Lookout Notice: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳ ಬಂಧನಕ್ಕೆ ಲುಕ್ಔಟ್ ನೊಟೀಸ್ ಹೊರಡಿಸಿದ ಎನ್ಐಎ, ಸುಳಿವು ಕೊಟ್ಟವರಿಗೆ ಬಹುಮಾನ
ನಾಲ್ವರು ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿಗಾಗಿ ಒಟ್ಟು ₹ 14 ಲಕ್ಷ ನಗದು ಬಹುಮಾನ ನೀಡುವಾಗಿ ಎನ್ಐಎ ಘೋಷಿಸಿದೆ.
ದೆಹಲಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ (Praveen Nettar Murder) ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳವು (National Investigative Agency – NIA) ಲುಕ್ಔಟ್ ನೊಟೀಸ್ ಜಾರಿ ಮಾಡಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ನಾಲ್ವರು ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿಗಾಗಿ ಒಟ್ಟು ₹ 14 ಲಕ್ಷ ನಗದು ಬಹುಮಾನ ನೀಡುವಾಗಿ ಎನ್ಐಎ ಘೋಷಿಸಿದೆ. ಮೊಹಮ್ಮದ್ ಮುಸ್ತಫಾ ಮತ್ತು ತುಫೈಲ್ ಬಗ್ಗೆ ಮಾಹಿತಿ ನೀಡಿದರೆ ₹ 5 ಲಕ್ಷ, ಇಬ್ಬರು ಆರೋಪಿಗಳಾದ ಉಮರ್ ಫಾರೂಕ್ ಹಾಗೂ ಅಬೂಬಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದರೆ ₹ 2 ಲಕ್ಷ ನಗದು ಬಹುಮಾನ ನೀಡುವಾಗಿ ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ಬೆಳ್ಳಾರೆಯಲ್ಲಿರುವ ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದು ಇಡೀ ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಕಿಚ್ಚು ಹೊತ್ತಿಸಿತ್ತು. ಸ್ಥಳಕ್ಕೆ ಬಂದಿದ್ದ ಸಚಿವ ವಿ.ಸುನಿಲ್ ಕುಮಾರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರು ತಡೆದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರವೀಣ್ ನೆಟ್ಟಾರು ಪತ್ನಿಗೆ ನೌಕರಿ
ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಎಂ. ಅವರಿಗೆ ಗುತ್ತಿಗೆ ಆಧಾರಿತ ಹಿರಿಯ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಜನಸ್ಪಂದನ ಸಮಾವೇಶದಲ್ಲಿ ನೇಮಕಾತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಅದರಂತೆ ಸಿ ಗ್ರೂಪ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಿತ್ತು.
ಪ್ರವೀಣ್ ನೆಟ್ಟಾರು ಹತ್ಯೆಗೂ ಪಿಎಫ್ಐ ನಿಷೇಧಕ್ಕೂ ಇದೆ ನಂಟು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India – PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿ ಸೆಪ್ಟೆಂಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣ ಪ್ರಸ್ತಾಪವಾಗಿತ್ತು. ಪಿಎಫ್ಐ ನಿಷೇಧಕ್ಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕ ಸರ್ಕಾರದ ಶಿಫಾರಸನ್ನೂ ಉಲ್ಲೇಖಿಸಿತ್ತು.
ಸಂಜಿತ್ (ಕೇರಳ 2021), ವಿ.ರಾಮಲಿಂಗಮ್ (ತಮಿಳುನಾಡು 2019), ನಂದು (ಕೇರಳ 2021), ಅಭಿಮನ್ಯು (ಕೇರಳ 2018), ಬಿಬಿನ್ (ಕೇರಳ 2017), ಶರತ್ (ಕರ್ನಾಟಕ 2017), ಆರ್.ರುದ್ರೇಶ್ (ಕರ್ನಾಟಕ 2016), ಪ್ರವೀಣ್ ಪೂಜಾರಿ (ಕರ್ನಾಟಕ 2016), ಶಶಿ ಕುಮಾರ (ತಮಿಳುನಾಡು 2016) ಮತ್ತು ಪ್ರವೀಣ್ ನೆಟ್ಟಾರು (ಕರ್ನಾಟಕ 2022) ಅವರ ಕೊಲೆ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಪಿಎಫ್ಐ ಭಾಗಿಯಾಗಿದೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವುದು ಹಾಗೂ ಭಯ ಹೆಚ್ಚಿಸುವ ಉದ್ದೇಶವನ್ನು ಪಿಎಫ್ಐ ಹೊಂದಿದೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ಹೇಳಿತ್ತು.