ಮೈಸೂರು, ಫೆ.01: ಸಾಲಗಾರರ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಆಲನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯರಗನಹಳ್ಳಿ ದಂಪತಿ ವಿಶ್ವ(34), ಸುಶ್ಮಾ(28) ಆತ್ಮಹತ್ಯೆ ಮಾಡಿಕೊಂಡವರು. ದಂಪತಿ (Couple) ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸಾಮಾಜಿಕ ಜಲತಾಣದಲ್ಲಿ (Social Media) ವಿಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಸಂಬಂಧ ಮೈಸೂರಿನ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಮೃತ ವಿಶ್ವ ಅವರು ತಮಗೆ ಪರಿಚಯಸ್ಥನಾಗಿದ್ದ ಶಿವು ಎಂಬುವವನಿಗೆ 5 ಲಕ್ಷ ರೂ. ಸಾಲ ಕೊಡಿಸಿದ್ದರು. ಚೋರನಹಳ್ಳಿ ರಾಜಣ್ಣ ಎಂಬುವವರ ಬಳಿ ತಮ್ಮ ಚಿನ್ನಾಭರಣ ಅಡವಿಟ್ಟು, ಕೆಲವರ ಬಳಿ ಸಾಲಕ್ಕೆ ಹಣ ಪಡೆದು ಶಿವುಗೆ ಸಾಲ ಕೊಡಿಸಿ ಸಹಾಯ ಮಾಡಿದ್ದರು. ಆದರೆ ಶಿವು ಸಾಲ ವಾಪಸ್ ನೀಡದೆ ತಕರಾರು ಮಾಡಿದ್ದ. ಹಿನ್ನೆಲೆ ಸಾಲಗಾರರ ಕಿರುಕುಳ ಹೆಚ್ಚಾಗಿತ್ತು. ಸಾಲ ತೀರಿಸದೆ ಚೋರನಹಳ್ಳಿ ರಾಜಣ್ಣ ವಿಶ್ವ ಅವರ ಚಿನ್ನಾಭರಣ ಹಿಂದಿರುಗಿಸಲು ನಿರಾಕರಿಸಿದ್ದರು. ಇದರಿಂದ ನೊಂದ ವಿಶ್ವ ಸಾಲ ನೀಡಿದ್ದ ರಾಜಣ್ಣ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ನಿನ್ನೆ ಕೊಲೆಯೊಂದು ನಡೆದಿದೆ. ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಅರ್ಪಿತಾ (24) ಕೊಲೆಯಾದ ಪತ್ನಿ. ಹನುಮಂತ (28) ಕೊಲೆ ಮಾಡಿದ ಆರೋಪಿ ಪತಿ.
ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದು ಕಿವಿಯಲ್ಲಿ ರಕ್ತ ಬಂದು ಅರ್ಪಿತಾ ಸಾವನ್ನಪ್ಪಿದ್ದಾರೆ. ಗ್ರಾಮ ದೇವತೆಯ ಜಾತ್ರೆಯ ದಿನ ಘಟನೆ ನಡೆದಿದೆ. ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೂಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ಪಟ್ಟಣದ ಎಪಿಎಂಸಿ ಬಳಿ ದುರ್ಘಟನೆ ನಡೆದಿದ್ದು, ರಸ್ತೆಯಲ್ಲಿ ಕಾದಾಡ್ತಿದ್ದ ಗೂಳಿ ವಿದ್ಯಾರ್ಥಿ ನಿಖಿಲ್ ಮೇಲೆ ನುಗ್ಗಿ ಬಂದಿದೆ. ಈ ವೇಳೆ ಗೂಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಾಲಕ ಟ್ರ್ಯಾಕ್ಟರ್ ಕಡೆ ನುಗ್ಗಿದ್ದಾನೆ. ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಹರಿದು 14 ವರ್ಷದ ನಿಖಿಲ್ ಕೋಳಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ