ಬೆಂಗಳೂರು: ಮಹಿಳಾ ಪೊಲೀಸ್ ಮೊಬೈಲ್ ಕಳ್ಳನ ಹಿಡಿದ ಪ್ರಕರಣಕ್ಕೆ ಟ್ವಿಸ್ಟ್, ಘಟನೆ ಹಿಂದಿದೆ ಪ್ರೇಮ್ ಕಹಾನಿ!
ಮೊಬೈಲ್ ಕಳ್ಳತನ ಪ್ರಕರಣ ಎಂದುಕೊಂಡಿದ್ದ ಘಟನೆಯೊಂದು ಈ ರೀತಿಯ ತಿರುವು ಪಡೆದುಕೊಳ್ಳಬಹುದು ಎಂದು ಬಹುಶಃ ಪೊಲೀಸರೂ ಎಣಿಸಿರಲಿಕ್ಕಿಲ್ಲ. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಷ್ ಫಾರ್ಮಸಿ ಜಂಕ್ಷನ್ನಲ್ಲಿ ನಡೆದ ಘಟನೆಯೊಂದು ಈಗ ಆ ತರದ ತಿರುವು ಪಡೆದುಕೊಂಡಿದೆ. ಅಷ್ಟಕ್ಕೂ ಆ ಘಟನೆ ಹಿಂದೆ ಒಂದು ಲವ್ ಸ್ಟೋರಿ ಇದೆ. ಅದೇನೆಂಬ ವಿವರ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 17: ಮೊಬೈಲ್ ಕದ್ದುಕೊಂಡು ಓಡುತ್ತಿದ್ದ ಎನ್ನಲಾದ ಯುವಕನೊಬ್ಬನನ್ನು (Mobile Phone Thief) ಮಹಿಳಾ ಪೊಲೀಸ್ ಕಾನ್ಸ್ಟೇಬಲ್ (Women Police Constable) ಒಬ್ಬರು ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ವಿಷಯ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ (Bengaluru) ಗಮನ ಸೆಳೆದಿತ್ತು. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಷ್ ಫಾರ್ಮಸಿ ಜಂಕ್ಷನ್ನಲ್ಲಿ ನಡೆದ ಘಟನೆ ಇದೀಗ ಟ್ವಿಸ್ಟ್ ಪಡೆದಿದೆ. ಅಸಲಿಗೆ ಅಲ್ಲಿ ಮೊಬೈಲ್ ಕಿತ್ತುಕೊಂಡು ಓಡಿದ್ದು ಕಳ್ಳನಲ್ಲ. ಘಟನೆ ಹಿಂದೆ ಪ್ರೇಮ ಪ್ರಕರಣವಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ.
ಫೆಬ್ರವರಿ 13 ರ ಸಂಜೆ 5.15 ಕ್ಕೆ ಮೊಬೈಲ್ ಕಸಿದು ಓಡಿ ಹೋಗುತ್ತಿದ್ದವನನ್ನು ಮಹಿಳಾ ಕಾನ್ಸ್ಟೇಬಲ್ ಚೇಸ್ ಮಾಡಿ ಹಿಡಿದಿದ್ದರು. ಆತನನ್ನು ಮೊಬೈಲ್ ಕದ್ದು ಪರಾರಿ ಆಗುತ್ತಿದ್ದಾನೆ ಎಂದು ಆರೋಪಿಸಲಾಗಿತ್ತು. ಆದರೆ, ಅಶೋಕನಗರ ಪೊಲೀಸರ ವಿಚಾರಣೆ ವೇಳೆ ಅಸಲಿ ಸತ್ಯ ಬಯಲಿಗೆ ಬಂದಿದೆ.
ಅಸಲಿಗೆ ನಡೆದಿದ್ದೇನು?
ರಾಯಚೂರು ಮೂಲದ ಒಬ್ಬ ಯುವಕ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆಕೆ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದಳು. ಆಕೆಗೆ ಸರ್ಪ್ರೈಸ್ ನೀಡಲು ಯುವಕ ಊರಿನಿಂದ ಆಗಮಿಸಿದ್ದ. ಆದರೆ, ಕಾಲೇಜು ಬಳಿ ಬಂದಾಗ ಆತನಿಗೆ ಶಾಕ್ ಕಾದಿತ್ತು. ಪ್ರೇಯಸಿ ಮತ್ತೋರ್ವ ಸ್ನೇಹಿತನ ಜೊತೆಗೆ ಮಾತನಾಡುತ್ತಾ ನಿಂತಿದ್ದಳು. ಇದೇ ವೇಳೆ, ಆತ ಯಾರು ಎಂದು ಯುವಕ ಪ್ರಿಯತಮೆ ಬಳಿ ಪ್ರಶ್ನಿಸಿದ್ದಾನೆ. ಆತ ಸ್ನೇಹಿತ ಅಷ್ಟೇ ಎಂದು ಆಕೆ ಉತ್ತರಿಸಿದ್ದಾಳೆ. ‘ಹಾಗಾದರೆ ನಿನ್ನ ಮೊಬೈಲ್ ಕೊಡು’ ಎಂದು ಪ್ರಿಯತಮೆಯ ಸ್ನೇಹಿತನನ್ನು ಯುವಕ ಕೇಳಿದ್ದ. ಅಷ್ಟೇ ಅಲ್ಲದೆ, ‘ನನ್ನ ಸ್ನೇಹಿತೆಗೆ ಏನು ಮೆಸೇಜ್ ಮಾಡಿದ್ದೀ ಎಂಬುದನ್ನು ನೋಡಬೇಕು’ ಎಂದಿದ್ದಾನೆ.
ಇದನ್ನೂ ಓದಿ: ಸುಳ್ಳು ದೂರು ಕೊಟ್ಟ ಮಾಜಿ ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಕ್ರಮಕ್ಕೆ ಮುಂದಾದ ಬೆಂಗಳೂರು ಪೊಲೀಸರು
ಯುವಕ ಮೊಬೈಲ್ ಕೈಗೆ ತೆಗೆದುಕೊಳ್ಳುತ್ತಿದ್ದಂತೆಯೇ ಯುವತಿಯ ಸ್ನೇಹಿತ ‘ಕಳ್ಳ ಕಳ್ಳ’ ಎಂದು ಕಿರುಚಾಡಿದ್ದ. ಆಗ ಯುವತಿ ಸಹ ಜೋರಾಗಿ ಕಿರುಚಿಕೊಂಡಿದ್ದಳು. ಗಾಬರಿಗೊಂಡು ರಾಯಚೂರು ಮೂಲದ ಯುವಕ ಮೊಬೈಲ್ ಜೊತೆಗೆ ಓಡಿ ಹೋಗಲು ಆರಂಭಿಸಿದ್ದ. ತಕ್ಷಣ ಯುವತಿಯ ಕಾಲೇಜು ಸ್ನೇಹಿತ ಆತನ ಹಿಂದ ಓಡಲು ಆರಂಭಿಸಿದ್ದ. ಇವರಿಬ್ಬರನ್ನು ನೋಡಿದ ಮಹಿಳಾ ಕಾನ್ಸ್ಟೇಬಲ್ ಯುವಕನನ್ನು ಬೆನ್ನಟ್ಟಿದ್ದರು. ನಂತರ ಯುವಕನನ್ನು ಹಿಡಿದು ಆಶೋಕನಗರ ಪೊಲೀಸರಿಗೆ ಒಪ್ಪಿಸಲಾಗಿತ್ತು.
ಇದೀಗ ಆಶೋಕನಗರ ಪೊಲೀಸರ ವಿಚಾರಣೆ ವೇಳೆ ಅಸಲಿ ಸತ್ಯ ಬಯಲಿಗೆ ಬಂದಿದೆ. ಮೊಬೈಲ್ ಕಳ್ಳತನ ಪ್ರಕರಣ ಹೋಗಿ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ