Crime News: ಪ್ರೀತಿಯ ನಾಯಿಗೆ ಊಟ ಹಾಕದಿದ್ದಕ್ಕೆ ಕಸಿನ್ಗೆ ಹೊಡೆದು ಕೊಂದ ಯುವಕ!
ಹರ್ಷದ್ ಮೈಮೇಲೆ ಆಗಿರುವ ಗಾಯವನ್ನು ನೋಡಿ ಇದು ಯಾರೋ ಹೊಡೆದಿದ್ದರಿಂದ ಆದ ಗಾಯವೆಂದು ವೈದ್ಯರಿಗೆ ಖಚಿತವಾಗಿತ್ತು. ಹೀಗಾಗಿ, ಅನುಮಾನಗೊಂಡ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪಲಕ್ಕಾಡ್: ತಾನು ಪ್ರೀತಿಯಿಂದ ಸಾಕಿದ್ದ ನಾಯಿಗೆ ಊಟ ಹಾಕಿಲ್ಲ ಎಂಬ ಕಾರಣಕ್ಕೆ ಕೇರಳದ ಪಲಕ್ಕಾಡ್‌ನಲ್ಲಿ (Palakkad) 27 ವರ್ಷದ ಯುವಕನೊಬ್ಬ ತನ್ನ 21 ವರ್ಷದ ಸೋದರಸಂಬಂಧಿಯನ್ನು (ಕಸಿನ್) ಹೊಡೆದು, ಕೊಂದಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಅಕ್ಟೋಬರ್ 4ರಂದು ರಾತ್ರಿ ಪಲಕ್ಕಾಡ್ ಜಿಲ್ಲೆಯ ಮುಲಯಂಕಾವು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ತನ್ನ ಕಸಿನ್ ತಾನು ಸಾಕಿದ್ದ ನಾಯಿಗೆ ಊಟ ನೀಡದ ಕಾರಣ ಕೋಪಗೊಂಡ ಆರೋಪಿ ಆತನನ್ನು ಹೊಡೆದು ಕೊಂದಿದ್ದಾನೆ.
ಕೊಲೆಯಾದ ವ್ಯಕ್ತಿಯನ್ನು 21 ವರ್ಷದ ಹರ್ಷದ್ ಎಂದು ಗುರುತಿಸಲಾಗಿದೆ. ಆತನ ಕಸಿನ್ 27 ವರ್ಷದ ಹಕೀಂನನ್ನು ಕೊಪ್ಪಂ ಪೊಲೀಸರು ಬಂಧಿಸಿದ್ದಾರೆ. ಕೋಪದಿಂದ ಹೊಡೆದ ಬಳಿಕ ರಕ್ತದಲ್ಲಿ ಬಿದ್ದು ಒದ್ದಾಡುತ್ತಿದ್ದ ಕಸಿನ್ ಹರ್ಷದ್ನನ್ನು ಕಂಡು ಆತಂಕಗೊಂಡ ಹಕೀಂ ತನ್ನ ಸ್ನೇಹಿತರ ಜತೆ ಸೇರಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆತನಿಗೆ ಏನಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಕೇಳಿದಾಗ ತಮ್ಮ ಮನೆಯ ಟೆರೇಸಿನಿಂದ ಬಿದ್ದು ಆತನಿಗೆ ಗಾಯವಾಗಿದೆ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ: Shocking News: ಕೆಲಸದಿಂದ ತೆಗೆದಿದ್ದಕ್ಕೆ ಕತ್ತು ಸೀಳಿ ದಂಪತಿಯ ಹತ್ಯೆ; ಬೆಡ್ಶೀಟ್ನಡಿ ಅಡಗಿ ಕುಳಿತು ಬಚಾವಾಯ್ತು ಮಗು!
ಆದರೆ, ಹರ್ಷದ್ ಮೈಮೇಲೆ ಆಗಿರುವ ಗಾಯವನ್ನು ನೋಡಿ ಇದು ಯಾರೋ ಹೊಡೆದಿದ್ದರಿಂದ ಆದ ಗಾಯವೆಂದು ವೈದ್ಯರಿಗೆ ಖಚಿತವಾಗಿತ್ತು. ಹೀಗಾಗಿ, ಅನುಮಾನಗೊಂಡ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಹರ್ಷದ್ ಮತ್ತು ಹಕೀಂ ಇಬ್ಬರೂ ಅಕ್ಕ-ತಂಗಿಯ ಮಕ್ಕಳಾಗಿದ್ದು, ಒಟ್ಟಿಗೇ ಕೇಬಲ್ ಕೆಲಸ ಮಾಡುತ್ತಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಗಂಭೀರ ಗಾಯಗಳಾಗಿದ್ದರಿಂದ ಹಾಗೂ ಎಲುಬು ಮುರಿದಿದ್ದರಿಂದ ಹರ್ಷದ್ ಬದುಕುಳಿಯಲಿಲ್ಲ. ಆಸ್ಪತ್ರೆ ವೈದ್ಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಹಕೀಂ ತಾನೇ ತನ್ನ ಕಸಿನ್ಗೆ ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸ್ ವಿಚಾರಣೆ ವೇಳೆ ಶುಕ್ರವಾರ ಹಕೀಂ ತನ್ನ ನಾಯಿಗೆ ಆಹಾರ ನೀಡದಿದ್ದಕ್ಕೆ ಹರ್ಷದ್‌ಗೆ ಥಳಿಸಿರುವುದು ಪತ್ತೆಯಾಗಿದೆ. ಇದರಿಂದ ಕೋಪಗೊಂಡ ಹಕೀಂ ನಾಯಿಯ ಬೆಲ್ಟ್ ಮತ್ತು ಮರದ ಕೋಲಿನಿಂದ ಹಕೀಂನನ್ನು ಥಳಿಸಿದ್ದಾನೆ. ಇದರ ಆಧಾರದ ಮೇಲೆ ಕೊಪ್ಪಂ ಪೊಲೀಸರು ಹಕೀಂನನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.