Shocking News: ಬೆಳ್ಳಿ ಗೆಜ್ಜೆ ಆಸೆಗೆ 4 ವರ್ಷದ ಬಾಲಕಿಯನ್ನು ಕೊಂದು, ಮನೆ ಹಿಂದೆ ಹೂತಿಟ್ಟ ಮಹಿಳೆ!
Murder: ಬೆಳ್ಳಿ ಗೆಜ್ಜೆಯನ್ನು ಕದಿಯುವ ಸಲುವಾಗಿ ಮಹಿಳೆಯೊಬ್ಬಳು 4 ವರ್ಷದ ಬಾಲಕಿಯನ್ನು ಕೊಂದು, ಆ ಶವವನ್ನು ಮರಳಿನ ರಾಶಿ ಕೆಳಗೆ ಹೂತು ಹಾಕಿರುವ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಜೈಪುರ: ಬೆಳ್ಳಿ ಗೆಜ್ಜೆಯ ಮೇಲಿನ ಆಸೆಗೆ ಮಹಿಳೆಯೊಬ್ಬಳು 4 ವರ್ಷದ ಬಾಲಕಿಯ ಕತ್ತು ಹಿಸುಕಿ ಕೊಂದು (Murder), ಆಕೆಯ ಮೃತದೇಹವನ್ನು ತನ್ನ ಮನೆಯ ಮರಳಿನ ರಾಶಿ ಕೆಳಗೆ ಹೂತಿಟ್ಟಿರುವ ಘಟನೆ ರಾಜಸ್ಥಾನದ (Rajasthan) ಝಲಾವರ್ ಜಿಲ್ಲೆಯಲ್ಲಿ ನಡೆದಿದೆ. 29 ವರ್ಷದ ಮಹಿಳೆ ಶನಿವಾರ ಸಂಜೆ ಆ 4 ವರ್ಷದ ಹುಡುಗಿಯನ್ನು ತನ್ನ ಮನೆಗೆ ಕರೆದೊಯ್ದಿದ್ದಾಳೆ. ಅಲ್ಲಿ ಬಾಲಕಿಯ ತಲೆಗೆ ಕಲ್ಲಿನಿಂದ ಹೊಡೆದು, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಝಲಾವರ್ ಜಿಲ್ಲೆಯ ಭವಾನಿಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಮನೆಯ ಪಕ್ಕದಲ್ಲಿದ್ದ ಬಾಲಕಿ ಬೆಳ್ಳಿ ಗೆಜ್ಜೆಯನ್ನು ಹಾಕಿಕೊಂಡಿರುವುದನ್ನು ನೋಡಿದ್ದ ಮಹಿಳೆ ಆ ಗೆಜ್ಜೆಯ ಆಸೆಗೆ ಆ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆ ಬಾಲಕಿಯನ್ನು ಕೊಂದ ನಂತರ ಆಕೆಯ ಕಾಲಿನ ಗೆಜ್ಜೆಯನ್ನು ತೆಗೆದಿಟ್ಟುಕೊಂಡು, ಆಕೆಯ ಶವವನ್ನು ಮರಳಿನ ದಿಬ್ಬದಲ್ಲಿ ಹೂತು ಹಾಕಿದ್ದಾಳೆ.
ತಮ್ಮ 4 ವರ್ಷದ ಮಗಳು ಕಾಣೆಯಾದ ಬಗ್ಗೆ ಆಕೆಯ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ನಡೆಸತೊಡಗಿದ್ದರು. ಆಗ ಆ ಬಾಲಕಿ ನಾಪತ್ತೆಯಾದ ದಿನ ಸಂಜೆ ಪಕ್ಕದ ಮನೆಯ ಮಹಿಳೆಯ ಜೊತೆ ಹೋಗಿದ್ದಾಗಿ ಅಕ್ಕಪಕ್ಕದವರು ಹೇಳಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಭಾನುವಾರ ಬೆಳಿಗ್ಗೆ ನೆರೆಹೊರೆಯವರ ಮನೆಯಿಂದ ಶವವನ್ನು ಹೊರತೆಗೆದ ಪೊಲೀಸರು ಅದೇ ರಾತ್ರಿ ಕೊಲೆ ಮಾಡಿದ ಮಹಿಳೆಯನ್ನು ಬಂಧಿಸಿದರು.
ಸೋಮವಾರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತರುಣಾ ಎಂದು ಗುರುತಿಸಲಾದ ಮಹಿಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಭವಾನಿಮಂಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಸಿಂಗ್ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಆಕೆ ತನ್ನ ಪತಿಗೂ ಹೇಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ವರ್ಷದ ಬಾಲಕಿ ಮಧ್ಯಪ್ರದೇಶದ ಸುವಾಸ್ರಾ ನಿವಾಸಿಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ರಾಜಸ್ಥಾನದ ಜಲಾವರ್ ಜಿಲ್ಲೆಯ ಮೆಹರ್‌ಪುರ ಗ್ರಾಮದ ತನ್ನ ತಾಯಿಯ ಜೊತೆಗೆ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Tue, 10 May 22