ವಾಯುಪಡೆ ಮುಖ್ಯಸ್ಥರಾಗಿ ವಿ.ಆರ್.ಚೌಧರಿ ಅಧಿಕಾರ ಸ್ವೀಕಾರ
ವಿ.ಆರ್.ಚೌಧರಿ ಅವರು 3800 ಗಂಟೆಗೂ ಹೆಚ್ಚು ಅವಧಿ ಫೈಟರ್ ವಿಮಾನ ಮತ್ತು ತರಬೇತಿ ವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದಾರೆ.
ದೆಹಲಿ: ವಾಯುಪಡೆ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಗುರುವಾರ ಅಧಿಕಾರ ಸ್ವೀಕರಿಸಿದರು. ಡಿಸೆಂಬರ್ 1982ರಲ್ಲಿ ವಾಯುಪಡೆ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಚೌಧರಿ 3800 ಗಂಟೆಗೂ ಹೆಚ್ಚು ಅವಧಿ ಫೈಟರ್ ವಿಮಾನ ಮತ್ತು ತರಬೇತಿ ವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದಾರೆ. ನಿರ್ಗಮಿತ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಧೋರಿಯಾ ಅವರು ಚೌಧರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನಾಲ್ಕು ದಶಕಗಳ ಅವಧಿಯ ವೃತ್ತಿ ಜೀವನದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಚೌಧರಿ ತೆಗೆದುಕೊಂಡಿದ್ದಾರೆ. ಹಲವು ಕಮಾಂಡ್ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ. ಮಿಗ್-29 ಸ್ಕ್ವಾಡ್ರನ್, ಎರಡು ವಾಯುಪಡೆ ಸ್ಟೇಷನ್ಗಳು ಮತ್ತು ಪಶ್ಚಿಮ ವಾಯುನೆಲೆ ಜವಾಬ್ದಾರಿ ನಿರ್ವಹಿಸಿದ ಅನುಭವ ಅವರಿಗಿದೆ. ವಾಯುಪಡೆಯ ಉಪಮುಖ್ಯಸ್ಥರು, ಪೂರ್ವ ವಾಯುನೆಲೆಯ ಏರ್ಸ್ಟಾಫ್ ಆಫೀಸರ್, ಏರ್ಫೋರ್ಸ್ ಅಕಾಡೆಮಿಯ ಕಮಾಂಡೆಂಟ್ ನೇಮಕಾತಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರು.
ವಾಯುಪಡೆಯ ಪರೀಕ್ಷಕರಾಗಿ ಹಾಗೂ ಹಾರಾಟ ತರಬೇತಿ ವಿಭಾಗದಲ್ಲಿ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಚೌಧರಿ, ಕ್ಯಾಟ್-2 ಅರ್ಹತೆ ಪಡೆದಿರುವ ತರಬೇತುದಾರರೂ ಹೌದು. ದೇಶದ ಹೆಮ್ಮೆಯ ಕ್ಷಣಗಳ ಮೆರುಗು ಹೆಚ್ಚಿಸುವ ಸೂರ್ಯಕಿರಣ್ ಏರೊಬಾಟಿಕ್ ಪ್ರದರ್ಶನ ತಂಡದ ಆರಂಭದ ದಿನಗಳಲ್ಲಿ ಅದರ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ವೆಲ್ಲಿಂಗ್ಟನ್ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರು ಅಲ್ಲಿನ ಸಿಬ್ಬಂದಿ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಝಾಂಬಿಯಾದ ವಾಯುಪಡೆ ತರಬೇತಿ ಶಾಲೆಯಲ್ಲಿಯೂ ನಿರ್ದೇಶಕರಾಗಿದ್ದರು. ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮೊದಲು ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸೇವೆಯ ಅವಧಿಯಲ್ಲಿ ಹಲವು ಸಾಹಸ, ಸಾಧನೆಗಳನ್ನು ಮೆರೆದಿರುವ ಚೌಧರಿ ಅವರಿಗೆ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಾಯು ಸೇನಾ ಮೆಡಲ್ ಗೌರವ ಸಿಕ್ಕಿದೆ. ಭಾರತದ ಎಲ್ಲ ಸಶಸ್ತ್ರಪಡೆಗಳ ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗೆ ಪ್ರಸ್ತುತ ಗೌರವ ಸಲಹೆಗಾರರಾಗಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಸಿಬ್ಬಂದಿಯೊಂದಿಗೆ ಮಾತನಾಡಿದ ಚೌಧರಿ, ಭಾರತೀಯ ವಾಯುಪಡೆಯನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ದೊಡ್ಡ ಗೌರವ ಎಂದುಕೊಳ್ಳುತ್ತೇನೆ. ವಾಯುಪಡೆಯೊಂದಿಗೆ ಕಾರ್ಯನಿರ್ವಹಿಸುವ ಎಲ್ಲ ಯೋಧರು, ನಾಗರಿಕ ಸೇವಾ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರನ್ನು ನೆನೆದ ಅವರು, ನಿಮ್ಮ ಸಾಮರ್ಥ್ಯ ಮತ್ತು ಬದ್ಧತೆಯ ಮೇಲೆ ನನಗೆ ವಿಶ್ವಾಸವಿದೆ. ದೇಶವು ವಹಿಸುವ ಜವಾಬ್ದಾರಿಯನ್ನು ನಿರ್ವಹಿಸಲು ಮತ್ತು ವಾಯುಪಡೆಯ ಕಾರ್ಯಾಚರಣೆಯನ್ನು ಸಾರ್ವಕಾಲಿಕ ಶ್ರೇಷ್ಠತೆಯ ಕಡೆಗೆ ಕೊಂಡೊಯ್ಯಲು ಶ್ರಮಿಸೋಣ ಎಂದು ಹೇಳಿದರು.
ಭಾರತದ ಸಾರ್ವಭೌಮತೆ ಮತ್ತು ಏಕತೆಯನ್ನು ಕಾಪಾಡುವುದು ನಮ್ಮ ಮೊದಲ ಜವಾಬ್ದಾರಿ. ಯಾವುದೇ ಬೆಲೆ ತೆತ್ತು ಈ ಹೊಣೆಗಾರಿಕೆಯನ್ನು ನಾವು ನಿರ್ವಹಿಸಲೇಬೇಕು. ಈಗಾಗಲೇ ಬಳಕೆಯಾಗುತ್ತಿರುವ ಉಪಕರಣಗಳೊಂದಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಶಸ್ತ್ರಾಸ್ತ್ರಗಳು ಹಾಗೂ ಸಶಸ್ತ್ರ ವೇದಿಕೆಗಳನ್ನು ಕಾರ್ಯಾಚರಣೆಗೆ ಸನ್ನದ್ಧಗೊಳಿಸಬೇಕಿದೆ. ಹೊಸ ತಂತ್ರಜ್ಞಾನದ ಅಳವಡಿಕೆ, ಆವಿಷ್ಕಾರ ಮತ್ತು ದೇಶೀಯ ತಂತ್ರಜ್ಞಾನದ ಅಭಿವೃದ್ಧಿ, ಸೈಬರ್ ಸೆಕ್ಯುರಿಟಿಯ ಆದ್ಯತೆ, ಭವಿಷ್ಯದ ಸವಾಲುಗಳನ್ನು ಎದುರಿಸಲು ಬೇಕಿರುವ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುವ ರೀತಿಯಲ್ಲಿ ತರಬೇತಿ ವ್ಯವಸ್ಥೆಯ ಸುಧಾರಣೆ, ಮಾನವ ಸಂಪನ್ಮೂಲವನ್ನು ಸುಸ್ಥಿರವಾಗಿ ಬಳಸಿಕೊಳ್ಳುವ ಬಗ್ಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ವಾಯುಪಡೆಯು ನೀಡುವ ಯಾವುದೇ ಜವಾಬ್ದಾರಿಯನ್ನು ಎಲ್ಲರೂ ಹೆಮ್ಮೆಯಿಂದ ನಿರ್ವಹಿಸಬೇಕು. ದೇಶದ ಆಸ್ತಿಯಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
(Indian Air Force Air Chief Marshal VR Chaudhari Takes Over as Chief of the Air Staff)
ಇದನ್ನೂ ಓದಿ: Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?
ಇದನ್ನೂ ಓದಿ: Tejas LCA: ಭಾರತದ ರಕ್ಷಣಾ ಉದ್ಯಮದಲ್ಲಿ ಹೊಸಶಕೆ: ಅಮೆರಿಕ, ಮಲೇಷ್ಯಾಗಳಿಂದ ಎಲ್ಸಿಎ ತೇಜಸ್ ಖರೀದಿಗೆ ಅಸಕ್ತಿ