ನವದೆಹಲಿ: ದೆಹಲಿಯಲ್ಲಿ (Delhi) ಇಡೀ ಕುಟುಂಬವೊಂದು ರಾತ್ರಿ ಮಲಗಿದ್ದಾಗ ಮೂವರು ಮುಸುಕುಧಾರಿಗಳು ಆ ಮನೆಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ಈ ಘಟನೆ ನಡೆದಿದೆ. ಮೂವರು ಮುಸುಕುಧಾರಿಗಳು ಆ ಮನೆಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿದೆ. ಮೂವರು ಪೆಟ್ರೋಲ್ ಕ್ಯಾನ್ಗಳೊಂದಿಗೆ ಆ ಮನೆಯ ಬಳಿ ಬಂದು ನಫೀಸ್ ಅವರ ಮನೆಗೆ ಬೆಂಕಿ ಹಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದು.
ಜನವರಿ 8ರಂದು ದೆಹಲಿಯ ಭಜನಪುರದ ವಿನಯ್ ಪಾರ್ಕ್‌ನಲ್ಲಿ ಈ ಘಟನೆ ವರದಿಯಾಗಿದೆ. ನಫೀಸ್ ಮಲಿಕ್ ಮತ್ತು ಅವರ ಕುಟುಂಬದ ಸದಸ್ಯರು ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದಾಗ ಮೂವರು ಅಪರಿಚಿತರು ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಎಚ್ಚರಗೊಂಡ ಅವರು ಹಿಂದಿನ ಬಾಗಿಲಿನಿಂದ ಮನೆಯಿಂದ ಹೊರಗೆ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: Crime News: ಆಭರಣಕ್ಕಾಗಿ 7 ತಿಂಗಳ ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ ಅತ್ತೆ-ಮಾವ
ಒಬ್ಬ ವ್ಯಕ್ತಿಯು ಬೆಂಕಿ ಹಚ್ಚಲು ಪೆಟ್ರೋಲ್ ಅನ್ನು ಮನೆಯ ಮೇಲೆ ಚೆಲ್ಲುತ್ತಾನೆ. ಅಷ್ಟರಲ್ಲಿ ಎರಡನೆಯ ವ್ಯಕ್ತಿಯು ಬೆಂಕಿಕಡ್ಡಿಗಳನ್ನು ಹೊತ್ತಿಸಿ ಆ ಮನೆಯ ಮೇಲೆ ಎಸೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಕ್ಷಣ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣ ಅವರು ಅಲ್ಲಿಂದ ಪರಾರಿಯಾಗಿದ್ದಾರೆ.
ಆ ಮನೆಯ ಹೊರಗೆ ನಿಲ್ಲಿಸಿದ್ದ ಸೈಕಲ್ ಹಾಗೂ ಮೋಟಾರ್ ಬೈಕ್ ಕೂಡ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಹಚ್ಚಿದ ಮೂವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಆರೋಪಿಗಳನ್ನು ಗುರುತಿಸಲು ಪೊಲೀಸರು ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.