ತುಮಕೂರು: ಉಗಾಂಡದ (Uganda) ನಾಲ್ವರು ಮಹಿಳೆಯರು ಪೊಲೀಸ್ ಹಾಗೂ ಪಾಸ್ ಪೋರ್ಟ್ ಅವಧಿ ಮುಗಿದ ವಿದೇಶಿಗರ ನಿರಾಶ್ರಿತ ಕೇಂದ್ರದ (Foreigners Refugee Centre) ಸಿಬ್ಬಂದಿ ಮೇಲೆ ದಾಳಿ ನಡೆಸಿದ ಘಟನೆ ಜಿಲ್ಲೆಯ ದಿಬ್ಬೂರಿನಲ್ಲಿ ನಡೆದಿದೆ. ಪಿಎಸ್ಐ ಚಂದ್ರಕಲಾ, ಡಬ್ಲ್ಯುಪಿಸಿ ತಾಸೀನಾ ಬಾನು, ನಿರಾಶ್ರಿತ ಕೇಂದ್ರದ ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಎಂಬುವರ ಮೇಲೆ ದಾಳಿ ನಡೆಸಲಾಗಿದೆ.
ಪಾಸ್ಪೋರ್ಟ್ ಅವಧಿ ಮುಕ್ತಾಯದ ನಂತರವೂ ಅಕ್ರಮವಾಗಿ ಇಲ್ಲೇ ಉಳಿದುಕೊಂಡಿದ್ದ ವಿದೇಶಿ ಪ್ರಜೆಗಳನ್ನು ದಿಬ್ಬೂರಿನಲ್ಲಿರುವ ವಿದೇಶಿಗರ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿತ್ತು. ಈ ಕೇಂದ್ರದಲ್ಲಿ ಸುಮಾರು 30 ಜನರಿದ್ದಾರೆ. ಅದರಂತೆ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ನೀಡಲು ಹೋದಾಗ ಉಗಾಂಡದ ನಾಲ್ವರು ಮಹಿಳೆಯರು ಸಿಬ್ಬಂದಿಯನ್ನು ಕೊಠಡಿಯಲ್ಲಿ ಕೂಡಿಹಾಕಿ ಚಾಕು ಹಿಡಿದುಕೊಂಡು ಕೊಲೆ ಯತ್ನ ನಡೆಸಿದ್ದಾರೆ.
ಇದನ್ನೂ ಓದಿ: Ramanagara News: ಮಹಿಳೆ ಮೇಲೆ ದಾಳಿ ಮಾಡಿದ ರಾಷ್ಟ್ರೀಯ ಪಕ್ಷಿ ನವಿಲು: ಅರಣ್ಯ ಇಲಾಖೆಗೆ ದೂರು
ಘಟನೆಯಲ್ಲಿ ಪಿಎಸ್ಐ ಚಂದ್ರಕಲಾ, ಡಬ್ಲ್ಯುಪಿಸಿ ತಾಸೀನಾ ಬಾನು, ನಿರಾಶ್ರಿತ ಕೇಂದ್ರದ ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಎಂಬವರ ಕೈ ಕಾಲುಗಳಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿದ ಎಸ್ಪಿ ರಾಹುಲ್ ಕುಮಾರ್, ಕಳೆದ ಎರಡು ತಿಂಗಳಿಂದ ತುಮಕೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತರ ಕೇಂದ್ರ ಓಪನ್ ಆಗಿದೆ. ಆ ಕೇಂದ್ರದಲ್ಲಿ ಬಾಂಗ್ಲಾದೇಶ, ನೈಜೀರಿಯ ಸೇರಿದಂತೆ ಒಟ್ಟು 5 ದೇಶದ 27 ವಿದೇಶಿ ಮಹಿಳಾ ಪ್ರಜೆಗಳು ಇದ್ದಾರೆ. ಬೇರೆ ಬೇರೆ ಕಾರಣಗಳಿಂದ ಹಾಗೂ ವಿಸಾ ಮುಗಿದ ಹಿನ್ನೆಲೆ ಅವರನ್ನ ಇಲ್ಲಿ ಕರೆತಂದು ಇರಿಸಲಾಗಿದೆ. ಇವತ್ತು ಸಂಜೆ ಸ್ಟವ್ಗಳನ್ನ ಬಳಸುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಪರಿಶೀಲನೆ ನಡೆಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಜೊತೆಗೆ ಇಲ್ಲಿಗೆ ಬಂದಿದ್ದಾರೆ. ಈ ವೇಳೆ ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗುತ್ತದೆ. ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತೇವೆ ಎಂದರು.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Fri, 7 July 23