Ramanagara News: ಅಕ್ರಮ ಸಂಬಂಧದ ಆರೋಪ; ರಾಮನಗರದಲ್ಲಿ ಯುವಕನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ
ಶನಿವಾರ ಬೆಳಿಗ್ಗೆ ಆರ್‌ಆರ್‌ನಗರದ ಕಾಲೇಜಿಗೆ ಹಾಜರಾಗಿ ಹಿಂತಿರುಗುತ್ತಿದ್ದಾಗ ಶಶಾಂಕನನ್ನು ಆತನ ಚಿಕ್ಕಪ್ಪ ಮನು ಮತ್ತು ಇತರ ಕೆಲವರು ಅಪಹರಿಸಿದ್ದಾರೆ. ನಂತರ ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿಯ ಖಾಲಿ ಪ್ರದೇಶಕ್ಕೆ ಕರೆದೊಯ್ದು, ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಬೆಂಗಳೂರು, ಜುಲೈ 17: ಸಂಬಂಧಿಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನನ್ನು ಆತನ ಚಿಕ್ಕಪ್ಪ ಹಾಗೂ ಇತರರು ಅಪಹರಿಸಿ ಬೆಂಕಿ ಹಚ್ಚಿದ ಘಟನೆ ರಾಮನಗರ (Ramanagara) ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಶಶಾಂಕ ಎಂಬ 18 ವರ್ಷದ ಯುವಕ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ಬೆಳಿಗ್ಗೆ ಆರ್‌ಆರ್‌ನಗರದ ಕಾಲೇಜಿಗೆ ಹಾಜರಾಗಿ ಹಿಂತಿರುಗುತ್ತಿದ್ದಾಗ ಶಶಾಂಕನನ್ನು ಆತನ ಚಿಕ್ಕಪ್ಪ ಮನು ಮತ್ತು ಇತರ ಕೆಲವರು ಅಪಹರಿಸಿದ್ದಾರೆ. ನಂತರ ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿಯ ಖಾಲಿ ಪ್ರದೇಶಕ್ಕೆ ಕರೆದೊಯ್ದು, ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಶಶಾಂಕ ಮೈಗೆ ಕೆಸರು ಉಜ್ಜಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅವರು ಸ್ನೇಹಿತರ ಜೊತೆ ಸೇರಿ ಶಶಾಂಕ್ನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಶಶಾಂಕನಿಗೆ ಸಂಬಂಧವಿತ್ತು ಎನ್ನಲಾದ ಹುಡುಗಿ ಆತನ ದೂರದ ಸಂಬಂಧಿ ಮತ್ತು ಹತ್ಯೆ ಯತ್ನ ನಡೆಸಿದ ಮನುವಿಗೂ ಸಂಬಂಧಿ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.
ಇದನ್ನೂ ಓದಿ: ಧಾರವಾಡ: ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಇರಿದ ತಂದೆ
ಘಟನೆಗೆ ಸಂಬಂಧಿಸಿ ಕುಂಬಳಗೋಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮನು ಮತ್ತು ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 (ಕಾನೂನುಬಾಹಿರ ಕೃತ್ಯ), 363 (ಅಪಹರಣ), 323 (ಕಾರಣವಿಲ್ಲದೆ ತೊಂದರೆ ನೀಡುವುದು), 307 ಮತ್ತು 149ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ