ರಾಯಚೂರು: ಮನೆ ಮುಂದೆ ಕುಳಿತಿದ್ದ ವೃದ್ಧನನ್ನು ಕಂಬಕ್ಕೆ ಕಟ್ಟಿಹಾಕಿ ಕ್ರೂರವಾಗಿ ಥಳಿತ, ವಿಡಿಯೋ ವೈರಲ್
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚಿಕ್ಕಬೇರ್ಗಿ ಗ್ರಾಮದ ಲಿಂಗಪ್ಪ ಎಂಬ ವೃದ್ಧ ಹೊಲದಿಂದ ಬಂದು ಎತ್ತುಗಳನ್ನ ಕಟ್ಟಿ ನಂತರ ಮನೆ ಬಳಿ ಕೂತುಕೊಂಡಿದ್ದರು. ಈ ವೇಳೆ ಇದೇ ಗ್ರಾಮದ ಕೆಲವರು ಲಿಂಗಪ್ಪನ ಮೇಲೆ ಮುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ನೋಡನೋಡುತ್ತಲೇ ಲಿಂಗಪ್ಪನನ್ನ ಎಳೆದಾಡಿ ಹೊಡೆಯಲಾರಂಭಿಸಿದ್ದಾರೆ. ಆರೋಪಿಗಳು ಕಲ್ಲು, ದೊಣ್ಣೆಗಳಲ್ಲಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಸದ್ಯ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದೆ.
ರಾಯಚೂರು, ಜ.24: ಮನೆ ಮುಂದೆ ಕುಳಿತಿದ್ದ ವೃದ್ಧನನ್ನು ಕಂಬಕ್ಕೆ ಕಟ್ಟಿಹಾಕಿ ಕ್ರೂರವಾಗಿ ಹಲ್ಲೆ (Assault) ನಡೆಸಿದ ಘಟನೆ ಜಿಲ್ಲೆಯ (Raichur) ಸಿಂಧನೂರು ತಾಲೂಕಿನ ಚಿಕ್ಕಬೇರ್ಗಿ ಗ್ರಾಮದಲ್ಲಿ ನಡೆದಿದೆ. ಜನವರಿ 20 ರಂದು ಸಂಜೆ ವೇಳೆ ನಡೆದ ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆರೋಪಿಗಳು ಕನಿಷ್ಠ ಮನುಷ್ಯತ್ವವೂ ಇಲ್ಲದ ರೀತಿ ವರ್ತಿಸಿರುವುದನ್ನು ಕಾಣಬಹುದು.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಂಜೆ ವೇಳೆ ಮನೆ ಬಳಿ ಕಟ್ಟೆ, ಊರಿನ ಮಧ್ಯಭಾಗದಲ್ಲಿ ಜನರು ಕೂತುಕೊಳ್ಳುತ್ತಾರೆ. ಅದೇ ರೀತಿ ಚಿಕ್ಕಬೇರ್ಗಿ ಗ್ರಾಮದ ಲಿಂಗಪ್ಪ ಎಂಬ 53 ವರ್ಷದ ವೃದ್ಧ ಕೂಡ ಹೊಲದಿಂದ ಬಂದು ಎತ್ತುಗಳನ್ನ ಕಟ್ಟಿ ನಂತರ ಮನೆ ಬಳಿ ಕೂತುಕೊಂಡಿದ್ದ. ಈ ವೇಳೆ ಇದೇ ಗ್ರಾಮದ ಕೆಲವರು ಲಿಂಗಪ್ಪನ ಮೇಲೆ ಮುಗಿ ಬಿದ್ದಿದ್ದಾರೆ.
ಅಷ್ಟೇ ಅಲ್ಲದೆ, ನೋಡನೋಡುತ್ತಲೇ ಲಿಂಗಪ್ಪನನ್ನ ಎಳೆದಾಡಿ ಹೊಡೆಯಲಾರಂಭಿಸಿದ್ದಾರೆ. ಆರೋಪಿಗಳು ಕಲ್ಲು, ದೊಣ್ಣೆಗಳಲ್ಲಿಂದ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಚಪ್ಪಲಿಯಿಂದ ಸಿಕ್ಕಸಿಕ್ಕಲ್ಲಿ ಹೊಡೆದಿದ್ದಾರೆ. ಆಗ ಲಿಂಗಪ್ಪ ನಾನೇನು ಅಂದಿಲ್ಲ ಬಿಟ್ ಬಿಡಿ ಅಂತ ಪರಿಪರಿಯಾಗಿ ಬೇಡಿಕೊಂಡರೂ ಆತನ ಮಾತು ಕೇಳಿಸಿಕೊಳ್ಳದ ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಲಿಂಗಪ್ಪನನ್ನ ಹಗ್ಗದಿಂದ ಕಂಬಕ್ಕೆ ಕಟ್ಟಿ ತಮ್ಮಿಷ್ಟದಂತೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಪತಿಯ ಅಕ್ರಮ ಸಂಬಂಧ ತಿಳಿಯುತ್ತಿದ್ದಂತೆ ಮಹಿಳೆ ಮನೆಗೆ ತೆರಳಿ ಹಲ್ಲೆ ನಡೆಸಿದ ಪತ್ನಿ-ಮಕ್ಕಳು
ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಲಿಂಗಪ್ಪ ನಿತ್ರಾಣಗೊಂಡಿದ್ದ. ಕೂಡಲೇ ಆತನನ್ನ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಾಹಿತಿ ತಿಳಿದು ತುರ್ವಿಹಾಳ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ನಂತರ ಲಿಂಗಪ್ಪನ ಕುಟುಂಬಸ್ಥರು ತಮ್ಮೂರಿನ ಒಂಬತ್ತು ಜನರ ವಿರುದ್ಧ ತುರ್ವಿಹಾಳ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಹನಮಂತ, ಯಮನೂರು, ಬೀರಪ್ಪ ಸೇರಿದಂತೆ ಒಟ್ಟು 9 ಜನರ ವಿರುದ್ಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಲ್ಲೆಗೆ ಮಹಿಳೆಯೊಬ್ಬರಿಗೆ ಸಂಬಂಧಿಸಿದ ವಿಚಾರ ಅಂತ ಹೇಳಲಾಗುತ್ತಿದೆ. ಹಲ್ಲೆಗೊಳಗಾದ ಲಿಂಗಣ್ಣ ಹಾಗೂ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿ ಆರೋಪಿಗಳ ಸಂಬಂಧಿಕರಾಗಬೇಕಿದ್ದ ಮಹಿಳೆಯೊಬ್ಬರ ಬಗ್ಗೆ ಮಾತನಾಡುತ್ತಿದ್ದರಂತೆ. ಈ ವಿಚಾರ ತಿಳಿದು ಆರೋಪಿಗಳೆಲ್ಲಾ ಸೇರಿ ಲಿಂಗಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಹೇಳಲಾಗುತ್ತಿದೆ.
ಆದರೆ ಈ ಆರೋಪದ ಬಗ್ಗೆ ಹಲ್ಲೆಗೊಳಗಾದ ಲಿಂಗಪ್ಪ ಹಾಗೂ ಆತನ ಕುಟುಂಬಸ್ಥರು ಅಲ್ಲಗಳೆದಿದ್ದಾರೆ. ಇತ್ತ ಮನಸೋ ಇಚ್ಛೆ ಹಲ್ಲೆ ನಡೆಸಿ ಮತ್ತೆ ಹಲ್ಲೆಗೊಳಗಾದವನ ವಿರುದ್ಧವೇ ಆರೋಪಿಗಳ ಕಡೆಯವರು ಪ್ರತಿ ದೂರು ದಾಖಲಿಸಲು ಮುಂದಾಗಿದ್ದಾರೆ. ಲಿಂಗಣ್ಣನ ಮೇಲಿನ ಹಲ್ಲೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನ ಬಂಧಿಸಬೇಕು ಅಂತ ಹೈದ್ರಾಬಾದ್-ಕರ್ನಾಟಕ ವಾಲ್ಮೀಕಿ ಸಮುದಾಯದ ಮುಖಂಡ ರಘುವೀರ್ ನಾಯಕ್ ಆಗ್ರಹಿಸಿದ್ದಾರೆ.
ಪ್ರಕರಣದ ವಿಚಾರ ತಿಳಿದು ಸ್ಥಳ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಿಕೊಂಡ ತುರ್ವಿಹಾಳ ಪೊಲೀಸರು ಆರೋಪಿ ಹನಮಂತನನ್ನು ಬಂಧಿಸಿದ್ದು, ಇನ್ನುಳಿದ ಎಂಟು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ