ಬೆಂಗಳೂರು: ಲಾಡ್ಜ್ನಲ್ಲಿ ಮಹಿಳೆಯನ್ನು ಕೊಂದಿದ್ದ ಆರೋಪಿಯನ್ನು (Murder) ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅನ್ಮೋಲ್ ಎಂದು ಗುರುತಿಸಲಾಗಿದೆ. ಇದೇ ತಿಂಗಳ 9ರಂದು ಯಶವಂತಪುರದ ಲಾಡ್ಜ್ನಲ್ಲಿ ದೀಪಾ ಎಂಬಾಕೆಯ ಕೊಲೆಯಾಗಿತ್ತು. ಆಕೆಯೊಂದಿಗೆ ಅನ್ಮೋಲ್ ಸಂಬಂಧ ಇರಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ದೀಪಾ ಇತರರೊಂದಿಗೆ ಸಂಬಂಧ ಇರಿಸಿಕೊಂಡಿರುವ ಬಂದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ವಿರುದ್ಧ ಹರಿಹಾಯ್ದ ವಕೀಲ
ಮಂಡ್ಯ: ಮಹಿಳಾ ಸಿಬ್ಬಂದಿ ಇಲ್ಲದ ಪೊಲೀಸ್ ಠಾಣೆಗೆ ಯುವತಿಯನ್ನು ಕರೆಸಿದ್ದು ಸರಿಯಲ್ಲ ಎಂದು ವಕೀಲರೊಬ್ಬರು ಪೊಲೀಸರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಿಡ್ಲಘಟ್ಟ ಮೂಲದ ಶೋಭಾ ಎಂಬಾಕೆಯನ್ನು ಮಂಡ್ಯದ ಬಲ್ಲೇಶ ಪ್ರೀತಿಸಿ, ಜೂನ್ 9ರಂದು ರಿಜಿಸ್ಟರ್ ಮದುವೆಯಾಗಿದ್ದ. ಆದರೆ ಮಗಳ ಅಪಹರಣವಾಗಿದೆ ಎಂದು ಯುವತಿಯ ಪೋಷಕರು ದೂರು ನೀಡಿದ್ದರು. ದೂರು ದಾಖಲಾದ ನಂತರ ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದ ಶಿಡ್ಲಘಟ್ಟ ಪೊಲೀಸರು ನಸುಕಿನ 3.30ರಲ್ಲಿ ಮಂಡ್ಯ ಗ್ರಾಮಾಂತರ ಠಾಣೆಗೆ ಕರೆತಂದಿದ್ದರು. ಬೆಳಿಗ್ಗೆ ಠಾಣೆಗೆ ಬಂದ ಯುವತಿ ಪರ ವಕೀಲ ಮಹಿಳಾ ಸಿಬ್ಬಂದಿ ಇಲ್ಲದ ಠಾಣೆಗೆ ಯುವತಿಯನ್ನು ಕರೆತಂದ ಕ್ರಮದ ಬಗ್ಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಹಾಗೂ ವಕೀಲರ ನಡುವಿನ ಮಾತಿನ ಜಟಾಪಟಿಯ ವಿಡಿಯೊ ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿದೆ.
ಮಂಡ್ಯದ ಚೀರನಹಳ್ಳಿಯಲ್ಲಿ ಈ ಜೋಡಿ ವಾಸವಿತ್ತು. ಮದುವೆ ವಿಚಾರ ತಿಳಿದು ಶೋಭಾಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಮಂಡ್ಯಕ್ಕೆ ಬಂದಿದ್ದ ಶಿಡ್ಲಘಟ್ಟ ಪೊಲೀಸರು, ರಾತ್ರೋರಾತ್ರಿ ಚೀರನಹಳ್ಳಿಯ ಮನೆಗೆ ನುಗ್ಗಿ ಯುವತಿಯನ್ನು ಠಾಣೆಗೆ ಕರೆತಂದಿದ್ದರು. ಮಹಿಳಾ ಸಿಬ್ಬಂದಿಯಿಲ್ಲದೆ ಏಕಾಏಕಿ ಮನೆಗೆ ನುಗ್ಗಿದ್ದನ್ನು ಯುವತಿ ಪರ ವಕೀಲರು ಆಕ್ಷೇಪಿಸಿದರು. ಪೊಲೀಸ್ ಠಾಣೆ ಎದುರು ಪೊಲೀಸ್ ಸಿಬ್ಬಂದಿ ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಯುವತಿಯ ವಿಚಾರಣೆ ನಡೆಸಿದ ಪೊಲೀಸರು, ಆಕೆಯನ್ನು ಮನೆಗೆ ಕಳಿಸಿದರು.
ಕಾರ್-ಬೈಕ್ ಮುಖಾಮುಖಿ: ಸವಾರ ಸ್ಥಳದಲ್ಲೇ ಸಾವು
ಕುಣಿಗಲ್: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾಯ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಗವಿಮಠದ ಬಳಿ ನಡೆದಿದೆ. ಮೃತನನ್ನು ಮಹದೇವ (29) ಎಂದು ಗುರುತಿಸಲಾಗಿದೆ. ಕುಣಿಗಲ್ ಕಡೆಯಿಂದ ಹಳೇವೂರು ಕಡೆಹೊಗುತ್ತಿದ್ದ ಬೈಕ್ಗೆ ಮದ್ದೂರಿನಿಂದ ಬರುತ್ತಿದ್ದ ಲಾರಿ ಮುಖಾಮುಖಿಯಾಗಿತ್ತು. ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಮಹದೇವ ಸ್ಥಳದಲ್ಲೇ ಮೃತಪಟ್ಟರು. ಸೋಲೂರಿನ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಕುಣಿಗಲ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಾಸ್ತಿ ಠಾಣೆ ಕಾನ್ಸ್ಟೆಬಲ್ ಅಮಾನತು
ಕೋಲಾರ: ಮಾಸ್ತಿ ಠಾಣೆಯ ಕಾನ್ಸ್ಟೇಬಲ್ ಬಿ.ವಿ.ರಮೇಶ್ ಅವರನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅಮಾನತು ಮಾಡಿದ್ದಾರೆ. ಮಾಲೂರು, ಮಾಸ್ತಿ ಠಾಣೆ ಸಿಬ್ಬಂದಿಯಾದ ವೆಂಕಟರಾಮಯ್ಯ, ವೆಂಕಟೇಶಪ್ಪ, ನಾಗೇಂದ್ರ ವಿರುದ್ಧ ರಮೇಶ್ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಮರಳು ಮಾಫಿಯಾ, ಜೂಜಾಟ ಸೇರಿದಂತೆ ಹಲವು ದಂಧೆಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ, ದುರ್ನಡತೆ ಕಾರಣ ನೀಡಿ ಅಮಾನತು ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಅಣ್ಣ-ತಮ್ಮಂದಿರ ಕುಸ್ತಿ
ಶ್ರೀರಂಗಪಟ್ಟಣ: ಸರ್ಕಾರಿ ಆಸ್ಪತ್ರೆಯಲ್ಲಿ ಅಣ್ಣ-ತಮ್ಮಂದಿರ ಜಂಗಿ ಕುಸ್ತಿಗೆ ರೋಗಿಗಳು ಸಾಕ್ಷಿಯಾದರು. ಜಮೀನು ವ್ಯಾಜ್ಯ ಸಂಬಂಧ ಕಿತ್ತಾಡಿಕೊಂಡಿದ್ದ ಅಣ್ಣ-ತಮ್ಮಂದಿರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದವರ ಯೋಗಕ್ಷೇಮ ವಿಚಾರಿಸಲು ಬಂದಿದ್ದ ಮಕ್ಕಳು, ಪರಸ್ಪರ ಹೊಡೆದಾಟಕ್ಕಿಳಿದರು. ಗಲಾಟೆ ಬಳಿಕ ಎರಡೂ ಕುಟುಂಬಗಳು ರಾಜಿಯಾಗಿವೆ. ಯಾರೊಬ್ಬರೂ ಪೊಲೀಸರಿಗೆ ದೂರು ಕೊಟ್ಟಿಲ್ಲ.
ರೋಗಿಗೆ ವ್ಹೀಲ್ ಛೇರ್ ನೀಡದ ಮಿಮ್ಸ್ ಸಿಬ್ಬಂದಿ
ಮಂಡ್ಯ: ರೋಗಿಗೆ ವ್ಹೀಲ್ ಚೇರ್ ನೀಡದ ಮಂಡ್ಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗಳನ್ನು ರಾಮನಗರ ಮೂಲದ ತಂದೆಯೊಬ್ಬರು ಮಿಮ್ಸ್ಗೆ ಕರೆ ತಂದಿದ್ದರು. ಕಳೆದ ಭಾನುವಾರ ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಕೆಟ್ಟಿರುವ ಹಿನ್ನೆಲೆಯಲ್ಲಿ ಹೊರಗೆ ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಲಾಗಿತ್ತು. ಈ ವೇಳೆ ಬಾಲಕಿಗೆ ವ್ಹೀಲ್ ಚೇರ್ ನೀಡದ ಕಾರಣ, ಮಗಳನ್ನು ಕೈಲಿ ಹೊತ್ತುಕೊಂಡೇ ಆಕೆಯ ತಂದೆ ಸುಮಾರು ಒಂದು ಕಿಲೊಮೀಟರ್ನಷ್ಟು ಸಂಚರಿಸಬೇಕಾಯಿತು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Tue, 14 June 22