
ಬೆಂಗಳೂರು, ಜುಲೈ 21: ಗ್ರಾಮೀಣ ಪ್ರದೇಶಗಳ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತೆ ಮಾಡುವಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ (Rashtrotthana Parishat) ಶೈಕ್ಷಣಿಕ ಉಪಕ್ರಮವಾದ ‘ತಪಸ್ (TAPAS)’ ಮಹತ್ವದ ಯಶಸ್ಸು ಸಾಧಿಸಿದೆ. ಈ ವಿಚಾರವಾಗಿ ಆರ್‌ಎಸ್‌ಎಸ್ ಪ್ರಾಂತ್ ಪ್ರಚಾರ ಪ್ರಮುಖ್, ಉಪನ್ಯಾಸಕ ರಾಜೇಶ್ ಪದ್ಮಾರ್ ಎಕ್ಸ್ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ತಪಸ್’ನ 2025ರ ಬ್ಯಾಚ್ ಅತ್ಯುತ್ತಮ ಫಲಿತಾಂಶ ಪಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ತಪಸ್’ನ 2025 ರ ಸಾಲಿನಲ್ಲಿ 14 ಮಂದಿ ವಿದ್ಯಾರ್ಥಿಗಳು ಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಐಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ. 9 ಮಂದಿ ವಿದ್ಯಾರ್ಥಿಗಳು ಎನ್ಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ರಾಜೇಶ್ ಪದ್ಮಾರ್ ತಿಳಿಸಿದ್ದಾರೆ.
ಗ್ರಾಮೀಣ ರೈತರು ಮತ್ತು ಕಾರ್ಮಿಕರ ಕುಟುಂಬಗಳಿಂದ ಬಂದ ಈ ಮಕ್ಕಳು ದೇಶದಾದ್ಯಂತ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವುದು ಅವರ ಹಿರಿಮೆಯನ್ನು ಎತ್ತಿತೋರಿಸಿದೆ. ಗುಣಮಟ್ಟದ ಶಿಕ್ಷಣದ ಕೊಡುಗೆಯ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ನಮ್ಮ ಧ್ಯೇಯದ ಮೂಲವಾಗಿದೆ ಎಂದು ರಾಜೇಶ್ ಪದ್ಮಾರ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಆರ್‌ಎಸ್‌ಎಸ್ ಅಧೀನದಲ್ಲಿ ಕಾರ್ಯಾಚರಿಸುವ ರಾಷ್ಟ್ರೋತ್ಥಾನ ಪರಿಷತ್ತಿನ ‘ತಪಸ್ (ತಪಸ್ ಸಾಧನಾ)’ ಕರ್ನಾಟಕದ ಹಿಂದುಳಿದ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ವಸತಿ ಶಿಕ್ಷಣ ಒದಗಿಸುವ ಉಪಕ್ರಮವಾಗಿದೆ. 2012 ರಲ್ಲಿ ಪ್ರಾರಂಭವಾದ ಈ ಉಪಕ್ರಮ, ಐಐಟಿ-ಜೆಇಇ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಂಟಿ ಪ್ರವೇಶ ಪರೀಕ್ಷೆ) ಪ್ರವೇಶ ಪರೀಕ್ಷೆ ಪಾಸ್ ಮಾಡಲು ಮತ್ತು ಉನ್ನತ ಎಂಜಿನಿಯರಿಂಗ್ ಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ಅವರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.
ಶಿಕ್ಷಣ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ