Shocking News: ಬೆಳ್ಳಿ ಗೆಜ್ಜೆಗಾಗಿ 108 ವರ್ಷದ ವೃದ್ಧೆಯ ಕಾಲುಗಳನ್ನೇ ಕತ್ತರಿಸಿದ ಕಳ್ಳರು!

| Updated By: ಸುಷ್ಮಾ ಚಕ್ರೆ

Updated on: Oct 10, 2022 | 11:55 AM

108 ವರ್ಷದ ಮಹಿಳೆಯನ್ನು ಮನೆಯಿಂದ ಹೊರಕ್ಕೆ ಎಳೆದೊಯ್ದ ದರೋಡೆಕೋರರು, ಮನೆಯ ಹೊರಗಿದ್ದ ಬಾತ್​ರೂಂನಲ್ಲಿ ಕೂಡಿಹಾಕಿ, ಹರಿತವಾದ ಆಯುಧದಿಂದ ಆಕೆಯ ಪಾದಗಳನ್ನು ಕತ್ತರಿಸಿ, ಆಕೆ ಧರಿಸಿದ್ದ ಬೆಳ್ಳಿಯ ಗೆಜ್ಜೆಗಳನ್ನು ಕದ್ದಿದ್ದಾರೆ.

Shocking News: ಬೆಳ್ಳಿ ಗೆಜ್ಜೆಗಾಗಿ 108 ವರ್ಷದ ವೃದ್ಧೆಯ ಕಾಲುಗಳನ್ನೇ ಕತ್ತರಿಸಿದ ಕಳ್ಳರು!
ಆಸ್ಪತ್ರೆಗೆ ದಾಖಲಾಗಿರುವ ವೃದ್ಧೆ
Follow us on

ಜೈಪುರ: ಬೆಳ್ಳಿ ಗೆಜ್ಜೆಯ (Silver Anklet) ಆಸೆಗೆ ದರೋಡೆಕೋರರು 108 ವರ್ಷದ ಮಹಿಳೆಯ ಕಾಲುಗಳನ್ನೇ ಕತ್ತರಿಸಿಕೊಂಡು ಹೋಗಿರುವ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ (Rajasthan) ನಡೆದಿದೆ. ಭಾನುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ವೃದ್ಧೆಯ ಮನೆಗೆ ನುಗ್ಗಿದ ದರೋಡೆಕೋರರು ಮಲಗಿದ್ದ ಆಕೆಯನ್ನು ಮನೆಯ ಹೊರಗೆ ಎಳೆದುಕೊಂಡು ಹೋಗಿ ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಆಕೆ ಧರಿಸಿದ್ದ ಬೆಳ್ಳಿ ಗೆಜ್ಜೆಯನ್ನು ಕದಿಯಲು ಬಂದವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದರೋಡೆಕೋರರು ತನ್ನ ಮೇಲೆ ದಾಳಿ ನಡೆಸಿ, ಕಾಲನ್ನು ಕತ್ತರಿಸಿರುವುದರಿಂದ ಆ ವೃದ್ಧೆ ತೀವ್ರ ರಕ್ತಸ್ರಾವ ಮತ್ತು ನೋವಿನಿಂದ ನರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ವೃದ್ಧೆ ಜೋರಾಗಿ ಕೂಗಿಕೊಂಡರೂ ಮನೆಯೊಳಗಿನ ಯಾರಿಗೂ ಆಕೆಯ ಧ್ವನಿ ಕೇಳಿಲ್ಲ. ಈ ಘಟನೆ ನಡೆದು ಸುಮಾರು 1 ಗಂಟೆಯ ನಂತರ ಮನೆಯಲ್ಲಿ ಮಲಗಿದ್ದ ಆಕೆಯ ಮಗಳು, ಮೊಮ್ಮಗಳು ಎದ್ದುಬಂದು ಆಕೆಯನ್ನು ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Shocking News: ಬೆಳ್ಳಿ ಗೆಜ್ಜೆ ಆಸೆಗೆ 4 ವರ್ಷದ ಬಾಲಕಿಯನ್ನು ಕೊಂದು, ಮನೆ ಹಿಂದೆ ಹೂತಿಟ್ಟ ಮಹಿಳೆ!

ಹಲ್ಲೆಗೊಳಗಾದ ವೃದ್ಧೆ ಮೀನಾ ಕಾಲೋನಿ ನಿವಾಸಿ ಜಮುನಾ ದೇವಿ ತಮ್ಮ ಮಗಳು ಮತ್ತು ಮೊಮ್ಮಗಳೊಂದಿಗೆ ವಾಸಿಸುತ್ತಿದ್ದರು. ಅವರ ಕುಟುಂಬದ ಸದಸ್ಯರ ಪ್ರಕಾರ, 108 ವರ್ಷದ ಆ ಮಹಿಳೆಯನ್ನು ಮನೆಯಿಂದ ಹೊರಕ್ಕೆ ಎಳೆದೊಯ್ದ ದರೋಡೆಕೋರರು, ಮನೆಯ ಹೊರಗಿದ್ದ ಬಾತ್​ರೂಂನಲ್ಲಿ ಕೂಡಿಹಾಕಿ, ಹರಿತವಾದ ಆಯುಧದಿಂದ ಆಕೆಯ ಪಾದಗಳನ್ನು ಕತ್ತರಿಸಿ, ಆಕೆ ಧರಿಸಿದ್ದ ಬೆಳ್ಳಿಯ ಗೆಜ್ಜೆಗಳನ್ನು ಕದ್ದಿದ್ದಾರೆ. ನಂತರ ಆ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಘಟನೆಯ ಬಗ್ಗೆ ವಿವರಿಸಿರುವ ವೃದ್ಧೆಯ ಮಗಳು ಗೋವಿಂದಿ ದೇವಿ, “ನನ್ನ ತಾಯಿಯ ಕಾಲುಗಳನ್ನು ಕತ್ತರಿಸಲಾಗಿತ್ತು. ಆಕೆ ಬಚ್ಚಲುಮನೆಯಲ್ಲಿ ಬಿದ್ದಿದ್ದಾಳೆ ಎಂದು ನನ್ನ ಮಗಳು ನನಗೆ ಬೆಳಗ್ಗೆ ತಿಳಿಸಿದಳು. ನಾವು ತಕ್ಷಣ ಅವಳನ್ನು ಆಸ್ಪತ್ರೆಗೆ ಸೇರಿಸಿದೆವು. ಅವರ ಸ್ಥಿತಿ ಗಂಭೀರವಾಗಿದೆ” ಎಂದು ಹೇಳಿದ್ದಾರೆ. ದರೋಡೆಕೋರರು ವೃದ್ಧೆಯ ಮೇಲೆ ದಾಳಿ ನಡೆಸಿದಾಗ ಮನೆಯಲ್ಲಿ ಎಲ್ಲರೂ ಮಲಗಿದ್ದರು ಎಂದು ಸಂತ್ರಸ್ತೆಯ ಸೋದರಳಿಯ ಗೋಪಾಲ್ ಮೀನಾ ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಫೋರೆನ್ಸಿಕ್ ತಜ್ಞರ ಸಹಾಯದಿಂದ ಪುರಾವೆಗಳನ್ನು ಸಂಗ್ರಹಿಸಲಾಗಿದೆ ಮತ್ತು ಆ ಪ್ರದೇಶದಿಂದ ಪಡೆದ ಸಿಸಿಟಿವಿ ದೃಶ್ಯಗಳ ಮೂಲಕ ಕಳ್ಳರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಸ್ಥಳದಿಂದ ಹರಿತವಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ