Bangalore: ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಬಸ್; ಗಂಭೀರ ಗಾಯ
ಬಸ್ ಹತ್ತುವಾಗ ಜಾರಿ ಬಿದ್ದ ವಿದ್ಯಾರ್ಥಿನಿಯ ಮೇಲೆ ಬಸ್ ಹರಿದು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡಾಕೆಯ ಸ್ಥಿತಿ ಚಿಂತಾಜನಕವಾಗಿದೆ.
ಬೆಂಗಳೂರು: ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಬಸ್ ಹರಿದ ಘಟನೆ ನಗರದ ಜ್ಞಾನಭಾರತಿ ವಿಶ್ವವಿದ್ಯಾಲಯದ ಬಳಿ ಸಂಭವಿಸಿದ್ದು, ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ. ಮೊದಲ ವರ್ಷದ ಉನ್ನತ ವ್ಯಾಸಾಂಗ ಮಾಡುತ್ತಿದ್ದ ಕೋಲಾರ ಮೂಲದ ವಿದ್ಯಾರ್ಥಿನಿ ಶಿಲ್ಪಾ ಎಂಬಾಕೆ ಬಿಎಂಟಿಸಿ ಬಸ್ ಹತ್ತುವಾಗ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಬಸ್ ಆಕೆಯ ಮೇಲೆ ಹರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡ ಶಿಲ್ಪಾಳನ್ನು ನಾಗರಬಾವಿ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಘಟನೆಯಿಂದ ಕೆರಳಿದ ವಿದ್ಯಾರ್ಥಿ ಸಮೂಹ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಬಸ್ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಲಾಗುತ್ತಿದೆ.
ರಾಷ್ಟ್ರಧ್ವಜ ಹೋಲುವ ಧ್ವಜದಲ್ಲಿ ಹಸಿರು ಚಿಹ್ನೆ ಬಳಕೆ
ಕೊಪ್ಪಳ: ರಾಷ್ಟ್ರಧ್ವಜ ಹೋಲುವ ಧ್ವಜದಲ್ಲಿ ಹಸಿರು ಚಿಹ್ನೆ ಬಳಕೆಪ್ರಕರಣ ಸಂಬಂಧ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. ನಿನ್ನೆ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಧ್ವಜದಲ್ಲಿ ಹಸಿರು ಚಿಹ್ನೆ ಬಳಕೆ ಮಾಡಲಾಗಿದ್ದು, ರಾಷ್ಟ್ರಧ್ವಜ ಮಾದರಿಯ ಧ್ವಜದಲ್ಲಿ ಇಸ್ಲಾಂ ಚಿಹ್ನೆ ಬಳಕೆ ಆರೋಪ ಮಾಡಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗಂಗಾವತಿ ನಗರ ಠಾಣೆ ಪೊಲೀಸರು, ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ಕಾಯ್ದೆ 1971ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಪತ್ನಿಯ ಕೊಂದು ಪತಿ ಪರಾರಿ
ಬೆಂಗಳೂರು ಗ್ರಾಮಾಂತರ: ತನ್ನ ಪತ್ನಿಯನ್ನು ಪತಿಮಹಾಶಯನೊಬ್ಬ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಶಾಂತಿನಗರ ಗ್ರಾಮದಲ್ಲಿ ನಡೆದಿದೆ. ಮಂಜುಳಾ(35) ಕೊಲೆಯಾದ ದುದೈವಿ. ಜಗಳವಾಡುವ ವೇಳೆ ಅಡುಗೆ ರೂಮ್ನಲ್ಲಿದ್ದ ಚಾಕು ಹಿಡಿದು ಮಂಜುಳಾಳ ಕುತ್ತಿಗೆಯನ್ನು ಸೀಳಿ ಪತಿ ಶಿವಕುಮಾರ್ (45) ಪರಾರಿಯಾಗಿದ್ದಾನೆ. ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶಿವಕುಮಾರ್ಗೆ ಕುಡಿತದ ಚಟ ಹೆಚ್ಚಾಗಿತ್ತು. ನಿತ್ಯ ಕುಡಿದ ಮತ್ತಿನಲ್ಲಿಯೇ ಮನೆಗೆ ಬಂದು ಪತ್ನಿ ಮಂಜುಳಾಳೊಂದಿಗೆ ಜಗಳ ಮಾಡಿಕೊಳ್ಳುತ್ತಿದ್ದನು. ಅದರಂತೆ ಜಗಳವಾಡುತ್ತಿದ್ದಾಗ ಶಿವಕುಮಾರ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಆಕೆಯ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Mon, 10 October 22