ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿ 22 ವರ್ಷದ ಯುವಕನೊಬ್ಬ ತನ್ನನ್ನು ಮದುವೆಯಾಗುವುದಿಲ್ಲ ಎಂದ 21 ವರ್ಷದ ಯುವತಿಯ ಕತ್ತು ಸೀಳಿ, ಆಕೆಯ ಹೊಟ್ಟೆಗೆ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಭಯಾನಕ ಕೃತ್ಯಕ್ಕೆ ಪುಣೆ ಬೆಚ್ಚಿಬಿದ್ದಿದೆ. ಕೊಲೆ ಮಾಡಿದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಯುವಕನನ್ನು 12 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ನನಗೆ ಸಿಗದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಎಂದು ಈ ಕೃತ್ಯ ಎಸಗಿದ್ದಾಗಿ ಆತ ಹೇಳಿದ್ದಾನೆ.
ಮಹಾಲುಂಗೆ ಎಂಐಡಿಸಿ ಪೊಲೀಸ್ ವ್ಯಾಪ್ತಿಯ ಪುಣೆ ನಗರದ ಅಂಬೇಥಾನ್ ಗ್ರಾಮದಲ್ಲಿ ಸಂತ್ರಸ್ತೆಯ ಬಾಡಿಗೆ ನಿವಾಸದ ಬಳಿ ಭಾನುವಾರ (ಜುಲೈ 28) ತಡರಾತ್ರಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಪುಣೆ ಗ್ರಾಮಾಂತರ ಪೊಲೀಸರ ಅಪರಾಧ ವಿಭಾಗದ ಘಟಕವು ಪುಣೆಯಲ್ಲಿ 21 ವರ್ಷದ ಪ್ರಾಚಿ ಮಾನೆ ಹತ್ಯೆಗೆ ಸಂಬಂಧಿಸಿದಂತೆ ಅವಿರಾಜ್ ಖಾರತ್ ಎಂಬಾತನನ್ನು ಬಂಧಿಸಿದೆ. ಪಿಂಪ್ರಿ ಚಿಂಚ್‌ವಾಡ್‌ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಖಾರತ್‌ನ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರು. ಅದೇ ಕಾರಣಕ್ಕೆ ಕೊಲೆ ಮಾಡಲಾಗಿದೆ.
ಇದನ್ನೂ ಓದಿ: Viral Video: ಮಹಿಳೆಯನ್ನು ಹತ್ಯೆಗೈದು ಮೃತದೇಹ ಗಂಗಾ ನದಿಗೆ ಎಸೆದ ದುಷ್ಕರ್ಮಿಗಳು; ವಿಡಿಯೋ ಇಲ್ಲಿದೆ ನೋಡಿ
ಪುಣೆ-ಬೆಂಗಳೂರು ಹೆದ್ದಾರಿಯ ಕರಡ್ ಬಳಿ ಈ ಘಟನೆ ನಡೆದ 12 ಗಂಟೆಗಳಲ್ಲಿ ಪಿಂಪ್ರಿ ಚಿಂಚ್‌ವಾಡ್ ಅಪರಾಧ ವಿಭಾಗದ ತಂಡ ಆತನನ್ನು ಬಂಧಿಸಿದೆ. ಯುವತಿ ಮತ್ತು ಯುವಕ ಇಬ್ಬರೂ ಸಾಂಗ್ಲಿಯವರಾಗಿದ್ದು, ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್‌ನಲ್ಲಿ ಸಹಪಾಠಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಯುವತಿ ಸಾಂಗ್ಲಿ ಜಿಲ್ಲೆಯ ವಾಲ್ವಾ ತಹಸಿಲ್‌ನವರಾಗಿದ್ದು, ಆಕೆಯ ಪೋಷಕರು ಅವರ ಸಂಬಂಧವನ್ನು ವಿರೋಧಿಸಿದ್ದರು. ಹೀಗಾಗಿ, ಆಕೆ ಆತನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದರು.
ಏನಿದು ಘಟನೆ?:
ಜುಲೈ 28 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಖಾರತ್ ತಮ್ಮ ಕೋಣೆಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದ. ಆದರೆ ಅವರನ್ನು ತಡೆದಿದ್ದೆವು ಎಂದು ಕೊಲೆಯಾದ ಯುವತಿಯ ರೂಮ್‌ಮೇಟ್ ಪೊಲೀಸರಿಗೆ ತಿಳಿಸಿದ್ದಾಳೆ. ನಂತರ ಆತ ಕೊಲೆಯಾದ ಯುವತಿಯ ಮೊಬೈಲ್ ಕಸಿದುಕೊಂಡು ಮಾತನಾಡಲು ಹೊರಗೆ ಬರುವಂತೆ ಹೇಳಿದ್ದಾನೆ. ಹೊರಗೆ ಹೋದ ಆಕೆಯನ್ನು ಕೆಲವು ಮೀಟರ್ ದೂರದ ಸ್ಥಳಕ್ಕೆ ಕರೆದೊಯ್ದು ಮಾತನಾಡಿದ್ದಾನೆ. ಅವಳ ರೂಮ್‌ಮೇಟ್ ಮತ್ತು ಇತರರು ಮನೆಯ ಹೊರಗೆ ಕಾಯುತ್ತಿದ್ದರು. ಎಷ್ಟು ಹೊತ್ತಾದರೂ ಆಕೆ ಬಾರದೆ ಇದ್ದಾಗ ನೋಡಲು ಹೋದಾಗ ಖಾರತ್ ಓಡಿಹೋಗುತ್ತಿರುವುದನ್ನು ಕಂಡು ರೂಮ್‌ಮೇಟ್‌ಗೆ ಅನುಮಾನ ಬಂದಿದೆ. ಕೂಡಲೇ ಸ್ಥಳಕ್ಕೆ ತೆರಳಿ ನೋಡಿದಾಗ ಆ ಯುವತಿ ರಕ್ತದ ಮಡುವಿನಲ್ಲಿ ಕತ್ತು ಸೀಳಿ ಹೊಟ್ಟೆಯಲ್ಲಿ ಇರಿತದಿಂದ ಬಿದ್ದಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಅಕ್ಕನಿಗೆ ಕಿರುಕುಳ ಕೊಟ್ಟ ಭಾವನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ
ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಖಾರತ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ