ಅದೊಂದು ಊರ ಹೊರಗಿನಲ್ಲಿದ್ದ ಕಾಲೋನಿಯಲ್ಲಿದ್ದ ಒಂಟಿ ಮನೆ, ಮನೆಯಲ್ಲೂ ಒಂಟಿ ಮಹಿಳೆಯಿದ್ದರು. ಈ ಮಹಿಳೆಯ ಮನಗೆ ಸಂಬಂಧಿಕ ಎಂದು ಹೇಳಿಕೊಂಡು ಬಂದವನು ಮನೆಯಲ್ಲೇ ತಿಂದು ಉಂಡು ಕೊನೆಗೆ ಉಂಡ ಮನೆಗೆ ಎರಡು ಬಗೆದಿದ್ದಾನೆ.
ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸ ಮಾಡುವ ಕೋಲಾರದ ಹೊರವಲಯದ ನಿಸಾರ್ ನಗರ ಮನೆಯೊಂದರಲ್ಲಿ ಯಲ್ಲಪ್ಪ ಮತ್ತು ಪತ್ನಿ ಜಯಮ್ಮ (45) ದಂಪತಿ ವಾಸವವಾಗಿದ್ದರು. ಇದೇ ನವೆಂಬರ್ 1 ರಂದು ಪತಿ ಯಲ್ಲಪ್ಪ ಎಂದಿನಂತೆ ಸ್ಕ್ರಾಪ್ ಲೋಡ್ ಮಾಡುವ ಕೆಲಸಕ್ಕೆ ಹೋಗಿದ್ದನು. ನಂತರ ಮನೆಗೆ ಸಂಬಂಧಿ ಶ್ರೀನಿವಾಸ್ ಎಂಬಾತ ಮನೆಗೆ ಬಂದಿದ್ದಾನೆ. ಜಯಮ್ಮ ಮನೆಯಲ್ಲಿ ಒಬ್ಬಳೇ ಇದ್ದು ಬಂದ ಸಂಬಂಧಿಕರಿಗೆ ಅತಿಥಿ ಸತ್ಕಾರ ಮಾಡಿದ್ದಾಳೆ. ಬಂದ ಅತಿಥಿ ಉಂಡ ಮನೆಗೆ ಎರಡು ಬಗೆಯುವಂತೆ ಒಂಟಿಯಾಗಿದ್ದ ಜಯಮ್ಮಳ ಕತ್ತು ಕೋಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬಳಿಕ ಆರೋಪಿಗಳು ಜಯಮ್ಮಳನ್ನು ಅಡುಗೆ ಮನಯಲ್ಲಿನ ಸಿಂಕ್ಗೆ ಒರಗಿಸಿ ಹೋಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮಧ್ಯಹ್ನ ಪತಿ ಯಲ್ಲಪ್ಪ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆಗೆದಿತ್ತು, ರಕ್ತ ಸಿಂಕ್ನಲ್ಲಿ ನಿಂತಿತ್ತು, ಜೊತೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಅದುಲು ಬದಲಾಗಿ ಹೋಗಿದ್ದವು. ಮನೆಯ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಜಯಮ್ಮ ಮೈಮೇಲಿದ್ದ ಒಡವೆಗಳನ್ನು ದೋಚಲಾಗಿತ್ತು. ಈ ಪರಿಸ್ಥಿತಿಯನ್ನು ಕಂಡು ಗಾಬರಿಗೊಂಡಿದ್ದ ಯಲ್ಲಪ್ಪ ಕೂಡಲೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.
ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಕೆಲವೊಂದು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ದೊರೆತವು. ಈ ದೃಶ್ಯಾವಳಿಗಳ ಮೂಲಕ ಕೊಲೆಯಾದ ಸಂದರ್ಭದಲ್ಲಿ ಯಾರಾದರೂ ಇವರ ಮನೆಯ ರಸ್ತೆಯಲ್ಲಿ ಬಂದು ಹೋಗಿದ್ದಾರೆಯೇ? ಎಂದು ನೋಡಿದಾಗ ಯಲ್ಲಪ್ಪ ಹಾಗೂ ಜಯಮ್ಮ ಅವರ ಮನೆಗೆ ಬಂದು ಹೋಗುತ್ತಿದ್ದ ಇಬ್ಬರಿಗೂ ಸಂಬಂಧಿಕನಾಗಿದ್ದ ಶ್ರೀನಿವಾಸ್ ಎಂಬಾತ ಜಯಮ್ಮ ಕೊಲೆಯಾದ ದಿನ ಮನೆಗೆ ಬಂದು ಹೋಗಿರುವುದು ತಿಳಿಯುತ್ತದೆ. ಈ ವೇಳೆ ಅನುಮಾನಗೊಂಡ ಪೊಲೀಸರು ಆತನನ್ನು ಕರೆಸಿ ವಿಚಾರಣೆ ಮಾಡಲಾಗಿ, ಮೊದಲಿಗೆ ನಾನು ಕೊಲೆ ಮಾಡಿಲ್ಲ ಎಂದಿದ್ದಾನೆ.
ಆದರೆ ಪೊಲೀಸರು ಆತನ ಮನೆಯನ್ನು ತಲಾಶ್ ಮಾಡಿದಾಗ ಕೊಲೆಯಾದ ಜಯಮ್ಮನ ಮೈಮೇಲಿದ್ದ ಒಡವೆಗಳು ಶ್ರೀನಿವಾಸ್ ಮನೆಯಲ್ಲಿ ಸಿಕ್ಕಿವೆ. ಆಗ ಪೊಲೀಸರು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ಶುರುಮಾಡಿದಾಗ ನಡೆದ ವಿಚಾರವನ್ನು ಆರೋಪಿ ಶ್ರೀನಿವಾಸ್ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದು, ಕೊಲೆಯಲ್ಲಿ ಶ್ರೀನಿವಾಸ್ ಜೊತೆಗೆ ಮತ್ಯಾರಾದರೂ ಇದ್ದಾರಾ? ಅನ್ನೋದನ್ನು ವಿಚಾರಣೆ ಮಾಡಲಾಗುತ್ತಿದೆ. ಈವೇಳೆ ಆರೋಪಿ ಶ್ರೀನಿವಾಸ್ ಹಣದ ಅವಶ್ಯಕತೆ ಇದ್ದು ಕೇವಲ ಅವರ ಒಡವೆಗಾಗಿಯೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು ಇದಕ್ಕಾಗಿ ಕಳೆದ ಮೂರು ತಿಂಗಳಿಂದ ಸ್ಕೆಚ್ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ.
ಒಟ್ಟಾರೆ ಕಳೆದ ಮೂರು ತಿಂಗಳಿಂದ ಸಂಬಂಧಿಕ ಪರಿಚಯಸ್ಥ ಎಂದು ಹೇಳಿಕೊಂಡು ಇದೇ ಜಯಮ್ಮ ಹಾಗೂ ಯಲ್ಲಪ್ಪ ಅವರ ಮನೆಯಲ್ಲೇ ತಿಂದು ಉಂಡಿರುವ ಶ್ರೀನಿವಾಸ್ ಕೊನೆಗೆ ಅವರಿಗೇ ಎರಡು ಬಗೆದಿದ್ದಾನೆ.
ವರದಿ- ರಾಜೇಂದ್ರಸಿಂಹ ಟಿವಿ9 ಕೋಲಾರ
Published On - 10:41 pm, Sun, 6 November 22