PSI Recruitment Scam: ಎಡಿಜಿಪಿ ಅಮ್ರಿತ್ ಪಾಲ್ಗೆ 5 ಕೋಟಿ, ಅವ್ಯವಹಾರದ ಮಹತ್ವದ ಮಾಹಿತಿ ಸಿಐಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖ
545 ಪಿಎಸ್ಐ ಅಕ್ರಮ ಪರೀಕ್ಷಾ ನೇಮಕಾತಿಯಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಸಿಐಡಿ ದಾಖಲಿಸಿದ್ದ ಚಾರ್ಜ್ಶೀಟ್ ಪ್ರತಿ ಟಿವಿ9ಗೆ ಲಭ್ಯವಾಗಿದೆ. ಪಿಎಸ್ಐ ಅಕ್ರಮ ಪರೀಕ್ಷಾ ಒಳ ಸಂಚಿನ ಹಣದ ವರ್ಗಾವಣೆ, ಸಂಗ್ರಹದ ಕುರಿತು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು: 545 ಪಿಎಸ್ಐ ನೇಮಕಾತಿಯಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಅಕ್ರಮದಲ್ಲಿ ಹತ್ತಾರು ಆರೋಪಿಗಳು ಸಿಲುಕಿ ಬಂಧನದಲ್ಲಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿವ ಸಿಐಡಿ, ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದೆ. ಇದರ ಪ್ರತಿ ಟಿವಿ9ಗೆ ಲಭ್ಯವಾಗಿದ್ದು, ಪಿಎಸ್ಐ ಅಕ್ರಮ ಪರೀಕ್ಷಾ ಒಳ ಸಂಚಿನ ಹಣದ ವರ್ಗಾವಣೆ, ಸಂಗ್ರಹದ ಕುರಿತು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿರುವ ಎಡಿಜಿಪಿ ಅಮ್ರಿತ್ ಪಾಲ್ ಕೃತ್ಯದಲ್ಲಿ ಭಾಗಿಯಾಗಿರುವ ನೇಮಕಾತಿ ವಿಭಾಗದ ಸಿಬ್ಬಂದಿಗಳ ಕರ್ತವ್ಯ ಹಂಚಿಕೆ ಮಾಡಿದ್ದಾರೆ. ಅದರಂತೆ ಡಿವೈಎಸ್ಪಿ ಶಾಂತಕುಮಾರ್, ಪಿಎ ಡಿ.ಸಿ.ಶೀನಿವಾಸ್, ಎಹೆಎಚ್ಸಿ ಶ್ರೀಧರ್, ಎಫ್ಡಿಎ ಹರ್ಷಾಗೆ ಮೌಖಿಕವಾಗಿ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. ಆ ಮೂಲಕ ಅಪರಾಧಿಕ ಒಳ ಸಂಚು ರೂಪಿಸಿ ಅನರ್ಹ ಅಭ್ಯರ್ಥಿಗಳನ್ನ ಅರ್ಹರನ್ನಾಗಿಸಿ ನೇಮಿಸಲು ಯತ್ನಿಸಲಾಗಿದೆ. ಹಣದಾಸೆಗೆ ಅಕ್ರಮ ಕೂಟ ರಚಿಸಿಕೊಂಡು ಕುಕೃತ್ಯ ಎಸಗಿರುವ ಆರೋಪಿಗಳು, ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ, ಉಳಿದಂತೆ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಡುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.
ಅಭ್ಯರ್ಥಿಗಳಿಂದ ತಲಾ 30 ಲಕ್ಷ ಹಣ ಸಂಗ್ರಹ
ಪಿಎಸ್ಐ ಅಕ್ರಮ ನೇಮಕಾತಿ ಹಣ ಸಂಗ್ರಹದ ಹೊಣೆಯನ್ನು ಡಿವೈಎಸ್ಪಿ ಶಾಂತಕುಮಾರ್ ಹೊತ್ತಿದ್ದರು. ಇವರು ನೇಮಕಾತಿ ವಿಭಾಗದಲ್ಲಿ 12 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ. 545 ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಆರೋಪಿ ಎಡಿಜಿಪಿ ಅಮ್ರಿತ್ ಪಾಲ್ 5 ಕೋಟಿ ಹಣ ನೀಡಿ ಉಳಿದ ಹಣವನ್ನು ಹಂಚಿಕೊಳ್ಳಲು ಸೂಚಿಸಿದ್ದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಅಭ್ಯರ್ಥಿಗಳೊಂದಿಗೆ ಡೀಲ್ ಕುದುರಿಸಿ ಕರೆತರುವ ಕೆಲಸವನ್ನು ಎಫ್ಡಿಎ ಹರ್ಷಾ ಅವರು ಮಾಡುತ್ತಿದ್ದರು.
ಅಭ್ಯರ್ಥಿಗಳು ಮತ್ತು ಮಧ್ಯವರ್ತಿಗಳಿಂದ ಸಂಗ್ರಹಿಸಿದ್ದ ಹಣವನ್ನು 2021 ರ ಅಕ್ಟೋಬರ್ 1 ರಂದು ಎಫ್ಡಿಎ ಹರ್ಷ ಅವರಿಂದ ಡಿವೈಎಸ್ಪಿ ಶಾಂತಕುಮಾರ್ಗೆ ವರ್ಗಾವಣೆ ಮಾಡಲಾಗಿದೆ. ಹಡ್ಸನ್ ಸರ್ಕಲ್ನ ಕೃಷಿ ಭವನ ಬಳಿ 1 ಕೋಟಿ 35 ಲಕ್ಷ ನೀಡಿದ್ದಾಗಿ ಸ್ವ ಇಚ್ಚಾ ಹೇಳಿಕೆಯನ್ನು ಕೂಡ ದಾಖಲಿಸಲಾಗಿದೆ. ಅದೇ ದಿನ ಎಡಿಜಿಪಿ ಅಮ್ರಿತ್ ಪಾಲ್ಗೂ ಹಣ ವರ್ಗಾವಣೆಯಾಗಿದ್ದು, ಸಿಐಡಿ ಕಚೇರಿ ಸಮೀಪದ ಕೋಡಿಮುನೇಶ್ವರ ದೇವಾಲಯ ಬಳಿ ಹಣ ವರ್ಗಾವಣೆ ಮಾಡಲಾಗಿದೆ. ಅಕ್ಟೋಬರ್ 1ರ ಮಧ್ಯಹ್ನ 3.30ಕ್ಕೆ ಕಾರು ನಿಲ್ಲಿಸಿ ಶಾಂತಕುಮಾರ್ ಅವರಿಂದ ಅಮ್ರಿತ್ ಪಾಲ್ ಅವರು ಹಣ ಪಡೆದಿದ್ದಾರೆ.
ಸಾಕ್ಷಿ ಸಿಗದಂತೆ ಮಾಡಿದ್ದ ಆರೋಪಿಗಳ ತಂಡ
ಅಕ್ರಮ ಪರೀಕ್ಷಾ ನೇಮಕಾತಿ ಕುಕೃತ್ಯ ಸಾಕ್ಷಿ ಸಿಗದಂತೆ ಮಾಡಲು ಆರೋಪಿಗಳ ತಂಡ ಪಕ್ಕಾ ಯೋಜನೆಯನ್ನು ರೂಪಿಸಿದ್ದರು. ಅಭ್ಯರ್ಥಿಗಳು ಪರೀಕ್ಷೆ ವೇಳೆ ಬಳಸಿದ್ದ ಪೆನ್ಗಳನ್ನೇ ಓಎಂಆರ್ ತಿದ್ದಲು ಪಡೆದುಕೊಂಡಿದ್ದಾರೆ. ಪ್ಯಾಲೇಸ್ ರಸ್ತೆಯ ಕಾರಗಲ್ ಟನ್ ಭವನದ ಸಿಐಡಿ ಕಚೇರಿ ಆವರಣದ ಸೆಲ್ಲರ್ನಲ್ಲಿ 2021 ರ ಅಕ್ಟೋಬರ್ 7 ಮತ್ತು 8 ಮತ್ತು 16 ರಂದು ಸ್ಟ್ರಾಂಗ್ ರೂಂನಲ್ಲಿನ ಓಎಂಆರ್ ಶೀಟ್ಗಳನ್ನು ಭರ್ತಿ ಮಾಡಲಾಗಿದೆ. ಕಚೇರಿ ಸಿಬ್ದಂದಿ ಬರುವ ಮುನ್ನ ಅಂದರೆ ಬೆಳಗ್ಗೆ 6:30 ರಿಂದ 9:30 ರ ವೇಳೆಗೆ ಕುಕೃತ್ಯ ನಡೆಸಿದ್ದಾರೆ. ಸಾಕ್ಷ್ಯ ನಾಶಪಡಿಸಲು ಕುಕೃತ್ಯ ಎಸಗಿದ ದಿನಗಳ ಸಿಸಿ ಕ್ಯಾಮಾರ ಸ್ವಿಚ್ ಆಫ್ ಮಾಡಿದ್ದಾರೆ. ಈ ಬಗ್ಗೆ ಎಎಚ್ಸಿ ಶ್ರೀಧರ್ ನೀಡಿದ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ