ಬೆಂಗಳೂರು: ಕಳ್ಳನ ಹಿಡಿಯಲು ಹೊದ ಪೊಲೀಸ್ ಪೇದೆ ಮೇಲೆ, ಕಳ್ಳ ಹಾಗೂ ಆತನ ಕುಟುಂಬದಿಂದ ಚಾಕು, ದೊಣ್ಣೆಯಿಂದ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಮಂಜುನಾಥ್ ಹಲ್ಲೆಗೊಳಗಾದ ಪೊಲೀಸ್ ಪೇದೆಯಾಗಿದ್ದಾರೆ. ತಡರಾತ್ರಿ ಪೇದೆ ಮಂಜುನಾಥ್ ಮನೆಗಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ನವೀನ್ ಎಂಬ ಆರೋಪಿಯನ್ನು ಹಿಡಿಯಲು ತೆರಳಿದ್ದರು. ಈ ವೇಳೆ ಪೇದೆ ಕೈಗೆ ಸಿಕ್ಕ ನವೀನ್ ಕೈಗೆ ಮಂಜುನಾಥ್ ಬೇಡಿ ಹಾಕಿದ್ದರು. ಈ ವೇಳೆ ನವೀನ್ನನ್ನು ಕರೆದೊಯ್ಯಲು ಮುಂದಾದಾಗ ಪೇದೆ ಮಂಜುನಾಥ್ ಮೇಲೆ ಆರೋಪಿ ನವೀನ್ ತಾಯಿ ಹಾಗೂ ಸಹೋದರ ಮುರುಗೇಶ್ ದೊಣ್ಣೆಯಿಂದ ತಲೆಗೆ ಹಲ್ಲೆ ಮಾಡಿದ್ದಾರೆ.
ಕುತ್ತಿಗೆ, ಕಿವಿ, ತಲೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ..
ಈ ವೇಳೆ ತಪ್ಪಿಸಿಕೊಂಡ ಆರೋಪಿ ನವೀನ್, ಪೇದೆ ಮೇಲೆ ಚಾಕುವಿನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಬಳಿಕ ಆರೋಪಿ ನವೀನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಪೇದೆ ಮಂಜುನಾಥ್ಗೆ ಕುತ್ತಿಗೆ, ಕಿವಿ, ತಲೆ ಭಾಗದಲ್ಲಿ ಚಾಕು ಇರಿದಿರುವುದರಿಂದ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಪೇದೆ ಜೊತೆ ಬಂದಿದ್ದ ವ್ಯಕ್ತಿಯಿಂದ ಪೇದೆ ಮಂಜುನಾಥ್ನನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಘಟನೆ ಸಂಬಂಧ ಹಲ್ಲೆ ಮಾಡಿದ ನರಸಮ್ಮ ಹಾಗೂ ಮುರುಗೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧನವಾಗಬೇಕಾಗಿದ್ದ ಆರೋಪಿ ನವೀನ್ ಪರಾರಿಯಾಗಿದ್ದು, ಆರೋಪಿ ನವೀನ್ಗಾಗಿ ಪೊಲೀಸರಿಂದ ತಲಾಶ್ ಶುರುವಾಗಿದೆ.