ಬೆಂಗಳೂರು: ಆತ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ, ಜೊತೆಗೆ ದಾರಿಯೂ ತಪ್ಪಿದ. ಮುಂದೆ ಮನೆಗಳ್ಳನಾಗಿ ಪರಿವರ್ತನೆಯಾಗಿದ್ದ. ಆದರೆ ಆತನ ಅಪರಾಧಗಳ ಮೋಡಸ್ ಆಪರೆಂಡಿ ಅದೇ ಹಳೆಯ ವಿಧಾನ. ಎಮರ್ಜೆನ್ಸಿಗೆಂದು ಮನೆಯ ಕಿಟಕಿ ಪಕ್ಕ ಅಥವಾ ಕಾಂಪೌಂಡಿನಲ್ಲಿ ಹೂ ಕುಂಡದ ಕೆಳಗೋ, ಅಲ್ಲೇ ಎಲ್ಲೋ ಮನೆಯ ಕೀ ಬಚ್ಚಿಟ್ಟು ಮನೆಯವರು ಹೊರಹೋಗುವುದೇ ತಡ, ಈ ಖದೀಮ ಸೀದಾ ಅಲ್ಲಿಗೆ ಎಂಟ್ರಿ ಕೊಡುತ್ತಿದ್ದ. ಮುಂದಿನದು ನೀವು ಊಹಿಸಿದಂತೆಯೇ ಆ ಮನೆಯನ್ನು ದೋಚುತ್ತಿದ್ದ!
ಅದಕ್ಕೇ ಹೇಳೋದು ಎಲ್ಲೆಂದರಲ್ಲಿ ಮನೆಯ ಚಾವಿಯನ್ನು ಬಚ್ಚಿಟ್ಟು ಹೊರಹೋಗುವ ಮುನ್ನ ಇಂತಹ ಖದೀಮರ ಬಗ್ಗೆ ಹುಷಾರ್ ಆಗಿರಿ ಅಂತಾ! ಮನೆಯ ಕಿಟಕಿ ಪಕ್ಕ ಕಣ್ ಹಾಕೊ ಕಳ್ಳರು ಮನೆಗೆ ರಾಜಾರೋಶವಾಗಿ ಎಂಟ್ರಿ ಕೊಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಮನೆಯನ್ನು ದೋಪಿಡಿ ಮಾಡಿ ಹೋಗುತ್ತಿದ್ದರು. ಆದರೆ ಇದೇ ಮಾದರಿ ಕೃತ್ಯ ಎಸಗುತ್ತಿದ್ದ ಖದೀಮರು ಈಗ ಅಂದರ್ ಆಗಿದ್ದಾರೆ. ಹೀಗೆ ದಾರಿ ತಪ್ಪಿದ್ದ ಮಗ ತನ್ನ ಜೊತೆಗೆ ಮತ್ತೊಬ್ಬನನ್ನು ಜಂಟಿ ಮಾಡಿಕೊಂಡಿದ್ದ. ಇವರಿಬ್ಬರೂ ಬರೋಬ್ಬರಿ 19.5 ಲಕ್ಷ ಚಿನ್ನಾಭರಣ ದೋಚಿದ್ದರು. ಆದರೆ ಯಶವಂತಪುರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಮೊದಲ ಆರೋಪಿ ಚಿಕ್ಕ ವಯಸ್ಸಿನಲ್ಲಿ ತಂದೆ ತೀರಿದ್ದರಿಂದ ದುಶ್ಚಟಕ್ಕೆ ಬಿದ್ದು ಕಳ್ಳತನಕ್ಕಿಳಿದಿದ್ದ. 2009 ರಿಂದ ಇಲ್ಲಿಯವರೆಗೆ 32 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಜೈಲಿಗೆ ಹೋಗಿ ಬಂದೂ, ಮತ್ತೆ ಕಳ್ಳತನಕ್ಕಿಳಿಯುತ್ತಿದ್ದ. ಇವನಿಗೆ ಸಾಥ್ ಕೊಟ್ಟವನು ಮತ್ತೊಬ್ಬ ಖತರ್ನಾಕ್ ಆಸಾಮಿ. ಆ ಮತ್ತೊಬ್ಬ ಆರೋಪಿ ತನ್ನ ಮೇಲೆ ಬರೊಬ್ಬರಿ 21 ಪ್ರಕರಣಗಳನ್ನು ಹೊಂದಿದ್ದಾನೆ.
ಯಶವಂತಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?
ಕಳೆದ ಕೆಲ ದಿನಗಳ ಹಿಂದೆ ಯಶವಂತಪುರದಲ್ಲಿ ಕಳ್ಳ ಕೃತ್ಯ ಎಸಗಿದ್ದರು. ಕುಟುಂಬವೊಂದು ತಮ್ಮ ಮಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದರು. ಆ ವೇಳೆ, ಸಂಬಂಧಿಕರು ಬಂದಾಗ ಬೇಕಾಗುತ್ತದೆ ಎಂದು ಕಿಟಕಿ ಬಳಿಯೇ ಕೀ ಇಟ್ಟುಹೋಗಿದ್ದರು. ಆದರೆ ಆ ಮನೆಗೆ ಬಂದಿದ್ದು ಸಂಬಂಧಿಕರು ಅಲ್ಲ; ಬದಲಿಗೆ ಎಂಟ್ರಿ ಕೊಟ್ಟವರು ಇದೇ ಕಳ್ಳ ಜೋಡಿ. ಅದೇ ಕೀ ಬಳಸಿ ಮನೆಗೆ ಎಂಟ್ರಿ ಕೊಟ್ಟಿದ್ದರು.
ಮನೆಗೆ ನುಗ್ಗಿದವರೆ 19.5 ಲಕ್ಷ ರೂಪಾಯಿ ಮೌಲ್ಯದ 369 ಗ್ರಾಂ ಚಿನ್ನ, 529 ಗ್ರಾಂ ಚಿನ್ನಾಭರಣ ದೋಚಿದ್ದರು. ಬಳಿಕ ಚಿನ್ನ ಮಾರಲು ತೆರಳುವ ವೇಳೆ ಪೊಲೀಸರಿಗೆ ಲಾಕ್ ಆಗಿದ್ದಾರೆ. ಇದೇ ರೀತಿ ಸಂಜಯನಗರ, ಮಲ್ಲೇಶ್ವರಂ, ಹೆಬ್ಬಾಳ, ಅಮೃತಹಳ್ಳಿ ಸೇರಿ ಹಲವೆಡೆ ಆರೋಪಿಗಳು ಮನೆಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಯಶವಂತಪುರ ಪೊಲೀಸರು ಇಬ್ಬರನ್ನೂ ಬಂಧಿಸಿ, ತನಿಖೆ ನಡೆಸಿದ್ದಾರೆ.
(yeshwanthpur police arrest two house thieves confiscate rs 20 lakh gold)
Published On - 1:31 pm, Wed, 25 August 21