Shocking News: ಕೆಲಸದಿಂದ ತೆಗೆದಿದ್ದಕ್ಕೆ ಕತ್ತು ಸೀಳಿ ದಂಪತಿಯ ಹತ್ಯೆ; ಬೆಡ್ಶೀಟ್ನಡಿ ಅಡಗಿ ಕುಳಿತು ಬಚಾವಾಯ್ತು ಮಗು!
ಕೊಲೆಯಾದ ದಂಪತಿಯ 2 ವರ್ಷದ ಮಗಳು ಭಯದಿಂದ ಬೆಡ್ಶೀಟ್ ಹೊದ್ದುಕೊಂಡು ರೂಮಿನಲ್ಲಿ ಅಡಗಿ ಕುಳಿತಿದ್ದರಿಂದ ಆಕೆಯೊಬ್ಬಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ತನ್ನ ತಂದೆ-ತಾಯಿಯ ಕೊಲೆಗೆ ಆ ಪುಟ್ಟ ಬಾಲಕಿಯೇ ಪ್ರತ್ಯಕ್ಷ ಸಾಕ್ಷಿ!
ನವದೆಹಲಿ: ತನ್ನನ್ನು ಕೆಲಸದಿಂದ ತೆಗೆದುಹಾಕಿದ ಬಾಸ್ ಬಗ್ಗೆ ಕೋಪಗೊಂಡಿದ್ದ ಮಾಜಿ ಉದ್ಯೋಗಿಯೊಬ್ಬ ತನ್ನ ಬಾಸ್ ಹಾಗೂ ಅವರ ಹೆಂಡತಿಯನ್ನು ಕುಕಿಂಗ್ ಪ್ಯಾನ್‌ನಿಂದ ಹೊಡೆದು, ಕತ್ತು ಸೀಳಿ ಕ್ರೂರವಾಗಿ ಕೊಲೆ (Murder) ಮಾಡಿದ್ದಾನೆ. ದೆಹಲಿಯಲ್ಲಿ ನಡೆದ ಈ ಘಟನೆಯಲ್ಲಿ ಕೊಲೆಯಾದ ದಂಪತಿಯ 2 ವರ್ಷದ ಮಗಳು ಭಯದಿಂದ ಬೆಡ್ಶೀಟ್ ಹೊದ್ದುಕೊಂಡು ರೂಮಿನಲ್ಲಿ ಅಡಗಿ ಕುಳಿತಿದ್ದರಿಂದ ಆಕೆಯೊಬ್ಬಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ತನ್ನ ತಂದೆ-ತಾಯಿಯ ಕೊಲೆಗೆ ಆ ಪುಟ್ಟ ಬಾಲಕಿಯೇ ಪ್ರತ್ಯಕ್ಷ ಸಾಕ್ಷಿ!
ಸಮೀರ್ ಅಹುಜಾ (38), ಅವರ ಪತ್ನಿ ಶಾಲು (35) ಮತ್ತು ಮನೆ ಕೆಲಸಗಾರ್ತಿಯಾದ ಸ್ವಪ್ನಾ (33) ಅವರನ್ನು ಮಂಗಳವಾರ ಬೆಳಿಗ್ಗೆ ಐದಾರು ಜನರು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸಮೀರ್ ಅವರ ಮಾಜಿ ಉದ್ಯೋಗಿ ತನ್ನ ಹಳೆಯ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ತನ್ನ 3-4 ಗೆಳೆಯರ ಜೊತೆ ಸೇರಿ ಈ ಕೊಲೆಗೆ ಪ್ಲಾನ್ ಮಾಡಿರುವುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಕೊಲೆ ಮಾಡಿದ ನಂತರ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲ ಕದ್ದು, ಸಿಸಿಟಿವಿಯನ್ನು ಹಾಳು ಮಾಡಿ ಹೋಗಿದ್ದ ಆ ಕೊಲೆಗಾರರು ಹಣಕ್ಕಾಗಿ ಯಾರೋ ದರೋಡೆ ಮಾಡಿದ್ದಾರೆ ಎಂದು ಪೊಲೀಸರ ದಾರಿ ತಪ್ಪಿಸಲು ಪ್ಲಾನ್ ಮಾಡಿದ್ದರು. ಆದರೆ, ಆ ವೇಳೆ ಅಚ್ಚರಿಯ ರೀತಿಯಲ್ಲಿ ಬಚಾವಾದ ಮಗುವಿನಿಂದ ಅವರ ಕೃತ್ಯದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ಅಹುಜಾ ಅವರು ಗಾರ್ಮೆಂಟ್ಸ್ ವ್ಯಾಪಾರವನ್ನು ನಡೆಸುತ್ತಿದ್ದರು. ಅವರ ಪತ್ನಿ ತಮ್ಮ ಮನೆಯಲ್ಲಿ ಬ್ಯೂಟಿ ಸಲೂನ್ ನಡೆಸುತ್ತಿದ್ದರು. ಸಲೂನ್ ಸ್ವಚ್ಛಗೊಳಿಸಲು ಮತ್ತು ಮನೆಯಲ್ಲಿ ಅಡುಗೆ ಮಾಡಲು ಅವರು ಸ್ವಪ್ನಾ ಎಂಬಾಕೆಯನ್ನು ನೇಮಿಸಿಕೊಂಡಿದ್ದರು. ಕೊಲೆ ಮಾಡಿದ ಪ್ರಮುಖ ಆರೋಪಿ ಅಹುಜಾ ಅವರ ಉದ್ಯೋಗಿಯಾಗಿದ್ದ. ಆದರೆ, ಇತ್ತೀಚೆಗೆ ಆತನನ್ನು ಕೆಲಸದಿಂದ ಕಿತ್ತೊಗೆಯಲಾಗಿತ್ತು. ಅದೇ ದ್ವೇಷದಿಂದ ಆತ ಕೊಲೆಗೆ ಸಂಚು ಮಾಡಿದ್ದ.
ಇದನ್ನೂ ಓದಿ: ಕುರುಬರಹಳ್ಳಿಯಲ್ಲಿ ಕೊಲೆ ಯತ್ನ: ಒಬ್ಬನ ಕೈ ಕಟ್, ನಾಯಿ ಕಚ್ಚಿಕೊಂಡು ಹೋದ ಕೈನ ಹುಡುಕಾಟದಲ್ಲಿ ಪೊಲೀಸರು!
ಆರೋಪಿಗಳು ಮಹಿಳೆಯರ ಕತ್ತು ಸೀಳಿ, ಅಡುಗೆ ಮನೆಯಲ್ಲಿದ್ದ ಬಾಣಲಿಯಿಂದ ಹೊಡೆದು ಕೊಂದಿದ್ದಾರೆ. ಆರೋಪಿಗಳಾದ ಸಚಿನ್ (19) ಮತ್ತು ಸುಜೀತ್ (21) ದ್ವಾರಕಾ ನಿವಾಸಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ. ಉಳದಿವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ 7.55ಕ್ಕೆ ಎರಡು ಬೈಕ್‌ಗಳಲ್ಲಿ ಬಂದ ವ್ಯಕ್ತಿಗಳು ಶಾಲು ಬಳಿ ಸಮೀರ್‌ನನ್ನು ಭೇಟಿಯಾಗಬೇಕೆಂದು ಹೇಳಿದ್ದರು. ಪರಿಚಿತರೇ ಆಗಿದ್ದರಿಂದ ಅವರನ್ನು ಮನೆಯೊಳಗೆ ಕರೆದ ಶಾಲು ತನ್ನ ಗಂಡನನ್ನು ಕರೆಯಲು ಮನೆಯೊಳಗೆ ಹೋಗಿದ್ದರು.
ಆಕೆಯ ಹಿಂದೆಯೇ ಮೇಲಿನ ಮಹಡಿಗೆ ಹೋದ ಆರೋಪಿಗಳು ಸಮೀರ್‌ಗೆ ಪ್ಯಾನ್‌ನಿಂದ ಹೊಡೆದು ಕೊಂದರು. ಬಳಿಕ ಆತನ ಕತ್ತು ಸೀಳಿ, ಆತನ ಹೆಂಡತಿಯ ಕುತ್ತಿಗೆಯನ್ನೂ ಸೀಳಿ ಕೊಂದಿದ್ದಾರೆ. ಅವರು ಕೆಳಗೆ ಬರುತ್ತಿದ್ದಂತೆ ಮನೆ ಕೆಲಸದಾಕೆ ಸ್ವಪ್ನಾ ಟೀ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿ ಆಕೆ ಯಾರಿಗಾದರೂ ತಾವು ಮನೆಗೆ ಬಂದ ವಿಷಯ ಹೇಳಿದರೆ ಕಷ್ಟವೆಂದು ಆಕೆಯ ಕುತ್ತಿಗೆಯನ್ನೂ ಸೀಳಿ ಕೊಲೆ ಮಾಡಿದ್ದಾರೆ. ಆದರೆ, ಅವರು ಬೆಡ್ರೂಂನಲ್ಲಿದ್ದ ಅಹುಜಾ ದಂಪತಿಯ 2 ವರ್ಷದ ಮಗಳನ್ನು ಗಮನಿಸಿರಲಿಲ್ಲ. ಗಲಾಟೆಯಿಂದ ಭಯಗೊಂಡ ಆ ಮಗು ಬೆಡ್ಶೀಟ್ ಹೊದ್ದುಕೊಂಡು ರೂಮಿನಲ್ಲಿ ಬಚ್ಚಿಟ್ಟುಕೊಂಡಿತ್ತು. ಆಕೆಯೊಬ್ಬಳೇ ಇಡೀ ಮನೆಯಲ್ಲಿ ಬದುಕುಳಿದವಳು.
ಮಂಗಳವಾರ ಬೆಳಗ್ಗೆ 9 ಗಂಟೆಗೆ ಅಹುಜಾ ಅವರ ಕಾರು ಚಾಲಕ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಮನೆ ಕೆಲಸದಾಕೆ ಸ್ವಪ್ನಾ ರಕ್ತದ ನಡುವೆ ಬಿದ್ದಿದ್ದನ್ನು ನೋಡಿ ಗಾಬರಿಯಾದ ಆತ ಮೇಲಿನ ಮಹಡಿಗೆ ಹೋದಾಗ ಅಲ್ಲಿ ಅಹುಜಾ ಹಾಗೂ ಅವರ ಹೆಂಡತಿಯ ಮೃತದೇಹ ಕಂಡು ಜೋರಾಗಿ ಕಿರುಚುತ್ತಾ ಹೊರಗೆ ಓಡಿಬಂದಿದ್ದಾನೆ. ತಕ್ಷಣ ಅಕ್ಕಪಕ್ಕದ ಮನೆಯವರು ಬಂದು ನೋಡಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮನೆಯ ಬಾಗಿಲನ್ನು ಒಡೆಯದೆ ಇದ್ದುದನ್ನು ನೋಡಿದ ಪೊಲೀಸರು ಇದು ಯಾರೋ ಪರಿಚಿತರೇ ಮಾಡಿರುವ ಕೃತ್ಯವೆಂದು ತೀರ್ಮಾನಕ್ಕೆ ಬಂದಿದ್ದರು. ಆ ಮನೆಯ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಅಹುಜಾ ಅವರ ಮಾಜಿ ಉದ್ಯೋಗಿ ಬೈಕ್ನಲ್ಲಿ ಬಂದು ಆ ಮನೆಯೊಳಗೆ ಹೋಗಿದ್ದು ಗೊತ್ತಾಗಿತ್ತು. ಅಲ್ಲದೆ, ಆ ಮನೆಯಲ್ಲಿದ್ದ 2 ವರ್ಷದ ಮಗುವಿನ ಬಳಿ ಕೇಳಿದಾಗ ಆಕೆ ತನ್ನ ಅಪ್ಪನನ್ನು ಕೊಂದ ವಿಷಯವನ್ನು ಹೇಳಿದ್ದಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 am, Wed, 2 November 22