Smuggling: ಪುರಾತನ ವಿಗ್ರಹ ಜಪಾನ್​ಗೆ ಸಾಗಿಸುವ ಯತ್ನ, 1 ಕೆಜಿ ಚಿನ್ನದ ಬಿಸ್ಕೆಟ್​ಗಳು ವಶಕ್ಕೆ, ಪ್ರಯಾಣಿಕನ ಬಾಯೊಳಗೆ ಚಿನ್ನದ ತುಣುಕುಗಳು!

Smuggling: ಪುರಾತನ ವಿಗ್ರಹ ಜಪಾನ್​ಗೆ ಸಾಗಿಸುವ ಯತ್ನ, 1 ಕೆಜಿ ಚಿನ್ನದ ಬಿಸ್ಕೆಟ್​ಗಳು ವಶಕ್ಕೆ, ಪ್ರಯಾಣಿಕನ ಬಾಯೊಳಗೆ ಚಿನ್ನದ ತುಣುಕುಗಳು!
ಪುರಾತನ ವಿಗ್ರಹ ಜಪಾನ್​ಗೆ ಸಾಗಿಸುವ ಯತ್ನ ವಿಫಲ: ಕೆಂಪೇಗೌಡ ಏರ್​ಪೋರ್ಟ್​ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಪುರಾತನ ಕಾಲದ ಕಲ್ಲಿನ ವಿಗ್ರಹವನ್ನು ಬೆಂಗಳೂರಿನಿಂದ ಜಪಾನ್ ಗೆ ಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಿದ್ದಾರೆ.

TV9kannada Web Team

| Edited By: sadhu srinath

Oct 23, 2021 | 9:52 AM

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಪುರಾತನ ಕಾಲದ ಕಲ್ಲಿನ ವಿಗ್ರಹವನ್ನು ಬೆಂಗಳೂರಿನಿಂದ ಜಪಾನ್ ಗೆ ಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಿದ್ದಾರೆ. ಪುರಾತನ ಕಾಲದ ಕಲ್ಲಿನ ವಿಗ್ರಹವನ್ನು ಏರ್ ಕಾರ್ಗೋ ಮೂಲಕ ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡ್ತಿದ್ದಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ (Kempegowda International Airport-KIA). ಪುರಾತನ ಕಲಾ ಸಂಪತ್ತು ಸಾಗಣೆ ನಿಷೇಧ ಖಾಯ್ದೆಯಡಿ ವಿಗ್ರಹ ವಶ ಪಡಿಸಿಕೊಂಡು, ವಿಗ್ರಹ ರಫ್ತು ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿ, ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ (Cargo Intelligence Unit (CIU) of Bengaluru Customs). ದೆಹಲಿ ಮೂಲದ ರಫ್ತುದಾರ ಮಹಾ ವಿಷ್ಣುವಿನ ಈ ಪುರಾತನ ವಿಗ್ರಹವನ್ನು ಜಪಾನ್​ಗೆ ಅಕ್ರಮ ಸಾಗಣೆ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಮತ್ತೊಂದು ಕಾರ್ಯಾಚರಣೆ 1 ಕೆಜಿ ಚಿನ್ನದ ಬಿಸ್ಕೆಟ್​ಗಳು ವಶಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಗೋಲ್ಡ್ ಬಿಸ್ಕೆಟ್​ಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಚಿನ್ನದ ಬಿಸ್ಕೆಟ್ ಕಳ್ಳಸಾಗಣೆ ಮಾಡ್ತಿದ್ದ ಪ್ರಯಾಣಿಕನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇಂಡಿಗೋ 6E- 096 ವಿಮಾನದಲ್ಲಿ ಬಂದ ವೇಳೆ ಕಳ್ಳಸಾಗಣೆ ಪತ್ತೆಯಾಗಿದೆ. ಪ್ರಯಾಣಿಕನ ಬಳಿಯಿದ್ದ 15 ಚಿನ್ನದ ಚಿಸ್ಕೆಟ್ ಗಳನ್ನು ಕಸ್ಟಮ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. 49.60 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 15 ಗ್ರಾಂ ತೂಕದ ಚಿನ್ನದ ಬಿಸ್ಕೆಟ್​ಗಳು ಇವಾಗಿವೆ.

ಪ್ರಯಾಣಿಕನ ಬಾಯೊಳಗೆ ಚಿನ್ನದ ತುಣುಕುಗಳು! ಏರ್​ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ‌ ಮತ್ತೂ ಒಂದು ಕಾರ್ಯಾಚರಣೆ ನಡೆಸಿದ್ದು ಬಾಯಿಯೊಳಗೆ ಚಿನ್ನದ ತುಣುಕುಗಳನ್ನು ಇಟ್ಟುಕೊಂಡು ಬಂದಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ.

ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ. ಬೆಂಗಳೂರು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಅಕ್ರಮ ಚಿನ್ನ ಸಾಗಾಣಿಕೆ ಪತ್ತೆಯಾಗಿದ್ದು, ಪ್ರಯಾಣಿಕನ ಬಾಯಲ್ಲಿ ಎರಡು ಚಿನ್ನದ ತುಣುಕುಗಳು ಪತ್ತೆಯಾಗಿವೆ.

ಆರೋಪಿ ಚೆನೈ ಮೂಲದ ಪ್ರಯಾಣಿಕ ಎಂದು ತಿಳಿದುಬಂದಿದೆ. ಪ್ರಯಾಣಿಕನ ಬಾಯಲ್ಲಿ 100 ಗ್ರಾಂ ತೂಕದ 4.9 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ನಡೆಸುವ ವೇಳೆ ಮಾತನಾಡಲು ಪ್ರಯಾಣಿಕ ಕಷ್ಟ ಪಡುತ್ತಿದ್ದ, ಈ ಅಸ್ವಾಭಾವಿಕ ನಡತೆಯನ್ನು ಗಮನಿಸಿ ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಣೆ ಪತ್ತೆಯಾಗಿದೆ. ಏರ್​ಪೋರ್ಟ್ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

(old idol smuggling through air cargo shipping to japan busted in Kempegowda International Airport)

Follow us on

Related Stories

Most Read Stories

Click on your DTH Provider to Add TV9 Kannada