Kalaburagi News: ಹಾಡಹಗಲೇ ಬಸ್​ ಚಾಲಕನ ಹತ್ಯೆ; ಇಬ್ಬರು ಆರೋಪಿಗಳು ಅರೆಸ್ಟ್​, ಕೊಲೆಗೆ ಕಾರಣ ಕೇಳಿ ದಂಗಾದ ಪೋಲಿಸರು​

|

Updated on: May 25, 2023 | 1:54 PM

ಅಲ್ಲಿ ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನ ಬರ್ಬರ ಕೊಲೆಯಾಗಿತ್ತು. ಮಾರಕಾಸ್ತ್ರಗಳನ್ನು ಹಿಡಿದು ದುಷ್ಕರ್ಮಿಗಳು ಚಾಲಕನನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದರು. ಕೊಲೆಯ ನಂತರ ಹತ್ತಾರು ಅನುಮಾನಗಳು ಹರಿದಾಡಿದ್ದವು. ಆದ್ರೆ, ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೊಲೆಯಾದ ವ್ಯಕ್ತಿಗೆ, ಕೊಲೆಗಾರರಿಗೆ ಯಾವುದೇ ಸಂಬಂಧವಿಲ್ಲ, ಹಾಗಾದ್ರೆ ಕೊಲೆಗೆ ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ.

Kalaburagi News: ಹಾಡಹಗಲೇ ಬಸ್​ ಚಾಲಕನ ಹತ್ಯೆ; ಇಬ್ಬರು ಆರೋಪಿಗಳು ಅರೆಸ್ಟ್​, ಕೊಲೆಗೆ ಕಾರಣ ಕೇಳಿ ದಂಗಾದ ಪೋಲಿಸರು​
ಕೊಲೆ ಆರೋಪಿಗಳ ಬಂಧನ
Follow us on

ಕಲಬುರಗಿ: ಹಾಡಹಗಲೇ ಸಾವಿರಾರು ಜನರು ಓಡಾಡುವ ಸ್ಥಳದಲ್ಲಿಯೇ ಪೊಲೀಸರು, ಕಾನೂನಿನ ಭಯವಿಲ್ಲದೇ ದುಷ್ಕರ್ಮಿಗಳು ಸಿನಿಮಾ ಶೈಲಿಯಲ್ಲಿ ವ್ಯಕ್ತಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಜನನಿಬಿಡ ಪ್ರದೇಶದಲ್ಲಿಯೇ ವ್ಯಕ್ತಿಯ ಬರ್ಬರ ಹತ್ಯೆ ನೋಡಿ, ಕಲಬುರಗಿ (Kalaburagi) ಜನರು ಶಾಕ್ ಆಗಿದ್ದರು. ಹೌದು ಇಂತಹದೊಂದು ಬರ್ಬರ ಘಟನೆ ನಡೆದಿದ್ದು ಇದೇ ಮೇ 11 ರಂದು. ಕಲಬುರಗಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ನಾಗಯ್ಯಸ್ವಾಮಿ ಅನ್ನೋರನ್ನ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಮಧ್ಯಾಹ್ನದ ಊಟ ಮುಗಿಸಿಕೊಂಡು, ಬಸ್ ಬಳಿ ಬರ್ತಿದ್ದ ನಾಗಯ್ಯಸ್ವಾಮಿ ಮೇಲೆ ಮುಗಿಬಿದ್ದಿದ್ದ ಇಬ್ಬರು ದುರುಳರು, ಅನೇಕ ಕಡೆ ಇರಿದಿದ್ದರು. ಮಚ್ಚಿನೇಟಿಗೆ, ಕೈ ಸೇರಿದಂತೆ ದೇಹದ ಕೆಲ ಅಂಗಗಳು ತುಂಡಾಗಿದ್ದವು. ಈ ಬಗ್ಗೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಬ್ರಹ್ಮಪುರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಕೊಲೆಗೆ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಹೌದು ನಾಗಯ್ಯಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪುರ ಠಾಣೆಯ ಪೊಲೀಸರು, ಜಿಲ್ಲೆಯ ತೊಂಡಕಲ ಗ್ರಾಮದ ನಿವಾಸಿಯಾಗಿರೋ ಭೀಮಾಶಂಕರ್ ಅಲಿಯಾಸ್ ಜೈಭೀಮ್, ಜೋಗುರು ಗ್ರಾಮದ ಬಸವರಾಜ್ ಪರಪ್ಪಗೋಳ್ ಅನ್ನೋ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇನ್ನು ಕೊಲೆಯಾದ ವ್ಯಕ್ತಿಗೆ ಮತ್ತು ಕೊಲೆಗಾರರಿಗೆ ಯಾವುದೇ ಸಂಬಂಧವೇ ಇಲ್ಲ. ಆದ್ರು, ಕೂಡ ಇಬ್ಬರು ದುಷ್ಕರ್ಮಿಗಳು ನಾಗಯ್ಯಸ್ವಾಮಿಯನ್ನು ಕೊಲೆ ಮಾಡಿದ್ದಾರೆ. ಇನ್ನು ಪುಡಿರೌಡಿಗಳಾಗಿದ್ದ ಭೀಮಾಶಂಕರ್ ಮತ್ತು ಬಸವರಾಜ್, ಅನೇಕರಿಗೆ ಹೆದರಿಸೋದು, ಅವರಿಂದ ಹಣ ಕಿತ್ತುಕೊಳ್ಳೋ ಕೆಲಸ ಮಾಡುತ್ತಿದ್ದರಂತೆ. ನಾಡಪಿಸ್ತೂಲ್ ಹಿಡಿದುಕೊಂಡು ಪೋಟೋ ತೆಗೆಸಿಕೊಂಡು ಸ್ಟೇಟಸ್ ಇಡುತ್ತಿದ್ದರಂತೆ.

ಇದನ್ನೂ ಓದಿ: ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ

ಕೊಲೆಗೆ ಕಾರಣ ಬಾಯ್ಬಿಟ್ಟ ದುಷ್ಕರ್ಮಿಗಳು

ಜಿಲ್ಲೆಯಲ್ಲಿ ತಮ್ಮ ಹೆಸರು ದೊಡ್ಡ ಮಟ್ಟದಲ್ಲಿ ಎಲ್ಲರಿಗೂ ಗೊತ್ತಾಗಬೇಕು. ನಾವು ಡಾನ್​ಗಳಂತೆ ಮೆರೆಯಬೇಕು ಅನ್ನೋ ಉದ್ದೇಶವನ್ನು ಹೊಂದಿದ್ದರಂತೆ. ಮೇ 11 ರಂದು, ಕಲಬುರಗಿ ನಗರದ ಬಾರ್​ವೊಂದರಲ್ಲಿ ಕುಡದಿದ್ದ ಇಬ್ಬರು ದುಷ್ಕರ್ಮಿಗಳು, ಬೇರೊಬ್ಬ ವ್ಯಕ್ತಿಯನ್ನು ಕೊಲೆ ಮಾಡಬೇಕೆಂದು ಮೊದಲು ಅಂದುಕೊಂಡಿದ್ದರಂತೆ. ಆದ್ರೆ, ಹಾಡಹಗಲೇ ಬಸ್ ನಿಲ್ದಾಣದಲ್ಲಿ ನಾಗಯ್ಯಸ್ವಾಮಿ ಕಂಡಾಗ, ಆತನ ಮೇಲೆ ಮಾರಕಾಸ್ತ್ರದಿಂದ ಇರಿದು ಪರಾರಿಯಾಗಿದ್ದರಂತೆ. ಯಾವುದೇ ಕಾರಣವೇ ಇಲ್ಲದೆ, ತಮ್ಮ ಹವಾ ಹೆಚ್ಚಿಸೋ ಉದ್ದೇಶದಿಂದ ಅಮಾಯಕ ಚಾಲಕನನ್ನು ಕೊಲೆ ಮಾಡಿದ ಹಂತಕರನ್ನು ಪೊಲೀಸರು ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.

ಕಲಬುರಗಿ ನಗರದಲ್ಲಿ ಹಾಡಹಗಲೇ ಕೊಲೆಗಳಾಗುತ್ತಿರುವದರಿಂದ ಜನರು ಬೆಚ್ಚಿಬಿದ್ದಿದ್ದಾರೆ. ಆದ್ರೆ, ಇದೀಗ ಯಾವುದೇ ಕಾರಣವೇ ಇಲ್ಲದೇ ಪುಡಿ ರೌಡಿಗಳು ಹವಾ ಮಾಡಲು ಕೊಲೆ ಮಾಡುತ್ತಿರುವುದು ಜಿಲ್ಲೆಯ ಜನರನ್ನು ಮತ್ತಷ್ಟು ಭಯಬೀತಗೊಳಿಸಿದೆ. ಹೀಗಾಗಿ ಪೊಲೀಸರು ಪುಡಿ ರೌಡಿಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ.

ವರದಿ: ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ