Inspirational Story: 61ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್; 650ಕ್ಕೆ 500 ಅಂಕ ಪಡೆದ ಮಹಿಳೆ

ಜಲಂಧರ್‌ನ ನರೇಂದ್ರ ಕೌರ್(61) 10ನೇ ತರಗತಿ ಪರೀಕ್ಷೆ ಬರೆದು 650ಕ್ಕೆ 500 ಅಂಕ ಪಡೆದು ಪಾಸಾಗಿದ್ದಾರೆ. 45 ವರ್ಷಗಳ ಹಿಂದೆ ಬಿಟ್ಟಿದ್ದ ತಮ್ಮ ಶಿಕ್ಷಣವನ್ನು ಮುಂದುವರಿಸಿದ ಇವರು, 'ಓದಿಗೆ ವಯಸ್ಸಿನ ಮಿತಿ ಇಲ್ಲ' ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ 12ನೇ ತರಗತಿ ಹಾಗೂ ಪದವಿ ಪಡೆಯುವ ಗುರಿ ಹೊಂದಿದ್ದು, ಇವರ ಈ ಪ್ರೇರಣಾದಾಯಕ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Inspirational Story: 61ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್; 650ಕ್ಕೆ 500 ಅಂಕ ಪಡೆದ ಮಹಿಳೆ
61ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್

Updated on: May 15, 2026 | 3:26 PM

ಜಲಂಧರ್: “ಓದಿಗೆ ವಯಸ್ಸಿನ ಮಿತಿ ಇಲ್ಲ, ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ” ಎಂಬುದನ್ನು ಪಂಜಾಬ್‌ನ 61 ವರ್ಷದ ನರೇಂದ್ರ ಕೌರ್ ಅವರು ಸಾಬೀತುಪಡಿಸಿದ್ದಾರೆ. ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಪುಸ್ತಕ ಹಿಡಿದು ಪರೀಕ್ಷೆಗೆ ಕುಳಿತಿದ್ದ ಈ ಅಜ್ಜಿ, ಈಗ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ (PSEB) 10ನೇ ತರಗತಿ ಪರೀಕ್ಷೆಯಲ್ಲಿ ಭರ್ಜರಿ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

650ಕ್ಕೆ 500 ಅಂಕಗಳ ಸಾಧನೆ:

ನರೇಂದ್ರ ಕೌರ್ ಅವರು ಕೇವಲ ಪಾಸಾಗುವುದಷ್ಟೇ ಅಲ್ಲದೆ, ಶೇ. 77 ರಷ್ಟು ಅಂಕಗಳನ್ನು ಗಳಿಸಿದ್ದಾರೆ. 650 ಅಂಕಗಳಿಗೆ 500 ಅಂಕಗಳನ್ನು ಪಡೆಯುವ ಮೂಲಕ ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೂ ಸವಾಲು ಹಾಕಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ಕೌಟುಂಬಿಕ ಕಾರಣಗಳಿಂದಾಗಿ ಶಿಕ್ಷಣ ಅರ್ಧಕ್ಕೆ ನಿಂತುಹೋಗಿತ್ತು. ಆದರೆ, ಮನದ ಮೂಲೆಯಲ್ಲಿದ್ದ ಕಲಿಯುವ ಹಂಬಲ ಮಾತ್ರ ಕಡಿಮೆಯಾಗಿರಲಿಲ್ಲ.

ವಿದೇಶದಲ್ಲಿರುವ ಪುತ್ರರು, ಇಲ್ಲಿ ತಾಯಿಯ ಸಾಧನೆ:

ನರೇಂದ್ರ ಕೌರ್ ಅವರ ಇಬ್ಬರು ಪುತ್ರರು ಪ್ರಸ್ತುತ ಅಮೆರಿಕ (USA) ಮತ್ತು ಕೆನಡಾದಲ್ಲಿ ನೆಲೆಸಿದ್ದಾರೆ. ಮಕ್ಕಳೆಲ್ಲಾ ಜೀವನದಲ್ಲಿ ನೆಲೆ ನಿಂತ ಮೇಲೆ, ತಮಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ ಅವರು ಮರಳಿ ಶಾಲೆಗೆ ಸೇರಲು ನಿರ್ಧರಿಸಿದರು. ಇದಕ್ಕೆ ಅವರ ಕುಟುಂಬ ವರ್ಗದವರು ಕೂಡ ಪೂರ್ಣ ಬೆಂಬಲ ನೀಡಿದ್ದರು.

“ನಾನು ವಿವಾಹವಾದ ಕಾಲದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ನನ್ನ ಕನಸನ್ನು ನನಸು ಮಾಡಿಕೊಳ್ಳಲು ಇದು ಸರಿಯಾದ ಸಮಯ ಎಂದು ನನಗೆ ಅನಿಸಿತು,” ಎನ್ನುತ್ತಾರೆ ನರೇಂದ್ರ ಕೌರ್.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಮುಂದಿನ ಗುರಿ ಏನು?

10ನೇ ತರಗತಿಯ ಯಶಸ್ಸು ಇವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮುಂದೆ 12ನೇ ತರಗತಿ ಪರೀಕ್ಷೆ ಬರೆದು, ಆನಂತರ ಪದವಿ (B.A.) ಪಡೆಯುವ ಗುರಿಯನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಈ ಸಾಧನೆಯ ವೀಡಿಯೋ ಮತ್ತು ಸುದ್ದಿಗಳು ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us