AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದ ಮೂವರು ಹೆಣ್ಣುಮಕ್ಕಳ ದುರ್ಮರಣ: ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ!

ನೀರು ಕುಡಿಯಲೆಂದು ಕೃಷಿ ಹೊಂಡಕ್ಕೆ ಇಳಿದ ಮೂವರು ಬಾಲಕಿಯರು ನೀರು ಪಾಲಾದ ಘಟನೆ ಗದಗದಲ್ಲಿ ನಡೆದಿದೆ. ಅದರಂತೆ ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದ ಮೂವರು ಹೆಣ್ಣುಮಕ್ಕಳ ದುರ್ಮರಣ: ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 17, 2022 | 3:01 PM

Share

ಗದಗ: ಕೃಷಿ ಹೊಂಡ(Farm pits)ದ ಬಳಿ ಹೋಗಿದ್ದ ಮೂವರು ಹೆಣ್ಣುಮಕ್ಕಳು ನೀರು ಪಾಲಾದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. ಸುನಿತಾ ಲಕ್ಷ್ಮಣ ಲಮಾಣಿ (9), ಅಂಕಿತಾ ಲಕ್ಷ್ಮಣ ಲಮಾಣಿ (13), ಸುನಿತಾ ಲೋಕೇಶ್ ಲಮಾಣಿ (10) ಮೃತ ದುರ್ದೈವಿಗಳು.

ಗೋವಾದಿಂದ ಚಿಕ್ಕಪ್ಪನ ಮದುವೆಗೆಂದು ಅತ್ತಿಕಟ್ಟಿ ತಾಂಡಾಕ್ಕೆ ಕುಟುಂಬ ಸಮೇತರಾಗಿ ಬಾಲಕಿಯರು ಬಂದಿದ್ದರು. ಈ ವೇಳೆ ಬಾಲಕಿಯರು ತಾಂಡಾ ಹೊರವಲಯದಲ್ಲಿರುವ ಜಮೀನಿಗೆ ತೆರಳಿದ್ದು, ಅಲ್ಲಿ ನೀರು ಕುಡಿಯಲೆಂದು ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಓರ್ವ ಬಾಲಕಿ ನೀರು ಕುಡಿಯುವ ಸಂದರ್ಭದಲ್ಲಿ ಕಾಲುಜಾರಿ ಹೊಂಡಕ್ಕೆ ಬಿದ್ದಿದ್ದಾಗ ಆಕೆಯನ್ನು ರಕ್ಷಿಸಲು ಮತ್ತಿಬ್ಬರು ಮುಂದಾಗಿದ್ದಾರೆ.

ಆದರೆ, ಯತ್ನ ಫಲಿಸಲದೆ ಮೂವರು ಬಾಲಕಿಯರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅದರಂತೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದ್ದು, ತಮ್ಮ ಮುದ್ದಾದ ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ತೋಟವೊಂದರ ಗೇಟ್ ಮೈಮೇಲೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ನಟರಾಜ್(50) ಗೇಟ್ ಮೈಮೇಲೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ. ಸೋಮವಾರ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ಇದ್ದ ಹಿನ್ನೆಲೆ ನಟರಾಜ್ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ಸಾಕಷ್ಟು ಜನಜಂಗುಳಿಯೂ ಇತ್ತು. ಈ ವೇಳೆ, ದೇವಸ್ಥಾನಕ್ಕೆ ಹೊಂದಿಕೊಂಡು ಇರುವ ಜಮೀನಿನ ಗೇಟ್ ಮುರಿದು ನಟರಾಜ್ ಮೇಲೆ ಬಿದ್ದಿದ್ದು, ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೂ ರವಾನಿಸಲಾಯಿತು. ಆದರೆ, ಇಂದು ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಘಟನೆ ಸಂದರ್ಭದಲ್ಲಿ ಜಮೀನಿನ ಮಾಲೀಕ ಜಯರಾಮ್ ಅವರ ಕಾಲಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಹೇಳುವ ಪ್ರಕಾರ, ನಟರಾಜ್ ಮೈಮೇಲೆ ಗಾಯಗಳಿಲ್ಲದಿರುವ ಹಿನ್ನೆಲೆ ಇದೊಂದು ಅನುಮಾನಸ್ಪದ ಸಾವು ಎಂದು ಹೇಳಿದ್ದಾರೆ. ಘಟನೆ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರಜೆ ಸಾವು

ಕೊಪ್ಪಳ: ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರಜೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ‌ ಆನೇಗುಂದಿ ಬಳಿ ನಡೆದಿದೆ. ಸಿಂಗಾಪುರದ ಪ್ರಜೆಯಾಗಿರುವ ಸೆಲ್ವನಾಥನ್(67) ಪ್ರವಾಸಕ್ಕೆಂದು ಜಿಲ್ಲೆಗೆ ಆಗಮಿಸಿದ್ದರು. ಅದರಂತೆ, ಆನೇಗುಂದಿ ಐತಿಹಾಸಿಕ ನವಬೃಂದಾವನಕ್ಕೆ ಹೋಗುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಘಟನೆಯು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.