ಕೋಲಾರ: ಇತ್ತೀಚೆಗೆ ಒಂದಷ್ಟು ಕುತೂಹಲ ಮೂಡಿಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ದರಕರಣದಲ್ಲಿ ಪ್ರಮುಖ ಆರೋಪಿ ಕವಿರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆಳಕ್ಕೆ ಇಳಿದು ನೋಡಿದಾಗ ವರ್ತೂರು ಅಪಹರಣದ ಸಂಚು ಪರಪ್ಪನ ಅಗ್ರಹಾರ ಜೈಲಿಂದ ಹಾರಿ ಕೊಂಡು ಬಂದಿತ್ತು! ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಇನ್ನು ಪ್ರಕರಣದ ಸೂತ್ರಧಾರ ಯಾರು? ಒಳಸಂಚು ಏನಿತ್ತು ಎಂದು ನೋಡಿದಾಗ. ಬಂಧಿತ ಅರೋಪಿಗೆ ಭೂಗತ ಪಾತಕಿ ರವಿಪೂಜಾರಿಯ ನಂಟು ಇದೆ ಎಂಬ ಅಂಶವೂ ಬಯಲಾಗಿದೆ. ಈತನ ಬಂಧನದಿಂದ ಅಪಹರಣಕ್ಕೆ ಹಲವಾರು ಆಯಾಮಗಳು ಇರುವುದು ಪೊಲೀಸರಿಗೆ ತಿಳಿದುಬಂದಿದೆ.
ಈ ಕಿಂಗ್ ಪಿನ್ ಕವಿರಾಜ್ ಮೂಲತಃ ನೇಪಾಳದವ, ತಮಿಳುನಾಡಿನ ಹೊಸೂರಿನಲ್ಲಿ ನೆಲೆಸಿದ್ದ. ಬೆಂಗಳೂರು ಮತ್ತು ತಮಿಳುನಾಡಿನ ಕೆಲ ಠಾಣೆಗಳಲ್ಲಿ ಕವಿರಾಜ್ನನ್ನು ರೌಡಿಶೀಟರ್ ಎಂದು ಘೋಷಿಸಲಾಗಿದೆ. ಈ ಹಿಂದೆಯೂ ಕೆಲ ಅಪಹರಣ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದರ ಬಗ್ಗೆ ಪೊಲೀಸರಿಗೆ ಅನುಮಾನವಿದೆ.
ಆರೋಪಿ ಕವಿರಾಜ್
ವರ್ತೂರು ಪ್ರಕಾಶ್ ಅಪಹರಣದ ಪ್ಲಾನ್ ರೂಪುಗೊಂಡಿದ್ದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ. ಕವಿರಾಜ್ ಜೊತೆಗೆ ರೋಹಿತ್ ಎಂಬಾತನೂ ಈ ಸಂಚಿನಲ್ಲಿ ಮುಖ್ಯಪಾತ್ರ ವಹಿಸಿದ್ದ. ವರ್ತೂರು ಪ್ರಕಾಶ್ ಸಚಿವರಾಗಿದ್ದಾಗ ಸಾಕಷ್ಟು ದುಡ್ಡು ಮಾಡಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಆಧರಿಸಿ, ಅಪಹರಣಕ್ಕೆ ಇವರಿಬ್ಬರೂ ಸಂಚು ರೂಪಿಸಿದರು.
ನವೆಂಬರ್ 25ರಂದು ಈ ಸಂಚನ್ನು ಕಾರ್ಯರೂಪಕ್ಕೆ ತಂದರು. ಆದರೆ ವರ್ತೂರು ಪ್ರಕಾಶ್ ಬಳಿ ತಾವು ಅಂದುಕೊಂಡಷ್ಟು ಹಣವಿಲ್ಲ ಎಂಬುದು ಖಚಿತವಾದ ನಂತರ, ಎಷ್ಟಾದರೆ ಅಷ್ಟು ಹಣ ಸುಲಿಯಲು ಮುಂದಾದರು. ಅದರಂತೆ, 49 ಲಕ್ಷ ವಸೂಲಿ ಮಾಡಿಕೊಂಡು ವರ್ತೂರು ಪ್ರಕಾಶ್ರನ್ನು ಬಿಟ್ಟುಹೋಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಪೊಲೀಸರು ಕವಿರಾಜ್ ಸಹಚರ ರೋಹಿತ್ನನ್ನು ಬಂಧಿಸಿ ವಿಚಾರಣೆ ನಡೆಸಿದರು. ನಂತರ ಕೆಜಿಎಫ್ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸೂರ್ಯಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿ, ಕವಿರಾಜ್ ಬಂಧನಕ್ಕೆ ಬಲೆ ಬೀಸಿದರು. ರೋಹಿತ್ನಿಂದ ಕವಿರಾಜ್ಗೆ ಕರೆ ಮಾಡಿಸಿದ ಪೊಲೀಸರು ನಿರ್ದಿಷ್ಟ ಸ್ಥಳವೊಂದರಲ್ಲಿ ಭೇಟಿಯಾಗೋಣ ಬಾ ಎಂದು ಕರೆಸಿದರು. ಆದರೆ ಅಲ್ಲಿಗೆ ಬಂದ ಕವಿರಾಜ್ಗೆ ರೋಹಿತ್ ಕಣ್ಸನ್ನೆಯ ಮೂಲಕ ಪರಾರಿಯಾಗಲು ಸೂಚಿಸಿದ್ದ.
ಮುಂದೆ.. ಪೊಲೀಸರು ರೋಹಿತ್ನನ್ನು ತಮ್ಮ ಕಾರಿನಲ್ಲಿಯೇ ಕೂಡಿಸಿಕೊಂಡು ಕವಿರಾಜನ ಬೆನ್ನುಹತ್ತಿದಾಗ ಅವನ ಕಾರು ಹಳ್ಳಿಗಾಡಿನಲ್ಲಿ ಕೆಸರಿನಲ್ಲಿ ಹೂತುಹೋಯಿತು, ಆಗ ಅವನಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಪೊಲೀಸರು ಅವನನ್ನು ಆಗ ಲಾಖ್ ಮಾಡಿದ್ದರು. ತಮಾಷೆಯೆಂದ್ರೆ ಪೊಲೀಸರು ಅತ್ತ ಕವಿರಾಜ್ನನ್ನು ಹಿಡಿಯಲು ಹೋದಾಗ.. ಇತ್ತ ಕಾರಿನಲ್ಲಿದ್ದ ರೋಹಿತ್ ಸೈಲೆಂಟಾಗಿ ಕಾರಿಳಿದು ಪರಾರಿಯಾಗಿದ್ದ!
ವರ್ತೂರು ಪ್ರಕಾಶ್
ಇದೆಲ್ಲ ಆಗುತ್ತಿದ್ದಂತೆ ಕೊನೆಗೂ ಕವಿರಾಜ್ ಮತ್ತು ರೋಹಿತ್ನನ್ನು ಪೊಲೀಸರು ಕರೆತಂದು ವಿಚಾರಣೆಗೊಳಪಡಿಸಿದಾಗ ಅಪರಾಧ ಕೃತ್ಯದ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಆರೋಪಿಗಳನ್ನು ಬಂಧಿಸಿದ್ದಕ್ಕೆ ಪೊಲೀಸರನ್ನು ವರ್ತೂರು ಪ್ರಕಾಶ್ ಅಭಿನಂದಿಸಿದ್ದಾರೆ. ಇದು ಹಣಕ್ಕಾಗಿ ನಡೆದ ಅಪಹರಣವೋ, ಸುಪಾರಿ ಪಡೆದು ಮಾಡಿದ ಅಪಹರಣವೋ ಎಂಬ ಮಾಹಿತಿ ಬಹಿರಂಗವಾಗಲಿ ಎಂದು ಅವರು ಆಶಿಸಿದ್ದಾರೆ.
ಕಿಡ್ನ್ಯಾಪ್: ನನ್ನ ಮಕ್ಕಳಾಣೆ ನಾನು ಹೇಳಿದ್ದೆಲ್ಲಾ ನಿಜ ಎಂದ ಮಾಜಿ ಸಚಿವ ವರ್ತೂರು ಪ್ರಕಾಶ್