ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿಲ್ಲ ಅಗತ್ಯ ಬೋಧಕರು: ಅನುದಾನಕ್ಕೂ ಬರ!
ರಾಜ್ಯದ ವಿಶ್ವವಿದ್ಯಾಲಯಗಳು ಬೋಧಕ ಹಾಗೂ ಅನುದಾನದ ತೀವ್ರ ಕೊರತೆ ಎದುರಿಸುತ್ತಿವೆ. ಹೆಚ್ಚಿನ ವಿವಿಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ, ಹಳೆಯ ವಿವಿಗಳಲ್ಲಿ ಶೇ.70ರಷ್ಟು ಅಧ್ಯಾಪಕರ ಕೊರತೆಯಿದೆ. ಹೊಸ ವಿವಿಗಳು ಅನುದಾನವಿಲ್ಲದೆ ಶುಲ್ಕ ಹೆಚ್ಚಿಸಿ, ವಿದ್ಯಾರ್ಥಿ ದಾಖಲಾತಿ ಕಳೆದುಕೊಳ್ಳುತ್ತಿವೆ. 5 ವಿವಿಗಳಿಗೆ ಪೂರ್ಣಾವಧಿ ಕುಲಪತಿಗಳೂ ಇಲ್ಲ.

ಬೆಂಗಳೂರು, ಡಿಸೆಂಬರ್ 17: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ತೀವ್ರ ಕೊರತೆ ಉಂಟಾಗಿದ್ದು, ಬಹುತೇಕ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿ ಕಾರ್ಯ ನಿರ್ವಹಿಸಬೇಕಾದ ಸ್ಥಿತಿ ಉದ್ಭವಿಸಿದೆ. ಹಳೆಯ ವಿಶ್ವವಿದ್ಯಾಲಯಗಳು ತೀವ್ರ ಅಧ್ಯಾಪಕರ ಕೊರತೆ ಎದುರಿಸುತ್ತಿದ್ದರೆ, ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳು ಪರ್ಯಾಪ್ತ ಬೋಧಕರು ಅಥವಾ ಸರ್ಕಾರಿ ಅನುದಾನವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಹೊಸ ವಿಶ್ವವಿದ್ಯಾಲಯಗಳು ಶುಲ್ಕವನ್ನು ಭಾರಿಯಾಗಿ ಹೆಚ್ಚಿಸಬೇಕಾದ ಪರಿಸ್ಥಿತಿ ಉಂಟಾಗಿ, ವಿದ್ಯಾರ್ಥಿಗಳ ದಾಖಲಾತಿಯೂ ಕಡಿಮೆಯಾಗುತ್ತಿದೆ ಎನ್ನಲಾಗಿದೆ.
ಮೈಸೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿಯೇ ಬೋಧಕ ಸಿಬ್ಬಂದಿಯ ಕೊರತೆ ಸುಮಾರು ಶೇಕಡಾ 70ರಷ್ಟಿದೆ. ನಿಯಮಿತ ಅವಧಿಯಲ್ಲಿ ನೇಮಕಾತಿ ನಡೆಯದ ಕಾರಣ, ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ. ಜೊತೆಗೆ, ರಾಜ್ಯದ 32 ವಿಶ್ವವಿದ್ಯಾಲಯಗಳ ಪೈಕಿ ಐದು ವಿಶ್ವವಿದ್ಯಾಲಯಗಳಿಗೆ ಪೂರ್ಣಾವಧಿಯ ಕುಲಪತಿಗಳು ಇಲ್ಲ ಎಂಬ ಮಾಹಿತಿಯನ್ನು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಹಿರಂಗಪಡಿಸಿರೋದು ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿ ತೆರೆದಿಟ್ಟಿದೆ.
ಇದನ್ನೂ ಓದಿ: UPSC CDS 1 ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ; ಪದವೀಧರರು ಅರ್ಹರು
ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ನೇತೃತ್ವದ ಸರ್ಕಾರದ ಅಔದಿಯಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ನೀತಿಯನ್ನು ಜಾರಿಗೆ ತರಲಾಗಿತ್ತು. ಆ ವೇಳೆ ನೂತನವಾಗಿ ಸ್ಥಾಪಿಸಿದ್ದ 10 ವಿಶ್ವವಿದ್ಯಾಲಯಗಳ ಪೈಕಿ ಬಹುತೇಕ ಯೂನಿವರ್ಸಿಟಿಗಳನ್ನು ಮತ್ತೆ ಅವುಗಳ ಪೋಷಕ ವಿಶ್ವವಿದ್ಯಾಲಯಗಳೊಂದಿಗೆ ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ. ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ ಬಳಿಕ ಸರ್ಕಾರ ಅನುದಾನ ನೀಡುವುದನ್ನು ನಿಲ್ಲಿಸಿದ ಪರಿಣಾಮ, ಅವು ಸ್ವಂತವಾಗಿ ಖರ್ಚುಗಳನ್ನು ನಿರ್ವಹಿಸಬೇಕಾದ ಸ್ಥಿತಿ ಉಂಟಾಗಿದೆ. ಹೀಗಾಗಿ ಅನುದಾನದ ಕೊರತೆಯಿಂದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿ ಶುಲ್ಕವನ್ನು ಹೆಚ್ಚಿಸಿದ ಪರಿಣಾಮ ಬಿಎ, ಬಿಕಾಂ, ಬಿಎಸ್ಸಿ ಮುಂತಾದ ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:08 pm, Wed, 17 December 25




