ಕೋಲಾರ: ಪ್ರೀತಿಸಿದ ಮಗಳ ಮರ್ಯಾದ ಹತ್ಯೆ; ಯುವತಿ ಸಾವಿನ ಸುದ್ದಿ ಕೇಳಿ ರೈಲಿಗೆ ತಲೆ ಕೊಟ್ಟ ಪ್ರಿಯಕರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 28, 2023 | 12:19 PM

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮರ್ಯಾದ ಹತ್ಯೆ ನಡೆದಿದೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳ ಹತ್ಯೆ ಮಾಡಿದ್ದು, ಇತ್ತ ಯುವತಿ ಸಾವಿನ ಸುದ್ದಿ ತಿಳಿದು ಪ್ರಿಯಕರ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ನಡೆದಿದೆ.

ಕೋಲಾರ: ಪ್ರೀತಿಸಿದ ಮಗಳ ಮರ್ಯಾದ ಹತ್ಯೆ; ಯುವತಿ ಸಾವಿನ ಸುದ್ದಿ ಕೇಳಿ ರೈಲಿಗೆ ತಲೆ ಕೊಟ್ಟ ಪ್ರಿಯಕರ
ಕೀರ್ತಿ(20),ಗಂಗಾಧರ್(24)
Follow us on

ಕೋಲಾರ: ಜಿಲ್ಲೆಯ ಬಂಗಾರಪೇಟೆ(Bangarapete) ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮರ್ಯಾದ ಹತ್ಯೆ ನಡೆದಿದೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳ ಹತ್ಯೆ ಮಾಡಿದ್ದಾನೆ. ಕೊಲೆಯಾದ ಯುವತಿ ಕೀರ್ತಿ(20). ಇತ್ತ ತನ್ನ ಪ್ರೇಯಸಿ ಸಾವಿನ ಸುದ್ದಿ ತಿಳಿದು ಪ್ರಿಯಕರ ಗಂಗಾಧರ್(24)ಕೂಡ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು ಅನ್ಯಜಾತಿಯ ಯುವಕನನ್ನು ಪ್ರೀತಿಸಿದ ವಿಚಾರ ತಿಳಿದು ಯುವತಿ ತಂದೆ ಕತ್ತು ಹಿಸುಕಿ ಸಾಯಿಸಿರುವ ಧಾರುಣ ಘಟನೆ ನಡೆದಿದ್ದು, ಆರೋಪಿ ಯುವತಿ ತಂದೆ ಕೃಷ್ಣಮೂರ್ತಿ(46)ಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೇಮಿಸಲಾಗಿದೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆ ವಿವರ

ಕೊಲೆಯಾದ ಯುವತಿ ಕೋಲಾರ ಜಿಲ್ಲೆಯ ಕೆಜಿಎಫ್​ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ಇನ್ನು ಪಿಯುಸಿಯಲ್ಲೇ ಅನುತ್ತೀರ್ಣನಾಗಿದ್ದ ಮೃತ ಪ್ರಿಯಕರ ಗಂಗಾಧರ್​ ಗಾರೆ ಕೆಲಸ ಮಾಡುತ್ತಿದ್ದ. ಇಬ್ಬರ ಮನೆ ಕೂಡ ಒಂದೇ ಕಡೆಯಿದ್ದು, ಪ್ರೀತಿಸಲು ಶುರು ಮಾಡಿದ್ದು, ಮುಂದೆ ಮದುವೆಯಾಗಲೂ ನಿರ್ಧಾರ ಮಾಡಿದ್ದರು. ಇದಾದ ಬಳಿಕ ವಿಷಯ ಯುವತಿ ತಂದೆಗೆ ತಿಳಿದು ಸೋಮವಾರ ರಾತ್ರಿ ಜಗಳ ನಡೆದಿದೆ. ಈ ವೇಳೆ ಯುವತಿ ಅವನನ್ನೇ ಮದುವೆಯಾಗುವುದಾಗಿ ಹಟ ಹಿಡಿದಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಮಂಗಳವಾರ ಬೆಳಗಿನ ಜಾವ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಕೆಜಿಎಫ್​ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು ಕಾಫಿ ಎಸ್ಟೇಟ್​​ನಲ್ಲಿ ಅನಾಥ ಮಹಿಳೆಯ ಹತ್ಯೆ, ಮರ್ಡರ್​​​ ಪ್ರಕರಣ ಬಯಲಾಗಲು 7 ದಿನದ ನಂತರ ಜಿಲ್ಲಾ ಎಸ್​​ಪಿಗೆ ಬಂದಿತ್ತು ಫೋನ್ ಕರೆ

ಆತ್ಮಹತ್ಯೆ ಮಾಡಿಕೊಂಡ ಯುವಕ

ಇನ್ನು ಇಬ್ಬರ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾಗಿ ಅನ್ಯಜಾತಿಯ ಯುವಕನ ಮದುವೆಗೆ ಒಪ್ಪದ ತಂದೆಯೇ ಮಗಳನ್ನ ಕೊಲೆ ಮಾಡಿದ್ದ. ಈ ವಿಷಯ ತಿಳಿದು ಯುವಕ ಮೈಸೂರು ಚೆನ್ನೈ ಎಕ್ಸ್​ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ತಂದೆಯನ್ನ ಪೊಲೀಸರು ಬಂಧಿಸಿದ್ದು, ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Wed, 28 June 23