ಉನ್ನಾವೋದಲ್ಲಿ ಎಸ್​ಪಿ ನಾಯಕನ ಹೊಲದಲ್ಲಿ ದಲಿತ ಯುವತಿಯ ಶವ ಪತ್ತೆ; ನ್ಯಾಯಕ್ಕಾಗಿ ಅಖಿಲೇಶ್ ಯಾದವ್​ಗೆ ಪೋಷಕರ ಒತ್ತಾಯ

Unnao Murder: ಸಮಾಜವಾದಿ ಪಕ್ಷದ ಮಾಜಿ ಸಚಿವರೊಬ್ಬರ ಆಶ್ರಮದ ಬಳಿ 22 ವರ್ಷದ ದಲಿತ ಯುವತಿಯ ಕೊಳೆತ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಉನ್ನಾವೋದಲ್ಲಿ ಎಸ್​ಪಿ ನಾಯಕನ ಹೊಲದಲ್ಲಿ ದಲಿತ ಯುವತಿಯ ಶವ ಪತ್ತೆ; ನ್ಯಾಯಕ್ಕಾಗಿ ಅಖಿಲೇಶ್ ಯಾದವ್​ಗೆ ಪೋಷಕರ ಒತ್ತಾಯ
ಉನ್ನಾವೋದಲ್ಲಿ ಯುವತಿಯ ಮೃತ ದೇಹ ಪತ್ತೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 11, 2022 | 7:03 PM

ಉನ್ನಾವೋ: ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರದ ಮಾಜಿ ಸಚಿವರೊಬ್ಬರ ಜಮೀನಿನಲ್ಲಿ 22 ವರ್ಷದ ದಲಿತ ಯುವತಿಯ ಶವ ಪತ್ತೆಯಾಗಿದೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ. ಅತ್ಯಾಚಾರಗಳಿಂದ (Rape Cases) ಸಾಕಷ್ಟು ಸುದ್ದಿಯಾಗಿದ್ದ ಉನ್ನಾವೋದಲ್ಲಿ (Unnao) ಇದೀಗ ಮತ್ತೆ ಅತ್ಯಾಚಾರದ ಸುದ್ದಿ ಆತಂಕಕ್ಕೆ ಕಾರಣವಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ವಿರುದ್ಧ ಬಿಜೆಪಿ ಮತ್ತು ಬಿಎಸ್​ಪಿ ಟೀಕಾ ಪ್ರಹಾರ ನಡೆಸಿವೆ. ಮರಣೋತ್ತರ ಪರೀಕ್ಷೆಯಲ್ಲಿ ಆ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಸಮಾಜವಾದಿ ಪಕ್ಷದ ಮಾಜಿ ಸಚಿವರೊಬ್ಬರ ಆಶ್ರಮದ ಬಳಿ 22 ವರ್ಷದ ದಲಿತ ಯುವತಿಯ ಕೊಳೆತ ಮೃತದೇಹ ಪತ್ತೆಯಾಗಿದೆ. ಹತ್ಯೆಯ ಹಿಂದೆ ಮಾಜಿ ಸಚಿವ ಫತೇ ಬಹದ್ದೂರ್ ಸಿಂಗ್ ಅವರ ಪುತ್ರನ ಕೈವಾಡವಿದೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಲಿತರ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಸಮಾಜವಾದಿ ಪಕ್ಷಕ್ಕೆ ಈ ಭೀಕರ ಘಟನೆಯಿಂದ ತೀವ್ರ ಮುಜುಗರ ಉಂಟಾಗಿದೆ.

ಮಾಜಿ ರಾಜ್ಯ ಸಚಿವ ರಾಜೋಲ್ ಸಿಂಗ್ ಅವರ ಒಡೆತನದ ಆಶ್ರಮದ ಬಳಿ 22 ವರ್ಷದ ಮಹಿಳೆಯ ಶವವನ್ನು ಗುರುವಾರ ಪತ್ತೆ ಮಾಡಲಾಗಿದೆ. ಕೊಳೆತ ಶವವನ್ನು ಕಂಬಳಿಯಲ್ಲಿ ಸುತ್ತಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿಸೆಂಬರ್ 8ರಂದು ಯುವತಿ ಕಣ್ಮರೆಯಾಗಿದ್ದಳು. ತನ್ನ ಮಗಳನ್ನು ಮಾಜಿ ಸಚಿವರ ಮಗ ರಾಜೋಲ್ ಸಿಂಗ್ ಕಿಡ್ನಾಪ್ ಮಾಡಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಳು.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಅಖಿಲೇಶ್ ಯಾದವ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ‘ಅಖಿಲೇಶ್ ಯಾದವ್ ಅವರೇ, ಎಸ್​ಪಿ ನಾಯಕನ ಹೊಲದಲ್ಲಿ ದಲಿತ ಹುಡುಗಿಯ ಶವ ಪತ್ತೆಯಾಗಿದೆ. ಆಕೆಯ ತಾಯಿ ನಿಮ್ಮ ಕಾರಿನ ಮುಂದೆ ಬೇಡಿಕೊಳ್ಳುತ್ತಿದ್ದರು, ಆದರೆ ನೀವು ಅವರ ಮಾತನ್ನು ಕೇಳದೆ ನಿಮ್ಮ ಪಕ್ಷದ ನಾಯಕನನ್ನು ರಕ್ಷಿಸಿದ್ದೀರಿ. ನೀವು ಎಸ್ಪಿ ನಾಯಕರ ಎಲ್ಲಾ ಅಪರಾಧಗಳನ್ನು ಕ್ಷಮಿಸುತ್ತೀರಿ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೀರಿ’ ಎಂದು ಲೇವಡಿ ಮಾಡಿದ್ದಾರೆ.

ಮಾಯಾವತಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಉನ್ನಾವೊ ಜಿಲ್ಲೆಯ ಎಸ್‌ಪಿ ನಾಯಕನ ಕ್ಷೇತ್ರದಲ್ಲಿ ದಲಿತ ಯುವತಿಯ ಮೃತದೇಹ ಪತ್ತೆಯಾಗಿರುವುದು ಅತ್ಯಂತ ದುಃಖಕರ ಮತ್ತು ಗಂಭೀರ ವಿಷಯವಾಗಿದೆ. ದಲಿತ ಯುವತಿಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಎಸ್ಪಿ ನಾಯಕನ ಮೇಲೆ ಕುಟುಂಬದವರು ಶಂಕಿಸಿದ್ದರು. ರಾಜ್ಯ ಸರಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದಿದ್ದಾರೆ.

ದಲಿತ ಯುವತಿ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದರು. ಅವಳ ತಾಯಿ ಅವಳನ್ನು ಎಲ್ಲೆಡೆ ಹುಡುಕಿದರೂ ಆಕೆಯ ಪತ್ತೆಯಾಗಿರಲಿಲ್ಲ. ಆ ಯುವತಿ ಉನ್ನಾವೋದ ಸದರ್ ಕೊಟ್ವಾಲಿ ಪ್ರದೇಶದ ಕಾನ್ಶಿರಾಮ್ ಪ್ರದೇಶದಲ್ಲಿ ತಂಗಿದ್ದರು. ಆಕೆ ಡಿಸೆಂಬರ್‌ನಿಂದ ನಾಪತ್ತೆಯಾಗಿದ್ದರು. ಡಿಸೆಂಬರ್ 8ರಂದು ಕಾಣೆಯಾದ ದೂರನ್ನು ದಾಖಲಿಸಲಾಗಿತ್ತು. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದ್ದು, ಆ ಯುವತಿಯ ತಾಯಿ ಜನವರಿ 24ರಂದು ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆಯ ಬಳಿಕ ಪೊಲೀಸರು ರಾಜೋಲ್ ಸಿಂಗ್​ನನ್ನು ಬಂಧಿಸಿದ್ದರು. ಇದೀಗ ಅವರ ಜಮೀನಿನಲ್ಲೇ ಆಕೆಯ ಮೃತದೇಹ ಪತ್ತೆಯಾಗಿರುವುದು ಆ ಯುವತಿಯ ಕುಟುಂಬಸ್ಥರ ಆರೋಪಕ್ಕೆ ಪುಷ್ಠಿ ನೀಡುವಂತಿದೆ.

ಇದನ್ನೂ ಓದಿ: Unnao: ಉತ್ತರ ಪ್ರದೇಶದ ಉನ್ನಾವ್​ನ ಗಂಗಾ ನದಿ ತೀರದಲ್ಲಿ ಹೂತಿಟ್ಟ ಮೃತದೇಹಗಳು ಪತ್ತೆ

Viral Video: ವೇದಿಕೆಯಲ್ಲೇ ಬಿಜೆಪಿ ಶಾಸಕನ ಕೆನ್ನೆಗೆ ಹೊಡೆದ ರೈತ; ವಿಡಿಯೋ ವೈರಲ್ ಆಗುತ್ತಿದ್ದಂತೆ ತೇಪೆ ಹಚ್ಚಿದ ಎಂಎಲ್​ಎ

Published On - 7:00 pm, Fri, 11 February 22