ಓರಾಯನ್ ಮಾಲ್ ಬಳಿ ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
ಕಾರು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಮಾಡಲಾಗುತ್ತಿದೆ.
ಬೆಂಗಳೂರು: ಕಾರು ಡಿಕ್ಕಿಯಾಗಿ ಪಾದಚಾರಿ(Pedestrian) ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಓರಾಯನ್ ಮಾಲ್(Orion Mall) ಮುಂಭಾಗ ನಡೆದಿದೆ. ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಮಾಡಲಾಗುತ್ತಿದೆ.
ವಿದ್ಯುತ್ ತಂತಿ ತಗುಲಿ ಎರಡು ಹಸುಗಳು ಸಾವು
ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕಿನ ಹಯ್ಯಾಳ್ ಗ್ರಾಮದ ಬಳಿ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ನಿಗಂಪ್ಪನಿಗೆ ಸೇರಿದ ಎರಡು ಹಸುಗಳು ಸಾವನ್ನಪ್ಪಿದೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಅಪರಿಚಿತ ಯುವಕನ ಶವ ಪತ್ತೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಂಕಂಚ್ಚಿ ಗ್ರಾಮದ ಏತ ನೀರಾವರಿ ಯೋಜನೆ ಕಾಲುವೆಯಲ್ಲಿ ಅಪರಿಚಿತ ಯುವಕನ ಮೃತ ದೇಹ ಪತ್ತೆಯಾಗಿದೆ. ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಕೋಲೆ ಶಂಕೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದುರುದ್ದೇಶದಿಂದ ಕೊಲೆ ಮಾಡಿ ಸಾಕ್ಷಿ ನಾಶಕ್ಕೆ ಈ ಸ್ಥಳದಲ್ಲಿ ಶವ ಬಿಸಾಡಿರಬಹುದು ಎನ್ನಲಾಗುತ್ತಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐರನ್, ಫೋಲಿಕ್ ಌಸಿಡ್ ಮಾತ್ರೆ ಸೇವಿಸಿದ್ದ ವಿದ್ಯಾರ್ಥಿಗಳು ಅಸ್ವಸ್ಥ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಡೋಣಿ ಗ್ರಾಮದ ಬಸಡೋಣಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐರನ್ ಮತ್ತು ಫೋಲೀಕ್ ಆಸಿಡ್ ಮಾತ್ರೆ ಸೇವಿಸಿದ್ದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಮಧ್ಯಾಹ್ನ ಊಟದ ಬಳಿಕ ಮಾತ್ರ ಸೇವನೆ ಮಾಡಬೇಕು. ಕೆಲವು ವಿದ್ಯಾರ್ಥಿಗಳು ಊಟದ ಪೂರ್ವದಲ್ಲಿ ಮಾತ್ರೆ ಸೇವಿಸಿ ಅವಘಡ ಸಂಭವಿಸಿದೆ. ಮಾತ್ರೆ ಸೇವಿಸಿದ 15 ವಿದ್ಯಾರ್ಥಿನಿಯರು, 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. 21 ವಿದ್ಯಾರ್ಥಿಗಳು ಹೊಟ್ಟೆ ನೋವು, ತಲೆ ನೋವಿನಿಂದ ಬಳಲುತ್ತಿದ್ದಾರೆ. ಸಂಜೆ ಐದು ಗಂಟೆ ಸುಮಾರಿಗೆ ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ರವಾನಿಸಲಾಗಿದ್ದು ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಸಿಕೆ ಕಂಡು ಬಂದಿದೆ.
Published On - 8:55 pm, Mon, 25 July 22