ದಿಯೋಘರ್: ತಾಯಿಯ ಮುಂದೆಯೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ (Rape) ನಡೆಸಿರುವ ಅಮಾನವೀಯ ಘಟನೆ ಜಾರ್ಖಂಡ್‌ನ (Jharkhand Crime News) ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಎದುರೇ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ದಿಯೋಘರ್ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದುಮ್ಕಾ ಜಿಲ್ಲೆಯ ನಿವಾಸಿಗಳಾದ ಬಾಲಕಿ ಮತ್ತು ಆಕೆಯ ತಾಯಿ ಭಾನುವಾರ ದಿಯೋಘರ್‌ನಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಮಧುಪುರ್ ಬಳಿ ಅಪರಿಚಿತರು ಅಡ್ಡಗಟ್ಟಿದ್ದರು.
ಆ ವೇಳೆ ಆ ಐವರು ಅಪರಿಚಿತರು ಆ ಮಹಿಳೆಯ ಎದುರಲ್ಲೇ ಅವರ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣದ 5 ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ: ನಾಲ್ವರು ಅಪರಿಚಿತರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲು
ದೂರಿನ ಪ್ರಕಾರ, ಎರಡು ಬೈಕ್ಗಳಲ್ಲಿ ಬಂದ 5 ಜನರು ತಾಯಿ- ಮಗಳ ದಾರಿ ತಪ್ಪಿಸಿದರು. ನಂತರ ಅವರ ಮಗಳನ್ನು ಬಲವಂತವಾಗಿ ಪಕ್ಕಕ್ಕೆ ಕರೆದೊಯ್ದರು. ಅವರನ್ನು ಆ ಬಾಲಕಿಯ ತಾಯಿ ತಡೆಯಲು ಮುಂದಾದಾಗ ಆಕೆಯನ್ನು ಥಳಿಸಿ ನಂತರ ಆಕೆಯ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ದಿಯೋಘರ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಸುಭಾಷ್ ಚಂದ್ರ ಜಾಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಸಿಕ್ಕ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಉಳಿದ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.