ವಿಕೃತಕಾಮಿ ಉಮೇಶ್ ರೆಡ್ಡಿಗೆ ಹೈಕೋರ್ಟ್ 6 ವಾರಗಳ ಜೀವದಾನ ನೀಡಿದೆ. ಶತಾಯಗತಾಯ ಗಲ್ಲು ಶಿಕ್ಷೆಯಿಂದ ಪಾರಾಗಲು ಸರ್ವಪ್ರಯತ್ನ ನಡೆಸಿರುವ ಉಮೇಶ್ ರೆಡ್ಡಿ ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾನೆ. ಇದಕ್ಕಾಗಿ ಪ್ರಯತ್ನ ನಡೆಸಿರುವ ಉಮೇಶ್ ರೆಡ್ಡಿ ಪರ ವಕೀಲರು ಸುಪ್ರೀಂಕೋರ್ಟ್ ತೀರ್ಪನ್ನೇ ಆಯುಧವನ್ನಾಗಿ ಬಳಸಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಉಮೇಶ್ ರೆಡ್ಡಿ ಪ್ಲಾನ್ ಏನು? ಸುಪ್ರೀಂಕೋರ್ಟ್ನಲ್ಲಿ ಉಮೇಶ್ ರೆಡ್ಡಿಗೆ ರಿಲೀಫ್ ಸಿಗುತ್ತಾ ಅನ್ನೋ ವಿಶ್ಲೇಷಣೆ ಇಲ್ಲಿದೆ.
ಉಮೇಶ್ ರೆಡ್ಡಿ ಗಲ್ಲಿನಿಂದ ಪಾರಾಗಲು 3 ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದ್ದ. ಕ್ಷಮಾದಾನ ನೀಡಲು ರಾಷ್ಟ್ರಪತಿಗಳ ವಿಳಂಬ, ಒಂಟಿ ಸೆರೆವಾಸ, ಮಾನಸಿಕ ಖಿನ್ನತೆಯನ್ನೇ ಮುಂದಿಟ್ಟುಕೊಂಡು ಸುಪ್ರೀಕೋರ್ಟ್ನಿಂದ ಜೀವದಾನ ಪಡೆಯಲು ಮುಂದಾಗಿದ್ದಾನೆ. ಬುಧವಾರವಷ್ಟೇ ಹೈಕೋರ್ಟ್ ಈತ ಮುಂದಿಟ್ಟಿದ್ದ ಕಾರಣಗಳನ್ನು ಅಸಮಂಜಸವೆಂದು ತಳ್ಳಿಹಾಕಿದೆ. ಆದರೆ 6 ವಾರಗಳ ಕಾಲ ಜೀವದಾನವನ್ನು ಕರುಣಿಸಿದೆ. ಸದ್ಯ ಸಿಕ್ಕಿರುವ 6 ವಾರಗಳಲ್ಲಿ ಸುಪ್ರೀಂಕೋರ್ಟ್ ಮನವೊಲಿಸಿ ಗಲ್ಲಿನಿಂದ ಪಾರಾಗಲು ಉಮೇಶ್ ರೆಡ್ಡಿ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಹೈಕೋರ್ಟ್ ತೀರ್ಪಿನ ಪ್ರತಿಗಾಗಿ ಕಾಯುತ್ತಿರುವ ವಕೀಲರು, ಪ್ರತಿ ಸಿಕ್ಕ ಕೂಡಲೇ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ಶತ್ರುಘ್ನ ಚೌಹಾಣ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಗೆ ಒಳಗಾಗಿದ್ದ 15 ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. ಇದೀಗ ಅದೇ ಮಾನದಂಡವನ್ನು ಮುಂದಿಟ್ಟು ತನಗೂ ಗಲ್ಲು ಶಿಕ್ಷೆಯ ಬದಲು ಜೀವಾವಧಿ ವಿಧಿಸುವಂತೆ ಕೋರಲು ಉಮೇಶ್ ರೆಡ್ಡಿ ಮುಂದಾಗಿದ್ದಾನೆ.
ಏನಿದು ಶತೃಘ್ನ ಚೌಹಾಣ್ ಪ್ರಕರಣ?
ಸುಪ್ರೀಂಕೋರ್ಟ್ ಶತೃಘ್ನ ಚೌಹಾಣ್ ಪ್ರಕರಣದಲ್ಲಿ ಕರ್ನಾಟಕದ ಇಬ್ಬರೂ ಸೇರಿದಂತೆ 15 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿವರ್ತಿಸಿತ್ತು. ಕೆಲವರ ಕ್ಷಮಾದಾನ ಅರ್ಜಿಯನ್ನು ತೀರ್ಮಾನಿಸಲು ರಾಷ್ಟ್ರಪತಿಗಳು 6 ರಿಂದ 9 ವರ್ಷಗಳ ಕಾಲಾವಕಾಶ ತೆಗೆದುಕೊಂಡಿದ್ದರು. ಕ್ಷಮಾದಾನ ಅರ್ಜಿ ತೀರ್ಮಾನಿಸಲು ರಾಷ್ಟ್ರಪತಿಗಳ ಸುದೀರ್ಘ ವಿಳಂಬ ನ್ಯಾಯಸಮ್ಮತವಲ್ಲ ಎಂದಿದ್ದ ಸುಪ್ರೀಂಕೋರ್ಟ್ ಇದೇ ಕಾರಣಕ್ಕೆ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು. ಇನ್ನೂ ಕೆಲವು ಅಪರಾಧಿಗಳು ಮಾನಸಿಕ ಖಾಯಿಲೆ, ಸ್ಕ್ರಿಜೋಫ್ರೇನಿಯಾದಂತಹ ಗುಣಪಡಿಸಲಾಗದ ಖಾಯಿಲೆಯಿಂದ ಬಳಲುತ್ತಿದ್ದ ಕಾರಣಕ್ಕೆ ಅವರ ಗಲ್ಲು ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿವರ್ತಿಸಲಾಗಿತ್ತು. ಇದಲ್ಲದೇ ಅಪರಾಧಿಗಳನ್ನು ಕಾನೂನು ಬಾಹಿರವಾದ ಒಂಟಿ ಸೆರೆವಾಸದಲ್ಲಿಟ್ಟರೆಂಬ ಕಾರಣವನ್ನೂ ಶಿಕ್ಷೆ ಕಡಿತಕ್ಕೆ ಕಾರಣವನ್ನಾಗಿ ನೀಡಲಾಗಿತ್ತು. ಇದನ್ನೇ ಮುಂದಿಟ್ಟು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಉಮೇಶ್ ರೆಡ್ಡಿ ಸಿದ್ಧತೆ ನಡೆಸಿದ್ದಾನೆ.
ಆದರೆ, ಉಮೇಶ್ ರೆಡ್ಡಿ ಪಾಲಿಗೆ ಈ ಹಾದಿಯೂ ಸಲೀಸಾಗಿಲ್ಲ. ಏಕೆಂದರೆ ಇದೇ ಕಾರಣಗಳನ್ನು ಮುಂದಿಟ್ಟು ಉಮೇಶ್ ರೆಡ್ಡಿ ಪರ ವಕೀಲರು ಮಂಡಿಸಿದ್ದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಉಮೇಶ್ ರೆಡ್ಡಿ ಕ್ಷಮಾದಾನ ಅರ್ಜಿ ತೀರ್ಮಾನಿಸಲು ರಾಷ್ಟ್ರಪತಿಗಳು ಐದಾರು ವರ್ಷ ವಿಳಂಬ ಮಾಡಿಲ್ಲ. ಒಂದೂವರೆ ವರ್ಷಗಳ ವಿಳಂಬ ಅಸಹಜವಲ್ಲ ಎಂದಿರುವ ಹೈಕೋರ್ಟ್ ಒಂಟಿ ಸೆರೆವಾಸ, ಮಾನಸಿಕ ಖಿನ್ನತೆಯ ಕಾರಣಗಳನ್ನೂ ತಳ್ಳಿಹಾಕಿದೆ. ಹೀಗಾಗಿ ಸದ್ಯ ಉಮೇಶ್ ರೆಡ್ಡಿ ಸುಪ್ರೀಂಕೋರ್ಟ್ ಮೊರೆ ಹೋದರೂ ಬಹುಕಾಲ ನೇಣು ಕುಣಿಕೆಯಿಂದ ಪಾರಾಗುವ ಸಾಧ್ಯತೆ ಇಲ್ಲ. ಆದರೂ ಸುಪ್ರೀಂಕೋರ್ಟ್ ನೀಡುವ ತೀರ್ಪೇ ಅಂತಿಮವಾದ್ದರಿಂದ ಎಲ್ಲರ ಗಮನ ಸರ್ವೋಚ್ಚ ನ್ಯಾಯಾಲಯದ ಮೇಲಿದೆ.
ರಮೇಶ್, ಟಿವಿ.9, ಬೆಂಗಳೂರು.
ಇದನ್ನೂ ಓದಿ:
Umesh Reddy Profile: ಯಾರೀತ ಉಮೇಶ್ ರೆಡ್ಡಿ? ಈತನ ಹೆಸರು ಕೇಳಿದರೆ ಜನರೇಕೆ ಭಯ ಪಡುತ್ತಿದ್ದರು?