ಕೆಲವೊಮ್ಮೆ ತಪ್ಪು ಮಾಡದಿದ್ದರೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನು ಕೆಲವೊಮ್ಮೆ ತಪ್ಪು ಮಾಡಿದವರು ಆರಾಮಾಗಿ ರಾಜಾರೋಷವಾಗಿ ಓಡಾಡಿಕೊಂಡಿರುತ್ತಾರೆ. ಆತ ತನ್ನ ಹೆಂಡತಿಯನ್ನು ಕೊಲೆ (Murder) ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ. ಆದರೆ, ಸಮಾಜದ ದೃಷ್ಟಿಯಲ್ಲಿ ಕೊಲೆಯಾಗಿದ್ದ ಆತನ ಹೆಂಡತಿ ತನ್ನ ಪ್ರೇಮಿಯ ಜೊತೆ ಆರಾಮಾಗಿ ದಿನಗಳನ್ನು ಕಳೆಯುತ್ತಿದ್ದಳು. ತಾನು ಮಾಡದ ತಪ್ಪಿಗೆ ಕಂಬಿ ಎಣಿಸುತ್ತಿದ್ದ ವ್ಯಕ್ತಿ ಅಮಾಯಕ ಎಂಬುದು ಬಯಲಾಗಿದ್ದು ಹೇಗೆ? ಸತ್ತುಹೋಗಿದ್ದಾಳೆ ಎಂದುಕೊಂಡಿದ್ದ ಮಹಿಳೆ ಬದುಕಿರುವ ಸತ್ಯ ಹೊರಬಿದ್ದಿದ್ದು ಹೇಗೆ? ಇಲ್ಲಿದೆ ಪೂರ್ತಿ ಮಾಹಿತಿ.
ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಸಾವನ್ನಪ್ಪಿದ ಮಹಿಳೆಯೊಬ್ಬಳು ಜಲಂಧರ್‌ನಲ್ಲಿ ತನ್ನ ಪ್ರೇಮಿಯೊಂದಿಗೆ ವಾಸಿಸುತ್ತಿರುವುದು ಬಯಲಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಆಕೆಯ ಪತಿ ತನ್ನ ಹೆಂಡತಿಯನ್ನು ‘ಕೊಲೆ’ ಮಾಡಿದ ಆರೋಪಕ್ಕಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಆದರೆ, ಆತನ ಹೆಂಡತಿ ಬದುಕಿಯೇ ಇದ್ದಾಳೆ ಎಂಬ ವಿಷಯ ತಡವಾಗಿ ಪೊಲೀಸರಿಗೆ ಗೊತ್ತಾಗಿದೆ. (Source)
ಶಾಂತಿ ದೇವಿ ಎಂಬ ಮಹಿಳೆ 2016ರ ಜೂನ್ 14ರಂದು ಲಕ್ಷ್ಮಿಪುರದ ನಿವಾಸಿ ದಿನೇಶ್ ರಾಮ್ ಅವರನ್ನು ವಿವಾಹವಾಗಿದ್ದಳು. ಮದುವೆಯಾದ 1 ವರ್ಷಗಳ ನಂತರ ಶಾಂತಿ ಏಪ್ರಿಲ್ 19ರಂದು ತನ್ನ ಗಂಡನ ಮನೆಯಿಂದ ಓಡಿಹೋಗಿ ಪಂಜಾಬ್‌ನಲ್ಲಿ ತನ್ನ ಪ್ರೇಮಿಯೊಂದಿಗೆ ವಾಸವಾಗಿದ್ದಳು. ಆ ಮಹಿಳೆ ನಾಪತ್ತೆಯಾದ ನಂತರ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮಗಳ ಪತಿ ವರದಕ್ಷಿಣೆ ಕಿರುಕುಳ ನೀಡಿ, ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಸಂತ್ರಸ್ತೆಯ ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ದಿನೇಶ್ ನನ್ನು ಬಂಧಿಸಿ ಕೊಲೆ ಆರೋಪದ ಮೇಲೆ ಜೈಲಿಗೆ ಕಳುಹಿಸಿದ್ದರು.
ಶಾಂತಿ ಅವರ ತಂದೆ ಯೋಗೇಂದ್ರ ಯಾದವ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ನನ್ನ ಮಗಳು ದಿನೇಶ್ ರಾಮ್ ಅವರನ್ನು 2016ರಲ್ಲಿ ವಿವಾಹವಾದ್ದರು. ಆದರೆ, ಏಪ್ರಿಲ್ 19ರಂದು ಅವಳು ನಾಪತ್ತೆಯಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿತು. ನಾನು ಅವಳ ಅತ್ತೆಯ ಮನೆಗೆ ಹೋಗಿ ಪರಿಶೀಲಿಸಿದರೂ ಪ್ರಯೋಜನವಾಗಲಿಲ್ಲ. ಒಂದು ವರ್ಷ ನನ್ನ ಮಗಳನ್ನು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಆಕೆಯ ಅತ್ತೆ, ಗಂಡ ಮೋಟಾರ್ ಬೈಕ್ ಮತ್ತು 50,000 ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಮಹಿಳೆಯ ತಂದೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ದಿನೇಶ್ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸಲಾಯಿತು. ಆದರೂ ಶಾಂತಿಯ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣದ ತನಿಖೆ ಮುಂದುವರೆಸಿದ್ದರು. ಕೊನೆಗೆ ಶಾಂತಿಯ ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಲು ತಾಂತ್ರಿಕ ತಂಡವನ್ನು ಕೇಳಿದಾಗ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿತು. ತಾಂತ್ರಿಕ ತಂಡದ ಸಹಾಯದಿಂದ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಗಿದ್ದ ಮಹಿಳೆ ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ತನ್ನ ಪ್ರೇಮಿಯೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ಪತ್ತೆಹಚ್ಚಿದರು.