ರಾಮನಗರ, ಫೆ.17: ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ದ್ಯಾವಸಂದ್ರದ ಮನೆಯಲ್ಲಿ ನೇಣು (Hanging) ಬಿಗಿದ ಸ್ಥಿತಿಯಲ್ಲಿ ಮಹಿಳಾ ಕಾನ್ಸ್‌ಟೇಬಲ್ ಶವ (Dead Body) ಪತ್ತೆಯಾಗಿದೆ. ಮಂಜುಶ್ರೀ (27) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020-21ರಿಂದ ಪೊಲೀಸ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಂಜುಶ್ರೀ ಬೆಂಗಳೂರಿನ ಮೈಕೋ ಲೇಔಟ್ನಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಶಿವಾಜಿನಗರಕ್ಕೆ ನಿಯೋಜನೆ ಆಗಿದ್ದರು. ಕೆಲ ದಿನಗಳಿಂದ ಕೆಲಸಕ್ಕೆ ರಜೆ ಹಾಕಿದ್ದ ಮಂಜುಶ್ರೀ ನಿನ್ನೆ ರಾತ್ರಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವ ರವಾನಿಸಲಾಗಿದೆ. ಹಾರೋಹಳ್ಳಿಯ ದಯಾನಂದ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಇನ್ನು ಮತ್ತೊಂದೆಡೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೊನ್ನಟಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲಿಂಗಸೂಗೂರು ಮೂಲದ ಮಹಿಳೆ ದೇವಮ್ಮ(35) ಮೃತ ದುರ್ದೈವಿ. ಗ್ರಾಮದ ಬಸನಗೌಡ ಮಾಲಿ ಪಾಟೀಲ್ ಅನ್ನೋರ ಜಮೀನು ಕೆಲಸಕ್ಕೆ ಬಂದಿದ್ದ ಮಹಿಳೆ, ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಮತ್ತೊಬ್ಬ ಮಹಿಳೆ ದುರ್ಗಮ್ಮ ಅನ್ನೋರ ಜೊತೆ ಜಗಳವಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಮೀನಿನಲ್ಲಿ ಇದ್ದ ಬಾವಿಗೆ ಹಾರಿ ದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನ ಶೆಡ್ ನಲ್ಲಿ ಮೂವರು ಮಕ್ಕಳನ್ನ ಬಿಟ್ಟು ಬಳಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು: ಮಹಿಳಾ ಪೊಲೀಸ್ ಮೊಬೈಲ್ ಕಳ್ಳನ ಹಿಡಿದ ಪ್ರಕರಣಕ್ಕೆ ಟ್ವಿಸ್ಟ್, ಘಟನೆ ಹಿಂದಿದೆ ಪ್ರೇಮ್ ಕಹಾನಿ!
ಪರೀಕ್ಷೆ ಭೀತಿಯಿಂದ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಮಣಿಪಾಲ ಮಾಹೆ ವಿವಿಯಲ್ಲಿ ನಡೆದಿದೆ. ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಸತ್ಯಂ ಸುಮನ್(19) ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಬರಿಯಿಂದ ವಿದ್ಯಾರ್ಥಿಗಳು ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ತಾಲೂಕಿನ ನೆಲ್ಲೋಗಲ್ಲ ತಾಂಡಾದಲ್ಲಿ ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ತಮ್ಮನಿಗೆ ಚೂರಿ ಇರಿದು ಅಣ್ಣ ಕೊಲೆಗೈದ ಘಟನೆ ನಡೆದಿದೆ. ತನ್ನ ಹೆಂಡತಿ ಜೊತೆಯೇ ತಮ್ಮ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಿಂದ ತಮ್ಮನ ಎದೆಗೆ ಚೂರಿ ಹಾಕಿ ಕೊಲೆ ಮಾಡಿಲಾಗಿದೆ. ತಮ್ಮ ಹನುಮಂತಪ್ಪ ಲಮಾಣಿ (42) ಕೊಲೆಯಾದ ಮೃತ ದುರ್ದೈವಿ. ಶಂಕ್ರಪ್ಪ ಲಮಾಣಿ(55) ತಮ್ಮನಿಗೆ ಚೂರಿ ಇರಿದು ಕೊಲೆಗೈದ ಅಣ್ಣ.
ಆರೋಪಿ ಶಂಕ್ರಪ್ಪ ಕುಡಿದು ಬಂದು ಮನೆಯಲ್ಲಿ ಜಗಳಮಾಡುತ್ತಿದ್ದ ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ತಮ್ಮ ಹನುಮಂತಪ್ಪನಿಗೆ ಚೂರಿ ಇರಿದಿದ್ದಾನೆ. ಚಿಕಿತ್ಸೆ ಫಲಿಸದೆ ಸರ್ಕಾರಿ ಆಸ್ಪತ್ರೆಯಲ್ಲಿ ಹನುಮಂತಪ್ಪ ಲಮಾಣಿ ಮೃತಪಟ್ಟಿದ್ದಾರೆ. ತಮ್ಮನನ್ನು ಕೊಲೆಗೈದ ಅಣ್ಣ ಶಂಕ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ