾಗಬಹುದು ಎಚ್ಚರ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Wed, 13 September 23