Wrong inidacator ಹಾಕಿ ಸೈಡ್ ಕೊಡದೆ ಆಟವಾಡಿಸ್ತಿದ್ದ ಮಹಿಂದ್ರಾ ಥಾರ್ ವಾಹನ ಸವಾರನನ್ನು ಪ್ರಶ್ನಿಸಿದಕ್ಕೆ ಬೈಕ್ ಸವಾರನ ಕೊಲೆ!
ವಿಚಾರ ತಿಳಿಯುತ್ತಿದ್ದಂತೆಯೆ ರಾತ್ರಿಯೆ ಸ್ಪಾಟ್ ವಿಸಿಟ್ ಮಾಡಿದ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಇಬ್ಬರೂ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರಿಂದ ಕೆಲ ಮಾಹಿತಿ ಕಲೆ ಹಾಕಿದ್ದಾರೆ.
ಅವರಿಬ್ಬರೂ ಚಹಾ ಕುಡಿಯೋದಕ್ಕೆ ಅಂತಾ ಬೈಕ್ ಏರಿ ಹೋರಟಿದ್ದರು. ಮಧ್ಯೆ ದಾರಿಯಲ್ಲಿ ಮಹಿಂದ್ರಾ ಥಾರ್ ವಾಹನವೊಂದು ಇವರ ಮುಂದೆ ಹೋಗ್ತಾ ಇತ್ತು. ಮಹಿಂದ್ರಾ ಥಾರ್ ವಾಹನ ಸರಿಯಾಗಿ ಹೋಗಿದ್ದರೆ ಬಹುಶಃ ಏನೂ ಆಗ್ತಿರಲಿಲ್ಲವೇನೋ.. ಆದ್ರೆ ಗಾಡಿಯಲ್ಲಿದ್ದ ಅವರು ತಮ್ಮ ವಾಹನದ ಸೈಡ್ ಇಂಡಿಕೇಟರ್ ನಿಮಿಷಕ್ಕೆ ಬದಲಾಯಿಸಿಕೊಂಡು ಹಿಂದೆ ಬರುವ ವಾಹನಗಳಿಗೆ ಕನ್ಪ್ಯೂಸ್ ಮಾಡೋದಕ್ಕೆ ಮುಂದಾಗಿದ್ದಾರೆ. ಸುಮಾರು ಒಂದು ಒಂದೂವರೆ ಕಿಮಿ ವರೆಗೂ ಇದೇ ರೀತಿಯಾಗಿ ಇಂಡಿಕೇಟರ್ ಬದಲಾಯಿಸಿಕೊಂಡು ಕನ್ಪ್ಯೂಸ್ ಮಾಡ್ತಿದ್ದರು. ಬೈಕ್ ನಲ್ಲಿದ್ದವರು ಈ ರೀತಿ ಯಾಕೆ ಕನ್ಪ್ಯೂಸ್ ಮಾಡ್ತಿದ್ದೀರಿ ಅಂತಾ ಕೇಳಿದ್ದೇ ತಪ್ಪಾಯ್ತು ನೋಡಿ, ಕಾರ್ ನಿಂದ ಇಳಿದ ಆ ವ್ಯಕ್ತಿ ಡೈರೆಕ್ಟ್ ಆಗಿ ಚಾಕುವಿನಿಂದ ಬೈಕ್ ಚಾಲಕನನ್ನ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇಂತಹದೊಂದು ಘಟನೆ ನಡೆದಿರುವುದು ಕಲಬುರಗಿಯ ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗದಲ್ಲಿ.
ಅಂದಹಾಗೆ ಕೊಲೆಯಾದ ಟ್ರಾನ್ಸಪೋರ್ಟ್ ಉದ್ಯಮಿಯ ಹೆಸರು ಪ್ರಮೋದ್ ಹೊಳಿ ಅಂತಾ.. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲುಕಿನ ಚಂದನಕೇರಾ ಗ್ರಾಮದ ನಿವಾಸಿ.. ಪ್ರಮೋದ್ ಚೊಂಚೋಳಿ ತಾಲ್ಲುಕಿನ ಸಿಮೆಂಟ್ ಫ್ಯಾಕ್ಟರಿಗಳಲ್ಲಿ ಟ್ರಾನ್ಸಪೋರ್ಟ್ ಉದ್ಯಮ ಮಾಡಿಕೊಂಡು ಕಲಬುರಗಿ ನಗರದ ಪೂಜಾ ಕಾಲೋನಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ.
ಮೊನ್ನೆ ಭಾನುವಾರ ರಾತ್ರಿ 10:30 ರ ಸುಮಾರಿಗೆ ಪ್ರಮೋದ್ ಮತ್ತು ಆತನ ಮಾವ ಅವಿನಾಶ್ ಇಬ್ಬರೂ ಚಹಾ ಕುಡಿಯೋಣ ಅಂತಾ ಮನೆಯಿಂದ ಬೈಕ್ ಏರಿ ಹೊರಟಿದ್ದಾರೆ. ರಾತ್ರಿ ತಮ್ಮ ಏರಿಯಾದಲ್ಲಿ ಚಹಾ ಸಿಗದೆ ಇರೋದಕ್ಕೆ ಕಲಬುರಗಿ ನಗರದ ಸಂತ್ರಸವಾಡಿ ಏರಿಯಾ ಕಡೆ ಹೊರಟಿದ್ದಾರೆ. ಆಗ ಎಂ ಜಿ ರಸ್ತೆಯಲ್ಲಿ ಹೋಗುವಾಗ ಮಹಿಂದ್ರಾ ಥಾರ್ ಕಾರೊಂದು ಇವರ ಬೈಕ್ ಮುಂದೆ ಪಾಸ್ ಆಗ್ತಾ ಇತ್ತು.
ಆ ಕಾರ್ ಸೈಡ್ ಹೊಡೆದು ಮುಂದೆ ಹೋಗಬೇಕು ಅಂತಾ ಅಂದುಕೊಂಡಾಗ ಮಹಿಂದ್ರಾ ವಾಹನದವರು ಎರಡು ಕಡೆಯ ಇಂಡಿಕೇಟರ್ ಅನ್ನ ಆನ್ ಮಾಡಿ ಹಿಂದೆ ಬರುವವರಿಗೆ ಕನ್ಪ್ಯೂಸ್ ಮಾಡುತ್ತಿದ್ದರು. ಕೆಲ ಕಾಲ ಇದೇ ರೀತಿಯಲ್ಲಿ ಕನ್ಪ್ಯೂಸ್ ಮಾಡಿದ್ದರು. ಬಳಿಕ ಬಾರಾ ಹಿಲ್ಸ್ ಏರಿಯಾ ಬಳಿ ಪ್ರಮೋದ್ ಬೈಕ್ ಸೈಡ್ ಗೆ ಹಾಕಿ ಯಾಕೆ ಇಂಡಿಕೇಟರ್ ರಾಂಗ್, ರಾಂಗ್ ಹಾಕಿ ಕನ್ಪ್ಯೂಸ್ ಮಾಡ್ತಿದ್ದೀರಿ ಅಂತಾ ಪ್ರಮೋದ್ ಅವಿನಾಶ್ ಇಬ್ಬರು ಕೂಡ ಮಹಿಂದ್ರಾ ವಾಹನದಲ್ಲಿದ್ದವರಿಗೆ ಪ್ರಶ್ನೆ ಮಾಡೋದಕ್ಕೆ ಮುಂದಾಗಿದ್ದರು..ತಕ್ಷಣ ಮಹಿಂದ್ರಾ ವಾಹನದಲ್ಲಿದ್ದವನು ಕಾರಿನಿಂದ ಇಳಿದವನೆ ತನ್ನ ಬಳಿಯಿದ್ದ ಚಾಕುವಿನಿಂದ ನಾಲ್ಕೈದು ಬಾರಿ ಪ್ರಮೋದ್ ಗೆ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ’
ಇನ್ನು ಪ್ರಮೋದ್ ಗೆ ಚಾಕು ಇರಿಯೋದಕ್ಕೆ ಮುಂದಾದಾಗ ಅಲ್ಲೆ ಇದ್ದ ಅವಿನಾಶ್ ಬಿಡಿಸೋದಕ್ಕೆ ಮುಂದಾಗಿದ್ದ.. ಆದ್ರೆ ಅಷ್ಟರಲ್ಲೆ ಪ್ರಮೋದ್ ಗೆ ಚಾಕು ಇರಿದ ಹಂತಕರು ತಕ್ಷಣ ತಮ್ಮ ಕಾರ್ ಹತ್ತಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ತಕ್ಷಣ ಅವಿನಾಶ್ ಪ್ರಮೋದ್ ನನ್ನ ಆಸ್ಪತ್ರೆಗೆ ಕರೆತಂದು ದಾಖಲಿಸುವಷ್ಟರಲ್ಲಿ ಪ್ರಮೋದ್ ಪ್ರಾಣಪಕ್ಷಿ ಹಾರಿಹೋಗಿತ್ತು.
ಇನ್ನು ವಿಚಾರ ತಿಳಿಯುತ್ತಿದ್ದಂತೆಯೆ ರಾತ್ರಿಯೆ ಸ್ಪಾಟ್ ವಿಸಿಟ್ ಮಾಡಿದ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಇಬ್ಬರೂ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರಿಂದ ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಘಟನೆ ನಡೆದ ಸ್ಥಳ ಬಾರಾ ಹಿಲ್ಸ್, ಎಂ ಜಿ ರಸ್ತೆ, ಸಂತ್ರಸವಾಡಿ ಸೇರಿದಂತೆ ಹಲವು ಏರಿಯಾದ ಸಿಸಿಟಿವಿಗಳನ್ನ ಸಂಗ್ರಹಿಸಿ ಹಂತಕರ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಆದ್ರೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಘಟನೆ ನಡೆದಿದ್ದರಿಂದ ಕೆಲ ಸಿಸಿಟಿವಿ ಗಳಲ್ಲಿ ಮಹಿಂದ್ರಾ ಥಾರ್ ವಾಹನ ಸ್ಪಿಡ್ ಆಗಿ ಮೂವ್ ಆಗಿರೋ ದೃಶ್ಯವಾಳಿ ಸೆರೆಯಾಗಿದೆ.. ಆದ್ರೆ ವಾಹನದ ನಂಬರ್ ಪ್ಲೇಟ್ ಆಗಲಿ ಇನ್ನಿತರ ಯಾವುದೇ ಮಾಹಿತಿ ದಾಖಲಾಗಿಲ್ಲ. ಇನ್ನು ಘಟನೆ ಸಂಬಂಧ ಒಟ್ಟು ಮೂರು ತಂಡಗಳನ್ನ ರಚನೆ ಮಾಡಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜೊತೆಗೆ ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯವಾಳಿಗಳ ಜೊತೆಗೆ ಕೆಲ ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಈ ಸಂಬಂಧ ಎಂ ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.. ಅದೇನೆ ಆಗಲಿ ರಸ್ತೆ ಮೇಲೆ ಹೋಗುವಾಗ ಟ್ರಾಫಿಕ್ ರೂಲ್ಸ್ ಅನ್ನ ಪಾಲಿಸಬೇಕಾದ ಜನ, ತಮ್ಮ ವಾಹನದ ಇಂಡಿಕೇಟರ್ ಅನ್ನ ರಾಂಗ್, ರಾಂಗ್ ಹಾಕಿಕೊಂಡು ರಸ್ತೆಯಲ್ಲಿ ಹೆಂಗ್ ಬೇಕೋ ಹಂಗೆ ವಾಹನ ಚಲಾಯಿಸಿಕೊಂಡು ಹೋಗೋದನ್ನ ಪ್ರಶ್ನೆ ಮಾಡಿರೋದಕ್ಕೆ ಉದ್ಯಮಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದು ನಿಜಕ್ಕೂ ಘೋರವೇ ಸರಿ.
ವರದಿ: ಸಂಜಯ್, ಟಿವಿ9, ಕಲಬುರಗಿ
Published On - 5:49 pm, Tue, 23 May 23