Sign In

By signing in or creating an account, you agree with Associated Broadcasting Company's Terms & Conditions and Privacy Policy.

Umesh Reddy Profile: ಯಾರೀತ ಉಮೇಶ್ ರೆಡ್ಡಿ? ಈತನ ಹೆಸರು ಕೇಳಿದರೆ ಜನರೇಕೆ ಭಯ ಪಡುತ್ತಿದ್ದರು?

ಉಮೇಶ್ ರೆಡ್ಡಿಯನ್ನು ಬಂಧಿಸಿದ ಪೊಲೀಸರಿಗೆ 10 ಬ್ರಾ, 18 ಪ್ಯಾಂಟೀ, 6 ಸೀರೆ, 2 ನೈಟಿ, 8 ಚೂಡಿದಾರ, 4 ಬ್ಲೌಸ್​ಗಳು ದೊರೆತಿದ್ದವು.

Umesh Reddy Profile: ಯಾರೀತ ಉಮೇಶ್ ರೆಡ್ಡಿ? ಈತನ ಹೆಸರು ಕೇಳಿದರೆ ಜನರೇಕೆ ಭಯ ಪಡುತ್ತಿದ್ದರು?
ಉಮೇಶ್ ರೆಡ್ಡಿ
Follow us
Guruganesh Bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 29, 2021 | 5:49 PM

ಈತನ ಹೆಸರು ಕೇಳಿದರೆ ಸಾಕು ವಿಕೃತಕಾಮಿ, ಅತ್ಯಾಚಾರಿ, ಸರಣಿ ಹಂತಕ ಎಂಬ ಗುಣವಿಶೇಷಕಗಳೇ ಮುನ್ನೆಲೆಗೆ ಬರುತ್ತವೆ. ಸರಣಿ ಅತ್ಯಾಚಾರ, ಕೊಲೆ, 9 ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲುಶಿಕ್ಷೆ, 6ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿ.. ಹೀಗೆ ಈತ ನಡೆಸಿದ ಕುಕೃತ್ಯಗಳ ಲೆಕ್ಕ ದೊಡ್ಡದು. ಕರ್ನಾಟಕವನ್ನೇ ಏಕೆ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಅಪರಾಧಿ ಈತ. ಹೆಸರು ಉಮೇಶ್ ರೆಡ್ಡಿ. ವಿಕೃತಕಾಮಿ ಉಮೇಶ್ ರೆಡ್ಡಿಗೆ ಇಂದು ಕರ್ನಾಟಕ ಹೈಕೋರ್ಟ್​ನಿಂದ ಶಿಕ್ಷೆ ಪ್ರಮಾಣ ಪ್ರಕಟವಾಗಿದ್ದು, ಗಲ್ಲು ಶಿಕ್ಷೆ ಖಾಯಂಗೊಂಡಿದೆ. ಹಾಗಾದರೆ ಯಾರೀತ ಉಮೇಶ್ ರೆಡ್ಡಿ? ಆತ ಮಾಡಿದ ಅಪರಾಧವೇನು? ಓದಿ

ನಿಮಗೆ ಆಶ್ಚರ್ಯವಾಗಬಹುದು, ಉಮೇಶ್ ರೆಡ್ಡಿ ಮೂಲತಃ ಪೊಲೀಸ್ ಕಾನ್​ಸ್ಟೆಬಲ್. ಉಮೇಶ್ ರೆಡ್ಡಿ ಅಲಿಯಾಸ್ ರಮೇಶ್ ಅಲಿಯಾಸ್ ರಮೇಶ್ ಅಥವಾ ವೆಂಕಟೇಶ್ ಎಂದೆಲ್ಲ ಕರೆಸಿಕೊಳ್ಳುವ ಈತನ ಊರು ಚಿತ್ರದುರ್ಗ. 1995ರಲ್ಲಿ ಪಿಯು ಶಿಕ್ಷಣ ಮುಗಿಸಿ 1996ರಲ್ಲಿ ಸಿಆರ್​ಪಿಎಫ್​ನಲ್ಲಿ (CRPF: Central Reserve Police Force) ಕಾಶ್ಮೀರದಲ್ಲಿ ಕಾನ್​ಸ್ಟೆಬಲ್ ಆಗಿ ಕೆಲಸ ನಿರ್ವಹಿಸಿದ್ದ. ಆನಂತರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲೂ ಕೆಲಸ ಮಾಡಿದ್ದ. ಆ ಅವಧಿಯಲ್ಲಿ ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದ. ಆದರೆ ಪೊಲೀಸ್ ಪರೇಡ್ ವೇಳೆ ಸಂತ್ರಸ್ತ ಬಾಲಕಿ ಉಮೇಶ್ ರೆಡ್ಡಿಯನ್ನು ಗುರುತು ಪತ್ತೆಹಚ್ಚಿದ್ದಳು. ನಂತರ ಆತನನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು.

ಮೈಸೂರು, ಮುಂಬೈ, ಅಹಮದಾಬಾದ್, ಬರೋಡಾ, ಪುಣೆ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಉಮೇಶ್ ರೆಡ್ಡಿ ವಿರುದ್ಧ ತಲಾ ಎರಡು ಕೇಸುಗಳು ದಾಖಲಾಗಿದ್ದವು. ಬೆಂಗಳೂರಿನ ಪೀಣ್ಯದಲ್ಲಿ 4, ಗಂಗಮ್ಮನಗುಡಿ, ಜಾಲಹಳ್ಳಿ, ಯಶ್ವಂತಪುರಗಳಲ್ಲಿ ತಲಾ ಒಂದು ಪ್ರಕರಣಗಳೂ ಉಮೇಶ್ ರೆಡ್ಡಿ ವಿರುದ್ಧ ದಾಖಲಾಗಿತ್ತು. 1990 ಉತ್ತರಾರ್ಧದಲ್ಲಿ ಉಮೇಶ್ ರೆಡ್ಡಿ ಎಂಬ ಹೆಸರು ಕೇಳಿದರೆ ಸಾಕು, ಸಾರ್ವಜನಿಕರು ಬೆಚ್ಚಿಬೀಳುತ್ತಿದ್ದರು.

ಅಪರಾಧವೇನು? ಒಬ್ಬಂಟಿ ಮಹಿಳೆಯರು ಇರುವ ಮನೆಯನ್ನು ಉಮೇಶ್ ರೆಡ್ಡಿ ಗುರುತಿಸುತ್ತಿದ್ದ. ಸಮಯ ನೋಡಿ ಅಂತಹ ಮನೆಗಳಿಗೆ ನುಗ್ಗಿ ಮಹಿಳೆಯರ ಕೈಕಾಲು ಕಟ್ಟಿಹಾಕಿ ಅತ್ಯಾಚಾರ ಎಸಗುತ್ತಿದ್ದ. ಮನೆಯಲ್ಲಿ ಪುರುಷರು ಇಲ್ಲದ ವೇಳೆಯಲ್ಲಿ ಕುಡಿಯಲು ನೀರು ಕೇಳಿಯೋ, ವಿಳಾಸ ತಿಳಿಸುವಂತೆಯೋ ಮನೆಯ ಆವರಣ ಪ್ರವೇಶಿಸುತ್ತಿದ್ದ. ಮಹಿಳೆಯರು ಬಾಗಿಲು ತೆಗೆದರೆ ಅವರ ಮೇಲೆ ಆಕ್ರಮಣ ನಡೆಸಿ ಮನೆಯೊಳಗೆ ಪ್ರವೇಶಿಸುತ್ತಿದ್ದ. ಮಹಿಳೆಯರ ಒಳ ಉಡುಪುಗಳನ್ನು ಸಂಗ್ರಹಿಸುತ್ತಿದ್ದ. ನಂತರ ಮನೆ ಲೂಟಿ ಮಾಡುತ್ತಿದ್ದ. ಆತನನ್ನು ಬಂಧಿಸಿದ ಪೊಲೀಸರಿಗೆ 10 ಬ್ರಾ, 18 ಪ್ಯಾಂಟಿ, 6 ಸೀರೆ, 2 ನೈಟಿ, 8 ಚೂಡಿದಾರ, 4 ಬ್ಲೌಸ್​ಗಳು ದೊರೆತಿದ್ದವು.

ಪೊಲೀಸರ ಕಣ್ಣಿಗೆ ಮಣ್ಣೆರೆಚುವಲ್ಲಿ ನಿಸ್ಸೀಮ 1997ರ ಮಾರ್ಚ್​ನಲ್ಲಿ ಮೊದಲ ಬಾರಿಗೆ ಉಮೇಶ್ ರೆಡ್ಡಿ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಾಗ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಪರಾರಿಯಾಗಿದ್ದ. ಆದರೆ ಮುಂದಿನ ಜುಲೈ ತಿಂಗಳಲ್ಲೇ ಪೊಲೀಸರು ಈತನನ್ನು ಮತ್ತೆ ಬಂಧಿಸಿದ್ದರು. ಆದರೂ ಬಂಧಿಸಲ್ಪಟ್ಟ 24 ಗಂಟೆಗಳಲ್ಲೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮಂಗಮಾಯವಾಗಿದ್ದ ಮಹಾನ್ ಕೇಡಿಯೀತ. ಆನಂತರ ಬೆಂಗಳೂರಿನಲ್ಲಿ ಉಮೇಶ್ ರೆಡ್ಡಿಯನ್ನು 1998 ಮಾರ್ಚ್ 2ರಂದು ಬೆಂಗಳೂರಿನ ವಿಧವೆಯೋರ್ವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಉಮೇಶ್ ರೆಡ್ಡಿಯನ್ನು ಬೆಂಗಳೂರು ಪೊಲೀಸರು 2002 ರಲ್ಲಿ ಮತ್ತೆ ಬಂಧಿಸಿದ್ದರು. ಈವರೆಗೆ ಒಟ್ಟು 21 ಪ್ರಕರಣಗಳ ವಿಚಾರಣೆ ಎದುರಿಸಿದ್ದ ಉಮೇಶ್ ರೆಡ್ಡಿ, 9 ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ.  11 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ. ಹಿರಿಯೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಇನ್ನೂ ಮುಕ್ತಾಯಗೊಂಡಿಲ್ಲ. ಸುದೀರ್ಘ ಕಾಲದ ತನಿಖೆ ಮತ್ತು ವಿಚಾರಣೆಯ ವೇಳೆ ಕನಿಷ್ಠ 6 ಬಾರಿ ಪೊಲೀಸರಿಂದ ತಪ್ಪಿಸಿಕೊಂಡು ಪಾರಾಗಿದ್ದ ಈತ ಆಗಲೂ ಮಹಿಳೆಯರ ಮೇಲೆ ವಿಕೃತಿ ಮೆರೆದಿದ್ದ.

ಫೆಬ್ರವರಿ 28, 1998ರಂದು ಬೆಂಗಳೂರಿನ  ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಉಮೇಶ್ ರೆಡ್ಡಿ ಜೈಲಿನಲ್ಲಿ ಬೆತ್ತಲಾಗಿ ತಿರುಗುತ್ತಿದ್ದ ಎಂದು ಸಹ ವರದಿಯಾಗಿತ್ತು. ಹೈಕೋರ್ಟ್ ಅರ್ಜಿಯ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯಲ್ಲಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ನ್ಯಾಯಾಧೀಶರೇ ದೆವ್ವ ಎಂದು ಕರೆದಿದ್ದರು ವಿಚಾರಣೆಯ ವೇಳೆ ನ್ಯಾಯಾಧೀಶರೊಬ್ಬರು ಅನೇಕಾನೇಕ ಅಪರಾಧಗಳ ನಂತರವೂ ಬದಲಾಗದ ಈತನನ್ನು ‘ದೆವ್ವ’ ಎಂದು ಕರೆದಿದ್ದರು. ಅಲ್ಲದೇ ಎಷ್ಟೇ ಶಿಕ್ಷಿಸಿದರೂ ಕೊಂಚವೂ ಬದಲಾವಣೆ ತರಲು ಸಾಧ್ಯವಿಲ್ಲದ ಅಪರಾಧಿ ಉಮೇಶ್ ರೆಡ್ಡಿ ಎಂದು ವ್ಯಾಖ್ಯಾನಿಸಿದ್ದರು. ಇಷ್ಟೆಲ್ಲ ಅಪರಾಧಗಳು ಸಾಬೀತಾದ ನಂತರವೂ ಏಕೆ ಇಂತಹವರನ್ನು ಜೈಲಿನಲ್ಲಿ ಸೆರೆಯಿಡಬೇಕು? ಮತ್ತೊಮ್ಮೆ ಪರಾರಿಯಾಗಿ ಹೊಸ ಹೊಸ ಅಪರಾಧ ಮಾಡಲೆಂದೇ? ಎಂದು ಸಹ ಅವರು ಪ್ರಶ್ನಿಸಿದ್ದರು.

2012ರಲ್ಲಿ ಉಮೇಶ್ ರೆಡ್ಡಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ತಿರಸ್ಕರಿಸಿದ್ದರು. ನಂತರ ಈತನ ತಾಯಿ ಗೌರಮ್ಮ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಪೊಲೀಸರು ನೈಜ ಅಪರಾಧಿಗಳನ್ನು ಬಂಧಿಸಿಲ್ಲ. ಬದಲಿಗೆ ತನ್ನ ಮಗನನ್ನು ಅಪರಾಧಿಯನ್ನಾಗಿ ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದ ಗೌರಮ್ಮ, ಉಮೇಶ್ ರೆಡ್ಡಿ ಒಬ್ಬನೇ ಕುಟುಂಬದಲ್ಲಿ ದುಡಿಯಬಲ್ಲ ವ್ಯಕ್ತಿ. ಹೀಗಾಗಿ ಆತನಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದರು. ಆದರೆ ಅವರ ಅರ್ಜಿಯನ್ನು ರಾಷ್ಟ್ರಪತಿ ಪುರಸ್ಕರಿಸಲಿರಲಿಲ್ಲ.

ಕನ್ನಡ ಹಿರಿತೆರೆಯಲ್ಲಿ ಉಮೇಶ್ ರೆಡ್ಡಿಯ ಕಥೆ ಎನ್ನಲಾದ ‘ಖತರ್ನಾಕ್’ ಎಂಬ ಸಿನಿಮಾವೊಂದು 2013ರಲ್ಲಿ ಹೆಸರಲ್ಲಿ ತೆರೆಕಂಡಿತ್ತು.

ಇದನ್ನೂ ಓದಿ: 

Umesh Reddy: ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ; ಹೈಕೋರ್ಟ್​ನಿಂದ ಮಹತ್ವದ ತೀರ್ಪು ಪ್ರಕಟ

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೈಲು ಶಿಕ್ಷೆಗೊಳಗಾಗಿದ್ದ ಅಪರಾಧಿ ಬಂಧನ