ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬಂಧಿತರಾದ ಇಬ್ಬರು ಶಂಕಿತ ಉಗ್ರರು ತೀವ್ರವಾದದ ಬಗ್ಗೆ ಒಲವು ಬೆಳೆಸಿಕೊಂಡಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು. ಉಗ್ರರ ಬಂಧನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಧಾರ್ಮಿಕ ತೀವ್ರವಾದದ ಬಗ್ಗೆ ಒಲವು ಹೊಂದಿದ್ದ ಹುಸೇನ್ ಅಖ್ತರ್, ಜುಬಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. ಧಾರ್ಮಿಕ ತೀವ್ರವಾದದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಅವರು, ಎಷ್ಟರಮಟ್ಟಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಪರಿಶೀಲಿಸುತ್ತಿದ್ದೇವೆ. ತಿಲಕ್ನಗರದಲ್ಲಿ ಸೆರೆ ಸಿಕ್ಕ ಅಖ್ತರ್ ನೀಡಿದ ಮಾಹಿತಿ ಮೇರೆಗೆ ಇವರಿಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು ಎಂದು ತಿಳಿಸಿದರು.
ಮೊಬೈಲ್ ಕಳ್ಳತನ ತಡೆಗೆ ಕ್ರಮ
ಬೆಂಗಳೂರಿನಲ್ಲಿ ಇತ್ತೀಚೆಗೆ ದರೋಡೆ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಕೆಂಗೇರಿ ಪೊಲೀಸರು ಇತ್ತೀಚೆಗೆ ಕೆಲ ಆರೋಪಿಗಳನ್ನು ಹಿಡಿದ್ದರು. ಮೊಬೈಲ್ ಕಳವು ಪ್ರಕರಣಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಹಾಡಹಗಲೇ ಲಾಂಗ್ ಮಚ್ಚು ಹಿಡಿದುಕೊಂಡು ಓಡಾಡುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಅಪರಾಧ ತಡೆಗಾಗಿ ನಿನ್ನೆಯಿಂದ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಹೇಳಿದರು.
ಮೊಬೈಲ್ ಕಳುವಾದಾಗ ಸಾರ್ವಜನಿಕರಲ್ಲಿ ಗೊಂದಲ ಮೂಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹೊಟೆಲ್ ಅಥವಾ ಆಟೊದಲ್ಲಿ ಮೊಬೈಲ್ ಬಿಟ್ಟು ಕಳೆದುಕೊಂಡರೆ ಅದು ಇ-ಲಾಸ್ಟ್ ಆಗುತ್ತೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಕಸಿದುಕೊಂಡರೆ ದರೋಡೆಯಾಗುತ್ತೆ. ಅಂಥ ಸಂದರ್ಭದಲ್ಲಿ ಎಫ್ಐಆರ್ ದಾಖಲು ಮಾಡಿ ಆರೋಪಿಗಳನ್ನ ಬಂಧಿಸುತ್ತೇವೆ ಎಂದರು.
ಕಳೆದ 15 ದಿನಗಳಿಂದ ನಗರ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಕಂಟ್ರೋಲ್ ರೂಂಗೆ ಬಂದಿರುವ ದೂರುಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸರಿಯಾಗಿ ಕ್ರಮಕೈಗೊಂಡಿಲ್ಲದಿದ್ದರೆ ಆಯಾ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ಗಳನ್ನು ಹೊಣೆಯಾಗಿಸಲಾಗುವುದು ಎಂದರು.