ಶಿವಮೊಗ್ಗ: ಗೃಹಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆಯಾಗಿರುವ ಶಿವಮೊಗ್ಗದಲ್ಲಿ ನಿನ್ನೆ (ಅ.24) ರಾತ್ರಿ ಸಮಯದಲ್ಲಿ ಒಟ್ಟು ಮೂರು ಅಪರಾಧ ಕೃತ್ಯಗಳು ನಡೆದಿದ್ದು, ಶಾಂತವಾಗಿದ್ದ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಎಸ್ಪಿ ಮೀಥುನ್, ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಪ್ರಕಾಶ್ ಎಂಬ ಯುವಕನ ಮೇಲೆ ಹಲ್ಲೆ ಮತ್ತು ಹರ್ಷ ಮನೆ ಸಮೀಪ ಅವಾಚ್ಯ ಶಬ್ದದಿಂದ ಬೈದ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದೇವೆ. ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದೆ. ಸ್ಥಳದಲ್ಲಿ ಕೆಎಸ್ಆರ್ಪಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವುದು, ಭಯಭೀತರಾಗುವುದು ಬೇಡ. ನಗರದಲ್ಲಿ ನಾಳೆಯಿಂದಲೇ ಚೆಕ್ಪೋಸ್ಟ್ ತೆರೆಯುತ್ತೇವೆ. ತ್ರಿಬಲ್ ರೈಡ್ ಹೋಗುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ನಿನ್ನೆ ತಡರಾತ್ರಿ ಯುವಕನೊಬ್ಬನ ಹತ್ಯೆಯೂ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಮಿಥುನ್, ನಗರದಲ್ಲಿ ತಡರಾತ್ರಿ ಒಟ್ಟು ಮೂರು ಪ್ರಕರಣ ನಡೆದಿವೆ. ಮೂರೂ ಪ್ರಕರಣಗಳೂ ಬೇರೆ ಬೇರೆಯಾಗಿವೆ ಎಂದರು.
ಹರ್ಷನ ಹಂತಕರನ್ನು ಎನ್‌ಕೌಂಟರ್ ಮಾಡಿದ್ದಿದ್ದರೆ ಹೀಗಾಗುತ್ತಿರಲಿಲ್ಲ
ಕುಟುಂಬಸ್ಥರಿಗೆ ಬೆದರಿಕೆ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಮೃತ ಹರ್ಷನ ಸಹೋದರಿ ಅಶ್ವಿನಿ, ನಿನ್ನೆ ಕೆಲವರು ನಮ್ಮ ಮನೆ ಬಳಿ ಬಂದು ನಿಮ್ಮನ್ನ ಬಿಡಲ್ಲ ಎಂದು ಧಮ್ಕಿ ಹಾಕಿ ಹೋಗಿದ್ದಾರೆ. ನಾವು ಜೈ ಶ್ರೀರಾಮ್ ಅನ್ನೋದು ಬೇಡ ಅಂದರೆ ಹೇಗೆ? ನಮ್ಮ ಮಕ್ಕಳು ಹೊರಗಡೆ ಓಡಾಡುವುದು ಬೇಡವಾ? ನಮ್ಮ ಮಕ್ಕಳನ್ನು ಮನೆ ಒಳಗಿಟ್ಟುಕೊಂಡೆ ಊಟ ಹಾಕಬೇಕಾ ನನ್ನ ತಮ್ಮ ಹರ್ಷನನ್ನ ಬಲಿ ಪಡೆದರು, ಇನ್ನೂ ಬಲಿ ಬೇಕಾ? ರಾಜಾರೋಷವಾಗಿ ಬಂದು ಧಮ್ಕಿ ಹಾಕುತ್ತಾರೆ ಅಂದರೆ ಹೇಗೆ? ಹರ್ಷ ಹಂತಕರನ್ನ ಎನ್‌ಕೌಂಟರ್ ಮಾಡಿದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ನಮಗೆ ಭದ್ರತೆ ಕಲ್ಪಿಸಿ ಎಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ ಎಂದರು.
ನಾಳೆ ನನಗೆ ಬಂದು ಚುಚ್ಚಿ ಹೋಗುತ್ತಾರೆ, ಬಳಿಕ ಸಾಂತ್ವಾನ ಹೇಳಿದರೆ ಏನು ಪ್ರಯೋಜನ?
ಹರ್ಷ ಕೊಲೆ ಪ್ರಕರಣದಲ್ಲಿ ಒಬ್ಬರಿಗೆ ಜಾಮೀನು ಸಿಕ್ಕಿದೆ. ಇದರ ಬಳಿಕ ಈ ಘಟನೆ ನಡೆದಿದೆ. ಅವರಿಗೆ ಭಯ ಎನ್ನುವುದೇ ಇಲ್ಲದಂತಾಗಿದೆ. ನಾಳೆ ನನಗೆ ಬಂದು ಚುಚ್ಚಿ ಹೋಗುತ್ತಾರೆ. ಬಳಿಕ ಎಲ್ಲರೂ ನನ್ನ ತಾಯಿಗೆ ಸಾಂತ್ವನ ಹೇಳುತ್ತಾರೆ. ಇದರಿಂದ ಏನು ಪ್ರಯೋಜನ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಮಗೆ ದೇವರು ಇದ್ದಹಾಗೆ. ಪ್ರಕರಣವನ್ನು ಎನ್ಐಎ ತನಿಖೆಗೆ ಕೊಟ್ಟು ದೊಡ್ಡ ಸಹಾಯ ಮಾಡಿದ್ದಾರೆ. ಸೀಗೆಹಟ್ಟಿ ತುಂಬಾ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಹೆಚ್ಚು ಬಂದೋಬಸ್ತ್ ಅಗತ್ಯ ಇದೆ ಎಂದು ಅಶ್ವಿನಿ ಹೇಳಿದರು.
ಹರ್ಷಗೆ ಏನು ಮಾಡಿದ್ದೇವೋ ಅದನ್ನೇ ಮಾಡುತ್ತೇವೆ ಎಂಬ ಬೆದರಿಕೆ
ಅನ್ಯಕೋಮಿನ ವ್ಯಕ್ತಿಗಳು ಮನೆಗೆ ಬಂದು ಜೀವ ಬೆದರಿಕೆ ಹಾಕಿದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಕೊಲೆಯಾದ ಹರ್ಷನ ತಾಯಿ ಪದ್ಮಾ, ರಾತ್ರಿ 11.15ರ ಸುಮಾರಿಗೆ ಬೈಕ್ನಲ್ಲಿ ಬಂದು ಮಹಿಳೆಯರ ಮೇಲೆ ಹಲ್ಲೆ ಮಾಡಿ ಹರ್ಷಗೆ ಏನು ಮಾಡಿದ್ದೇವೋ ಅದನ್ನೇ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ. ನಮ್ಮ ಮನೆ ಬಳಿ ನಿಲ್ಲಿಸಿದ್ದ ಬೈಕ್ಗೆ ದುಷ್ಕರ್ಮಿಗಳು ಒದ್ದಿದ್ದಾರೆ. ಭರಮಪ್ಪ ನಗರದಲ್ಲಿ ಯುವಕನೋರ್ವನಿಗೆ ಹಲ್ಲೆ ಮಾಡಿದ್ದಾರೆ. ಸೀಗೆಹಳ್ಳಿ ಅಷ್ಟೇ ಅಲ್ಲ, ನಾಲ್ಕೈದು ಕಡೆಗಳಲ್ಲಿ ಗಲಾಟೆ ಮಾಡಿದ್ದಾರೆ. ನಮ್ಮ ಮೇಲೆ ನಮಗೆ ಭಯ ಶುರುವಾಗಿದೆ. ಕೂಡಲೇ ಪೊಲೀಸರು ಕ್ರಮಕ್ಕೆ ಮುಂದಾಗಬೇಕು. ಶಿವಮೊಗ್ಗದಲ್ಲಿ ಶಾಂತಿ ಕಾಪಾಡಬೇಕೆಂದು ಮನವಿ ಮಾಡುತ್ತೇನೆ ಎಂದರು.
ಮಗನನ್ನು ಕಳೆದುಕೊಂಡ ನೋವು ಇನ್ನೂ ಹಾಗೆ ಇದೆ. ಆ ನರಕ ಯಾರಿಗೂ ಬೇಡ. ಇನ್ನೂ ಹರ್ಷ ಮನೆಗೆ ವಾಪಸ್ ಬರುತ್ತಾನೆ ಎನ್ನುವ ಸ್ಥಿತಿಯಲ್ಲಿ ಇದ್ದೇವೆ. ಈ ನಡುವೆ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. 10 ಜನರು ಸೇರಿ ಒಬ್ಬರ ಮೇಲೆ ಪಾಪಿಗಳಿಂದ ದಾಳಿ ನಡೆಸಲಾಗಿದೆ. ನಿನ್ನೆ ರಾತ್ರಿ ಎಸ್ಪಿ ಬಂದು ಹೋಗಿದ್ದಾರೆ. ಸರಿಯಾಗಿ ಪೊಲೀಸರು ಕ್ರಮ ವಹಿಸಬೇಕು ಎಂದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Tue, 25 October 22