ನೆಲಮಂಗಲ: ಪ್ರಿಯಕರನ ಜೊತೆ ಸೇರಿ ಗಂಡನನ್ನು ಅಪಹರಣ (Kidnap) ಮಾಡಿಸಿದ ಹೆಂಡತಿ (Wife) ಹಾಗೂ ಐದು ಜನರಿದ್ದ ಆರೋಪಿಗಳ ಗ್ಯಾಂಗ್ನ್ನು ಪೀಣ್ಯ ಪೊಲೀಸರು (Pinya Police) ಬಂಧಿಸಿದ್ದಾರೆ. ಆಗಸ್ಟ 2ರಂದು ನನ್ನ ಅಣ್ಣ ನವೀನ್ ಕಾಣೆಯಾಗಿದ್ದಾರೆ ಎಂದು ತಂಗಿ ವರಲಕ್ಷ್ಮಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ಆರಂಭಿಸಿದರು. ತನಿಖೆ ವೇಳೆ ಅತ್ತಿಗೆಯ ಮೇಲೆ ನವೀನ್ ತಂಗಿ ವರಲಕ್ಷ್ಮಿ ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಪೊಲೀಸರು ನವೀನ್ ಹೆಂಡತಿ ಅನುಪಲ್ಲವಿ ಫೋನ್ ಟ್ಯ್ರಾಕ್ ಮಾಡಿದ್ದರು. ಟ್ಯ್ರಾಕ್ ಮಾಡಿದಾಗ ನವೀನ್ ಹೆಂಡತಿ ಅನುಪಲ್ಲವಿ, ಉದ್ಯಮಿ ಹಿಮಂತ್ ಎಂಬುವರ ಜೊತೆ ನಿರಂತರ ಸಂಪರ್ಕದಲ್ಲಿದ್ದದ್ದು ತಿಳಿದು ಬಂದಿದೆ.
ಈ ಹಿನ್ನೆಲೆ ಪೀಣ್ಯ ಪೊಲೀಸರು ವಿಚಾರಣೆಗೆಂದು ಹಿಮಂತ್‌ಗೆ ಕರೆ ಮಾಡಿದ್ದರು. ಇದರಿಂದ ಹಿಮಂತ್, ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದು 2ನೇ ತಾರೀಕು ಬಾಗಲಗುಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಡೆದ ಘಟನೆ
ಮುಂದೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೃತ ಹಿಮಂತ್, ಕಿಡ್ನ್ಯಾಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಹಿಮಂತ್ ಹಾಗೂ ಆರೋಪಿ ಅನುಪಲ್ಲವಿ ನಡುವೆ ಅಕ್ರಮ ಸಂಬಂಧವಿತ್ತು ಎಂದು ತಿಳಿದಿದೆ. ಇದರಿಂದ ಅಪರಣ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇವರ ಅಕ್ರಮ ಸಂಬಂಧಕ್ಕೆ ಅನುಪಲ್ಲವಿ ಪತಿ ನವೀನ್ ತೊಡಕಾಗುತ್ತಾನೆ ಎಂದು ತಮಿಳುನಾಡು ಮೂಲದ ನಾಗರಾಜು, ಹರೀಶ್ ಹಾಗೂ ಮುಲಿಗನ್‌ಗೆ ಹಿಮಂತ್ 2 ಲಕ್ಷಕ್ಕೆ ಸುಪಾರಿ ನೀಡಿದ್ದಾನೆ. ಸುಫಾರಿ ಪಡೆದ ಗ್ಯಾಂಗ್ ಜುಲೈ 23 ರಂದು ಕ್ಯಾಬ್ ಬುಕ್ ಮಾಡಿ ನವೀನ್‌ನನ್ನ ಟ್ರಿಪ್ ಹೋಗಲು ಕರೆಸಿಕೊಂಡು, ತಮಿಳುನಾಡಿನ ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು.
ನಂತರ ನವೀನ್‌ನನ್ನ ಕೊಲೆ ಮಾಡಿರುವುದಾಗಿ ಗ್ಯಾಂಗ್ ತಿಳಿಸಿತ್ತು. ಆದರೆ ಕೊಲೆ ಮಾಡದೆ ಹಾಗೆ ಸೆರೆಹಿಡಿದುಕೊಂಡಿದ್ದರು. ಈ ಪ್ರಕರಣದಲ್ಲಿ ಅನುಪಲ್ಲವಿ ಹಾಗೂ ಆಕೆಯ ತಾಯಿ ಅಮ್ಮಾಜಮ್ಮ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನವೀನ್ ಹೆಂಡತಿ ಅನುಪಲ್ಲವಿ, ಅತ್ತೆ ಅಮ್ಮಾಜಮ್ಮ, ಸುಪಾರಿ ಕಿಲ್ಲರ್ಸ್ ಆದ ನಾಗರಾಜು, ಹರೀಶ್, ಮುಗಿಲನ್ರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ
ರಾಮನಗರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಒಡಿಶಾ ಮೂಲದ ಆರೋಪಿ ಬಷ್ನಾ ಕುಮಾರ್ ಚಂದ್ರಕರ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಹಾರೋಹಳ್ಳಿ ಪೊಲೀಸರು 5 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.
ಆರೋಪಿ ಒಡಿಶಾದಿಂದ ಗಾಂಜಾ ತಂದು ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರನಿಗೆ ಕಾರು ಡಿಕ್ಕಿ ಬೈಕ ಸವಾರ ಸ್ಥಳದಲ್ಲೇ ಸಾವು
ಚಿಕ್ಕಬಳ್ಳಾಪುರ: ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬಳಿಕ ಕಾರು ಟಿಪ್ಪರ್ಗೆ ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 44ರ ಚೊಕ್ಕಹಳ್ಳಿ ಗೇಟ್ ಬಳಿ ನಡೆದಿದೆ. ಅವಘಡದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಗಲಗುರ್ಕಿ ನಿವಾಸಿ ನಾರಾಯಣಸ್ವಾಮಿ ಮೃತ ದುರ್ದೈವಿ. ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Fri, 19 August 22