ಕೊಲಂಬಿಯಾದ ಪೆಡ್ರೊ ಲೊಪೆಜ್ ನಂಥ ಕ್ರಿಮಿನಲ್, ಸರಣಿ ಹಂತಕ, ರೇಪಿಸ್ಟ್ ಶತಮಾನಕ್ಕೊಬ್ಬನೇ ಇರಬಹುದು. ಅವನು ಎಷ್ಟು ಕೊಲೆಗಳನ್ನು ಮಾಡಿದ, ಎಷ್ಟು ಜನ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಹೂತುಹಾಕಿದ ಅಂತ ಖುದ್ದು ಅವನಿಗೆ ಗೊತ್ತಿಲ್ಲ. ಅವನನ್ನು ‘ಅಂಡೆಸ್ ನ ರಾಕ್ಷಸ’ ಅಂತಲೇ ಉಲ್ಲೇಖಿಸಲಾಗುತ್ತದೆ. ಅಂದಹಾಗೆ, ಅವನು ಅಷ್ಟು ಹೀನ ಕ್ರಿಮಿನಲ್ ಆಗಲು ಅವನು ಜೈಲಲ್ಲಿದ್ದಾಗ ಒಂದು ಘಟನೆಯೇ ಕಾರಣ ಎಂದು ಹೇಳಲಾಗುತ್ತದೆ.
ಬಾಲ್ಯದಿಂದಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಅವನಿಗೆ 1969ರಲ್ಲಿ ಕಳುವಿನ ಪ್ರಕರಣವೊಂದರಲ್ಲಿ 7-ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು. ಕಾರಾಗೃಹದಲ್ಲಿದ್ದಾಗ ಅವನ ಸೆಲ್ ನಲ್ಲಿದ್ದ ಇತರ ಮೂರು ಕೈದಿಗಳು ಅತ್ಯಂತ ಕ್ರೂರವಾಗಿ ಅವನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದರು.
ನಂತರ ಅವನು ಚಾಕುವಿನಂಥ ಒಂದು ಹರಿತವಾದ ಆಯುಧವನ್ನು ತಯಾರಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ ಅ ಮೂವರನ್ನು ಕೊಂದುಬಿಟ್ಟಿದ್ದ! ತನ್ನನ್ನು ತಾನು ರಕ್ಷಿಸಿಕೊಳ್ಳಲು ಲೊಪೆಜ್ ಕೊಲೆ ಮಾಡಿದನೆಂದು ಪೊಲೀಸರು ಅವನ ಪರ ವಾದಿಸಿದರೂ ನ್ಯಾಯಾಲಯ ಅವನಿಗೆ ಎರಡು ವರ್ಷಗಳ ಹೆಚ್ಚುವರಿ ಶಿಕ್ಷೆ ವಿಧಿಸಿತ್ತು.
1978ರಲ್ಲಿ ಲೊಪೆಜ್ ಜೈಲಿನಿಂದ ಹೊರಬಂದ ನಂತರ ತನ್ನ ಅಪರಾಧ ಸರಣಿಯನ್ನು ಆರಂಭಿಸಿದ. ಕೊಲಂಬಿಯಾ, ಈಕ್ವೆಡಾರ್ ಮತ್ತು ಪೆರು ದೇಶಗಳಲ್ಲಿ ಅವನು ನೂರಾರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಕೊಂದು ಹಾಕಿದ.
ಈಕ್ವೆಡಾರ್ ನ ಅಂಬ್ಯಾಟೊ ಎಂಬಲ್ಲಿ 1979 ದಿಢೀರನೆ ಪ್ರವಾಹ ಉಂಟಾದಾಗ ಅವನಿಂದ ಹತ್ಯೆಯಾದ ನಾಲ್ಕು ಬಾಲಕಿಯರ ಶವಗಳು ನೀರಿನಲ್ಲಿ ತೇಲಿಬಂದಿದ್ದವು.
ಶವಗಳ ಗುರುತು ಪತ್ತೆಯಾಗುತ್ತಿದ್ದಂತೆಯೇ ಅಂಬ್ಯಾಟೊನಲ್ಲೇ ಅವನು 12-ವರ್ಷ-ವಯಸ್ಸಿನ ಮರಿಯಾ ಪೊವೆಡ ಹೆಸರಿನ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ. ಆದರೆ ಬಾಲಕಿಯ ತಾಯಿ ಅದನ್ನು ನೋಡಿ ಅವನನ್ನು ತಡೆದಳು. ಆ ಮಹಿಳೆ ಮತ್ತು ಅವಳ ನೆರೆಹೊರೆಯವರು ಅವನನ್ನು ಥಳಿಸುವ ಪ್ರಯತ್ನ ಮಾಡಿದರು. ಸ್ಥಳೀಯ ಪೊಲೀಸರು ಅವನನ್ನು ರಕ್ಷಿಸಿದರಾದರೂ ಅಂತಿಮವಾಗಿ ಅವನನ್ನು ಬಂಧಿಸಲಾಯಿತು.
ಪೆಡ್ರೊ ಲೊಪೆಜ್ ಎಷ್ಟು ಜನರನ್ನು ಕೊಂದಿದ್ದು?
ಅವನಿಗೆ ಬಲಿಯಾದವರ ಸಂಖ್ಯೆ ಎಷ್ಟು ಅಂತ ಇದುವರೆಗೆ ನಿಖರವಾಗಿ ಗೊತ್ತಾಗಿಲ್ಲ. ದಕ್ಷಿಣ ಅಮೆರಿಕದ ಮಾಧ್ಯಮಗಳು ತಮಗೆ ಲಭ್ಯವಾದ ಮಾಹಿತಿ ಆಧರಿಸಿ ಒಂದೊಂದು ಸಂಖ್ಯೆಯನ್ನು ಹೇಳಿವೆ.
1980 ರಲ್ಲಿ ಬಂಧಿಸಲ್ಪಟ್ಟಾಗ ಅವನಿಗೆ 110 ಹತ್ಯೆಗಳನ್ನು ನಡೆಸಿದ ಅಪರಾಧದಲ್ಲಿ ಶಿಕ್ಷೆ ವಿಧಿಸಲಾಗಿತ್ತು.
ಆದರೆ ಲೊಪೆಜ್ ಇನ್ನೂ 240 ಕೊಲೆಗಳನ್ನು ನಡೆಸಿದ್ದಾಗಿ ತಾನೇ ಬಾಯ್ಬಿಟ್ಟಿದ್ದ. ಪ್ರವಾಹದಲ್ಲಿ ನಾಲ್ಕು ಶವಗಳು ತೇಲಿಬಂದಿದ್ದು ನೋಡಿದ ನಂತರ ಅವನಿಗೆ ತಾನು ಮಾಡಿದ ಕೊಲೆಗಳ ಸಂಖ್ಯೆ ಬಹಿರಂಗಪಡಿಸಬೇಕು ಅಂತ ಅನಿಸಿತ್ತಂತೆ!
ಪೆಡ್ರೊ ಲೊಪೆಜ್ ಎಲ್ಲಿದ್ದಾನೆ ಈಗ?
ಸನ್ನಡತೆ ಆಧಾರದ ಮೇಲೆ 1994 ರಲ್ಲಿ ಜೈಲಿಂದ ಹೊರಬಂದ ಪೆಡ್ರೊ ಲೊಪೆಜ್ ಎಲ್ಲಿ ಹೋದ, ಏನಾದ ಅನ್ನುವ ಬಗ್ಗೆ ಬಹಳ ಕಡಿಮೆ ಮಾಹಿತಿ ಇದೆ. ಅವನು ಅಕ್ರಮವಾಗಿ ಈಕ್ವೆಡಾರ್ ಪ್ರವೇಶಿಸಿದ್ದರಿಂದ ಅಲ್ಲಿನ ಸರ್ಕಾರ ಅವನನ್ನು ಕೊಲಂಬಿಯಾಗೆ ಗಡೀಪಾರು ಮಾಡಿತ್ತು.
ಕೊಲಂಬಿಯಾಗೆ ವಾಪಸ್ಸು ಹೋದ ಮೇಲೆ ಮತ್ತೊಂದು ಕೊಲೆ ಪ್ರಕರಣದಲ್ಲಿ ಅವನನ್ನು ವಿಚಾರಣೆಗೊಳಪಡಿಸಲಾಗಿತ್ತು. ಆ ಹತ್ಯೆಯ ವಿಧಾನ ಲೊಪೆಜ್ ನಡೆಸುತ್ತಿದ್ದ ವಿಧಾನಕ್ಕೆ ಹೋಲುತ್ತಿದ್ದರಿಂದ ಸರಣಿ ಹಂತಕನನ್ನು ಬಂಧಿಸಲಾಗಿತ್ತು.
1995ರಲ್ಲಿ ವಿಚಾರಣೆ ಶುರುವಾದಾಗ ನ್ಯಾಯಾಲಯದಲ್ಲಿ ಅವನು ವಿಲಕ್ಷಣವಾಗಿ ವರ್ತಿಸಲಾರಂಭಿಸಿದ್ದರಿಂದ ಹುಚ್ಚನೆಂದು ಘೋಷಿಸಿ 1998ರವರೆಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಆಸ್ಪತ್ರೆಯಿಂದ ಹೊರಬಂದ ಬಳಿಕ ಕೋರ್ಟ್ ಲೊಪೆಜ್ ನನ್ನು ಪ್ರತಿ ತಿಂಗಳು ಪೊಲೀಸರ ಎದರು ಹಾಜರಾಗಬೇಕೆನ್ನುವ ಷರತ್ತಿನೊಂದಿಗೆ 50 ಡಾಲರ್ ಶ್ಯೂರಿಟಿ ಪಡೆದು ಬಿಡುಗಡೆ ಮಾಡಿತು. ಆದರೆ ಅವನ್ಯಾವತ್ತೂ ಪೋಲೀಸರ ಮುಂದೆ ಪುನಃ ಹಾಜರಾಗಲಿಲ್ಲ.
ಅವನು ಇನ್ನೂ ಬದುಕಿದ್ದೇಯಾದರೆ ಎಲ್ಲಿದ್ದಾನೆ ಅಂತ ಯಾರಿಗೂ ಗೊತ್ತಾಗಿಲ್ಲ.
2002 ರಲ್ಲಿ ನಡೆದ ಮತ್ತೊಂದು ಹತ್ಯೆಗೆ ಸಂಬಂಧಿಸಿದಂತೆ ಇಂಟರ್ ಪೋಲ್ ಒಂದು ಹೊಸ ವಾರಂಟ್ ಹೊರಡಿಸಿತ್ತು. ಆದರೆ ಅವನು ಇಂಟರ್ ಪೋಲ್ ಗೂ ಸಿಗಲಿಲ್ಲ.
ಅಪರಾಧ ಲೋಕದ ಇತಿಹಾಸದಲ್ಲಿ ಪೆಡ್ರೊ ಲೊಪೆಜ್ ಒಬ್ಬ ಕುಖ್ಯಾತ ಸರಣಿ ಹಂತಕನೆಂದು ದಾಖಲಾಗಿದ್ದಾನೆ. ಸರಣಿ ಹಂತಕರ ಕುಖ್ಯಾತಿಯ ವಿಷಯಕ್ಕೆ ಬಂದರೆ ಬಾಲಕರನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದ ಇನ್ನೊಬ್ಬ ಕೊಲಂಬಿಯನ್ ಲೂಯಿಸ್ ಗವಾರಿಟೊ ನಂತರದ ಸ್ಥಾನ ಲೊಪೆಜ್ ನದ್ದೇ ಇರಬೇಕು.