Shraddha Walkar Murder: ಶ್ರದ್ಧಾ ಕೊಲೆ ಪ್ರಕರಣ; ಆರೋಪಿ ಅಫ್ತಾಬ್​ಗೆ ಮಂಪರು ಪರೀಕ್ಷೆ ಸಾಧ್ಯತೆ

| Updated By: ಸುಷ್ಮಾ ಚಕ್ರೆ

Updated on: Nov 16, 2022 | 1:42 PM

Delhi Crime News: ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದು, ಆಕೆಯ ದೇಹವನ್ನು ಕತ್ತರಿಸಿ, ಫ್ರಿಡ್ಜ್​ನಲ್ಲಿ ಇಟ್ಟ ನಂತರ ಕೆಲವು ಹುಡುಗಿಯರನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

Shraddha Walkar Murder: ಶ್ರದ್ಧಾ ಕೊಲೆ ಪ್ರಕರಣ; ಆರೋಪಿ ಅಫ್ತಾಬ್​ಗೆ ಮಂಪರು ಪರೀಕ್ಷೆ ಸಾಧ್ಯತೆ
ಅಫ್ತಾಬ್
Follow us on

ನವದೆಹಲಿ: ದೆಹಲಿ ಶ್ರದ್ಧಾ ಕೊಲೆ ಪ್ರಕರಣದ (Shraddha Murder Case) ಆರೋಪಿ ಅಫ್ತಾಬ್​ (Aftab)  ಈ ಹತ್ಯೆಯ ಬಗ್ಗೆ ನೀಡುತ್ತಿರುವ ಹೇಳಿಕೆಯ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಆತ ಹೇಳಿದ್ದ ಕೆಲವು ಸ್ಥಳಗಳಲ್ಲಿ ಶ್ರದ್ಧಾಳ ಶವದ ಭಾಗಗಳು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಈ ಕುರಿತು ಸತ್ಯಾಸತ್ಯತೆಯನ್ನು ತಿಳಿಯಲು ಅಫ್ತಾಬ್​ಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಬೇಕು ಎಂದು ದೆಹಲಿ ಪೊಲೀಸರು ಸಾಕೇತ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಮಂಪರು ಪರೀಕ್ಷೆ ನಡೆಸಲಾಗುವುದು.

28 ವರ್ಷದ ಅಫ್ತಾಬ್ ಪೂನಾವಾಲಾ ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ತಮ್ಮ ಬಾಡಿಗೆ ನಿವಾಸದಲ್ಲಿ ಶ್ರದ್ಧಾ ವಾಕರ್‌ ಎಂಬ ಯುವತಿಯನ್ನು ಕೊಂದಿದ್ದ. ಶ್ರದ್ಧಾಳನ್ನು ಕೊಂದ ಬಳಿಕ ಅಫ್ತಾಬ್ ಆಕೆಯ ದೇಹದ ಭಾಗಗಳನ್ನು 35 ಭಾಗ ಮಾಡಿ, 18 ದಿನಗಳ ಕಾಲ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಈ ಹತ್ಯೆಯ ಆಘಾತಕಾರಿ ಮಾಹಿತಿಯು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ.

ಶೆಫ್ ಆಗಿದ್ದ ಅಫ್ತಾಬ್ ಫುಡ್ ಬ್ಲಾಗ್ ಕೂಡ ನಡೆಸುತ್ತಿದ್ದ. ಶ್ರದ್ಧಾಳನ್ನು ಕೊಂದ ಬಳಿಕ ಆಕೆಯ ದೇಹವನ್ನು ತುಂಡು ಮಾಡಲು ಒಂದೂವರೆ ಅಡಿ ಉದ್ದದ ದೊಡ್ಡ ಚಾಕುವನ್ನು ತೆಗೆದುಕೊಂಡು ಬಂದಿದ್ದ. ಬಳಿಕ ಆ ಹೆಣದ ಪೀಸ್​ಗಳನ್ನು ಫ್ರಿಡ್ಜ್​ನಲ್ಲಿ ಇರಿಸಿದ್ದ. ಅದಕ್ಕೆಂದೇ 300 ಲೀಟರ್​ನ ಹೊಸ ಫ್ರಿಡ್ಜ್ಜ ಕೂಡ ಖರೀದಿಸಿದ್ದ.

ಡೇಟಿಂಗ್ ಆ್ಯಪ್​ನಲ್ಲಿ ಶ್ರದ್ಧಾಳಿಗೆ ಪರಿಚಯವಾಗಿದ್ದ ಅಫ್ತಾಬ್ ಇದಕ್ಕೂ ಮೊದಲು ಹಲವು ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ, ಆತನ ಮೇಲೆ ಅನುಮಾನಗೊಂಡು ತನ್ನನ್ನು ಮದುವೆಯಾಗೆಂದು ಶ್ರದ್ಧಾ ಒತ್ತಾಯಿಸುತ್ತಿದ್ದಳು. ಆದರೆ, ಅದಕ್ಕೆ ಅಫ್ತಾಬ್ ಒಪ್ಪಿರಲಿಲ್ಲ.

ಹೆಣ ಇಟ್ಟುಕೊಂಡೇ ಮನೆಗೆ ಹುಡುಗಿಯರನ್ನು ಕರೆತಂದಿದ್ದ ಅಫ್ತಾಬ್:
ಇನ್ನೂ ವಿಚಿತ್ರವಾದ ಸಂಗತಿಯೆಂದರೆ, ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದು, ಆಕೆಯ ದೇಹವನ್ನು ಕತ್ತರಿಸಿ, ಫ್ರಿಡ್ಜ್​ನಲ್ಲಿ ಇಟ್ಟ ನಂತರ ಕೆಲವು ಹುಡುಗಿಯರನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. 18 ದಿನಗಳ ಕಾಲ ದಿನವೂ ಒಂದೊಂದೇ ಭಾಗವನ್ನು ಒಂದೊಂದು ಕಡೆ ಬಿಸಾಡುತ್ತಿದ್ದ ಅಫ್ತಾಬ್ ಇನ್ನೂ ಕೆಲವು ಭಾಗಗಳು ಫ್ರಿಡ್ಜ್​ನಲ್ಲಿ ಇರುವಾಗಲೇ ತನ್ನ ಮನೆಗೆ ಯುವತಿಯನ್ನು ಕರೆದುಕೊಂಡು ಬಂದಿದ್ದ. ಆಗ ವಾಸನೆ ಬರಬಾರದೆಂದು ಕೆಮಿಕಲ್ ಹಾಕಿ ಮನೆಯನ್ನು ಕ್ಲೀನ್ ಮಾಡಿ, ರೂಂ ಫ್ರೆಷನರ್ ಸಿಂಪಡಿಸಿದ್ದ.

ಇದನ್ನೂ ಓದಿ: Shraddha Murder: ದೆಹಲಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಆ ನಿಗೂಢ ರಾತ್ರಿ ನಡೆದಿದ್ದೇನು?

ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ ಅಫ್ತಾಬ್ ಪೂನಾವಾಲಾ ಅದೇ ಬಂಬಲ್ ಡೇಟಿಂಗ್ ಆ್ಯಪ್‌ನಲ್ಲಿ ಮತ್ತೊಬ್ಬ ಮಹಿಳೆಯನ್ನು ಭೇಟಿಯಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶ್ರದ್ಧಾಳ ಶವದ ಅವಶೇಷಗಳು ಅಪಾರ್ಟ್‌ಮೆಂಟ್‌ನಲ್ಲಿಯೇ ಇರುವಾಗಲೇ ಆತ ಬೇರೆ ಯುವತಿಯನ್ನು ಆಗಾಗ ಮನೆಗೆ ಕರೆದುಕೊಂಡು ಬರುತ್ತಿದ್ದ.

ಈ ಬಗ್ಗೆ ಮಾಹಿತಿ ನೀಡಿರುವ ಅಕ್ಕಪಕ್ಕದ ಮನೆಯವರು, “ಅವನು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಯಾವಾಗಲೂ ಒಬ್ಬನೇ ಇರುತ್ತಿದ್ದ. ಅವರ ಮನೆಯಲ್ಲಿ ಪಾರ್ಟಿಗಳು ನಡೆಯುತ್ತಿದ್ದವು, ಆದರೆ ಯಾವಾಗಲೂ ಬಾಗಿಲನ್ನು ಮುಚ್ಚಲಾಗುತ್ತಿತ್ತು. 2-3 ವಾರಗಳ ಹಿಂದೆಯೂ ಸಹ ಅನೇಕ ಮಹಿಳೆಯರು ಅವನ ಮನೆಗೆ ಬಂದಿದ್ದರು. ಐದಾರು ಮಹಿಳೆಯರು ಸದಾ ಆತನ ಮನೆಗೆ ಬಂದು ಹೋಗಿ ಮಾಡುತ್ತಿದ್ದರು.” ಎಂದು ಹೇಳಿದ್ದಾರೆ.

ಏನಿದು ಘಟನೆ?: 

28 ವರ್ಷದ ಶ್ರದ್ಧಾ ಹಾಗೂ ಆಕೆಯ ಪ್ರೇಮಿ ಅಫ್ತಾಬ್ 3 ವರ್ಷದಿಂದ ಒಂದೇ ಮನೆಯಲ್ಲಿ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಅಪ್ಪ-ಅಮ್ಮನ ಮಾತು ಕೇಳದೆ ಅವರೊಂದಿಗೆ ಜಗಳವಾಡಿಕೊಂಡು ಅಫ್ತಾಬ್​ ಜೊತೆ ಇರಲು ಬಂದಿದ್ದ ಶ್ರದ್ಧಾಗೆ ತಮ್ಮ ಸಂಬಂಧಕ್ಕೊಂದು ಹೆಸರು ಬೇಕಿತ್ತು. ಹೀಗಾಗಿ, ತನ್ನನ್ನು ಮದುವೆಯಾಗೆಂದು ಶ್ರದ್ಧಾ ಅಫ್ತಾಬ್ ಬಳಿ ಹಠ ಮಾಡುತ್ತಲೇ ಇದ್ದಳು. ಆದರೆ, ಆಕೆಯನ್ನು ಮದುವೆಯಾಗಲು ಅಫ್ತಾಬ್​ಗೆ ಒಪ್ಪಿಗೆ ಇರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್​ ಡೆಕ್ಸ್ಟರ್ ಸೇರಿದಂತೆ ಅನೇಕ ಕ್ರೈಂ ಸಿನಿಮಾಗಳನ್ನು ನೋಡಿದ್ದ ಅಫ್ತಾಬ್​ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಬಿಸಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದ.

ಇದನ್ನೂ ಓದಿ: Delhi Murder Case: ದೆಹಲಿ ಕೊಲೆ ಪ್ರಕರಣ; ಶ್ರದ್ಧಾಳ ದೇಹದ 13 ಭಾಗ ಪತ್ತೆ; ತಲೆ, ಹತ್ಯೆಯ ಆಯುಧಕ್ಕಾಗಿ ಹುಡುಕಾಟ

ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದ ನಂತರ ಆಕೆಯ ಶವವನ್ನು ಇಟ್ಟುಕೊಂಡು ಅದೇ ರೂಮಿನಲ್ಲಿ ಒಂದು ದಿನವನ್ನು ಕಳೆದಿದ್ದ. ಮಾರನೇ ದಿನ ಹೊಸ ಫ್ರಿಡ್ಜ್ ಖರೀದಿಸಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಆ ಫ್ರಿಡ್ಜ್​ನಲ್ಲಿ ಇರಿಸಿದ್ದ. ನಂತರ 18 ದಿನಗಳವರೆಗೆ ಪ್ರತಿ ರಾತ್ರಿ 12 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಿ, ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಆಕೆಯ ದೇಹದ ಒಂದೊಂದೇ ಭಾಗಗಳನ್ನು ಬಿಸಾಡಿ ಬರುತ್ತಿದ್ದ. 18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್​ನಲ್ಲಿ ಇಟ್ಟಿದ್ದರಿಂದ ಮತ್ತು ಮನೆಯಲ್ಲಿ ಸ್ವಲ್ಪ ರಕ್ತದ ವಾಸನೆ ಹಾಗೇ ಉಳಿದಿದ್ದರಿಂದ ಮನೆಯ ವಾಸನೆಯನ್ನು ಕಡಿಮೆ ಮಾಡಲು ರೂಂ ಫ್ರೆಷನರ್​ಗಳನ್ನು ತಂದಿದ್ದ. ಹಾಗೇ, ದಿನವೂ ಊದುಬತ್ತಿ ಹೊತ್ತಿಸಿ ಇಡುತ್ತಿದ್ದ.

ಕೊಲೆ ವಿಷಯ ಬಯಲಾಗಿದ್ದು ಹೇಗೆ?:

ಮಹಾರಾಷ್ಟ್ರದ ಪಾಲ್ಘರ್ ನಿವಾಸಿಯಾದ ಶ್ರದ್ಧಾಳ ತಂದೆ ವಿಕಾಸ್ ಮದನ್ ವಾಕರ್ ನವೆಂಬರ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳು ಮೇ ತಿಂಗಳಿಂದ ನಾಪತ್ತೆಯಾಗಿದ್ದಾಳೆ, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರು ನೀಡಿದ್ದರು. ಅದರ ಬೆನ್ನತ್ತಿ ತನಿಖೆ ಮಾಡಲಾರಂಭಿಸಿದ ಪೊಲೀಸರಿಗೆ ನಿಗೂಢ ಕೊಲೆಯ ಸುಳಿವು ಸಿಕ್ಕಿತ್ತು. ಆರಂಭಿಕ ತನಿಖೆಯಲ್ಲಿ ಶ್ರದ್ಧಾಳ ಮೊಬೈಲ್ ಕೊನೆಯ ಬಾರಿ ಎಲ್ಲಿ ಸಿಗ್ನಲ್ ಸಿಕ್ಕಿದೆ ಎಂಬುದು ಪತ್ತೆಯಾಗಿತ್ತು.  ಆ ತನಿಖೆಯ ಸಂದರ್ಭದಲ್ಲಿ ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಗೆ ಬಂದು ಛತ್ತರ್‌ಪುರ ಪಹಾಡಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್​ಮೆಂಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಗೊತ್ತಾಗಿತ್ತು. ಅಲ್ಲಿ ಹೋಗಿ ಅಫ್ತಾಬ್​ನನ್ನು ವಿಚಾರಣೆ ಮಾಡಿದಾಗ ಆತ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಮೇ ತಿಂಗಳಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ