ಬೆಳಗಾವಿ: ಪುಂಡರ ಗೂಂಡಾಗಿರಿಯಿಂದ ಬೀದಿಗೆ ಬಿದ್ದ ವಿಕಲಚೇತನ ವ್ಯಕ್ತಿಯ ಕುಟುಂಬ
ಪುಂಡರ ಗೂಂಡಾಗಿರಿಯಿಂದ ವಿಕಲಚೇತನ ಕುಟುಂಬವೊಂದು ಬೀದಿಗೆ ಬಿದ್ದಿದೆ. ಗುಂಪೊಂದು ಜಾಗದ ವಿಚಾರವಾಗಿ ಸಿದ್ದಪ್ಪ ಅಪ್ಪಯ್ಯ ತುರಬಿ ಮನೆಯನ್ನು ಕೆಡವಿ ಪುಂಡಾಟ ಮೆರೆದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಜೀವ ಭಯದಲ್ಲಿ ಸಿದ್ದಪ್ಪ ಕುಟುಂಬ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದೆ.
ಬೆಳಗಾವಿ, ಡಿ.11: ಪುಂಡರ ಗೂಂಡಾಗಿರಿಯಿಂದ ವಿಕಲಚೇತನ ವ್ಯಕ್ತಿಯ ಕುಟುಂಬವೊಂದು ಬೀದಿಗೆ ಬಿದ್ದ ಘಟನೆ ಜಿಲ್ಲೆಯ (Belagavi) ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಜಾಗದ ವಿಚಾರಕ್ಕೆ ಗುಂಪೊಂದು ವಿಕಲಚೇತನ ಸಿದ್ದಪ್ಪ ಅಪ್ಪಯ್ಯ ತುರಬಿ ಅವರ ಮನೆಯನ್ನು ಕೆಡವಿ ಹಾಕಿದ್ದು, ಕುಲಗೋಡ ಪೊಲೀಸ್ ಠಾಣೆಯಲ್ಲಿ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಜಾಗ ನಮ್ಮದು ಎಂದು ಪದೇ ಪದೇ ತಗಾದೆ ತೆಗೆಯುತ್ತಿದ್ದ ಲಕ್ಷ್ಮಣ್ ತುರಬಿ, ವಿಕಲಚೇತನ ಸಿದ್ದಪ್ಪ ಅಪ್ಪಯ್ಯ ತುರಬಿ ಕುಟುಂಬದೊಂದಿಗೆ ಹಲವು ಬಾರಿ ಗಲಾಟೆ ನಡೆಸಿದ್ದನು. ಅಲ್ಲದೆ, ಮನೆ ಜಾಗಕ್ಕಾಗಿ ಎರಡೂ ಕುಟುಂಬಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಕೋರ್ಟ್ನಲ್ಲಿ ಪ್ರಕರಣ ಇರುವಾಗಲೇ 15 ಜನರು ಸಿದ್ದಪ್ಪ ಅವರ ಮನೆಯನ್ನು ಧ್ವಂಸ ಮಾಡಿದ್ದಾರೆ.
ಇದನ್ನೂ ಓದಿ: Belagavi Session: ಬೆಳಗಾವಿ ಅಧಿವೇಶನದ ವೇಳೆ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ; ಅಥಣಿ ಬಂದ್
ಸಿದ್ದಪ್ಪ ಕುಟುಂಬ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿದ್ದಾಗ ಲಕ್ಷ್ಮಣ್ ತುರಬಿ ತನ್ನ 15 ಸಹಚರರನ್ನು ಕರೆದುಕೊಂಡು ಹೋಗಿ ಮನೆ ಧ್ವಂಸ ಮಾಡಿದ್ದು, ಮನೆಯಲ್ಲಿದ್ದ ದಿನಸಿ, ಪಾತ್ರೆ ಸೇರಿದಂತೆ ಎಲ್ಲಾ ವಸ್ತುಗಳು ಜಖಂಗೊಳಿಸಿದ್ದಾರೆ. ಮನಡೆಯ ಮೇಲ್ಚಾವಣಿ ಸೇರಿದಂತೆ ಎಲ್ಲವನ್ನೂ ಹಾಳು ಮಾಡಿದ್ದಾರೆ.
ಲಕ್ಷ್ಮಣ್ ತುರಬಿ ಮತ್ತು ಸಹಚರರ ಅಟ್ಟಹಾಸಕ್ಕೆ ಸಿದ್ದಪ್ಪ ಕುಟುಂಬ ಮನೆ ಇಲ್ಲದೇ ಬೀದಿಗೆ ಬಿದ್ದಿದೆ. ಜೀವ ಭಯದಲ್ಲಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ. ಅಲ್ಲದೆ, ಮನೆ ಕೆಡವಿದ ಪ್ರಕರಣ ಸಂಬಂಧ ಸ್ಥಳಕ್ಕೆ ಆಗಮಿಸಿದ ಕುಲಗೋಡ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ