ಬೆಂಗಳೂರು: ಕೊವಿಡ್ ಪಿಡುಗಿನ ವೇಳೆ ಘೋಷಿಸಿದ್ದ ಲಾಕ್ಡೌನ್ ನಿರ್ಬಂಧಗಳು (Covid Lockdown) ಸಮಾಜದ ಮೇಲೆ ಬೀರಿರುವ ಪರಿಣಾಮ ಇದೀಗ ಸ್ಪಷ್ಟವಾಗುತ್ತಿದೆ. ಸುದೀರ್ಘ ಲಾಕ್ಡೌನ್ನಿಂದಾಗಿ ಶಾಲೆಗಳು ಮುಚ್ಚಿದ್ದವು. ಆನ್ಲೈನ್ ಕ್ಲಾಸ್ಗಳು (Online Classes) ಅನಿವಾರ್ಯವಾಗಿದ್ದವು. ಮಕ್ಕಳಿಂದ ಫೋನ್, ಟ್ಯಾಬ್, ಲ್ಯಾಪ್ಟಾಪ್ನಂಥ ಗ್ಯಾಜೆಟ್ಗಳನ್ನು ದೂರ ಇರಿಸುತ್ತಿದ್ದ ಪೋಷಕರು ಲಾಕ್ಡೌನ್ ವೇಳೆ ತಾವೇ ಮಕ್ಕಳ ಕೈಗೆ ಸ್ಮಾರ್ಟ್ ಗ್ಯಾಜೆಟ್ಗಳನ್ನು (Smart Gadgets) ಕೊಟ್ಟರು. ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಸ್ಕ್ರೀನ್ ಟೈಮ್ ಹೆಚ್ಚಾಗುವುದರೊಂದಿಗೆ ಅವರಲ್ಲಿ ಗ್ಯಾಜೆಟ್ ವ್ಯಸನವೂ ಆವರಿಸಿಕೊಂಡಿತು. ಇಷ್ಟು ದಿನ ಕೇವಲ ಕೆಲವೇ ಪೋಷಕರ ಅಭಿಪ್ರಾಯದಂತಿದ್ದ, ಶಾಲೆಗಳಲ್ಲಿ ಶಿಕ್ಷಕರ ನಡುವಣ ವಿಚಾರ ವಿನಿಮಯದಲ್ಲಿ ವ್ಯಕ್ತವಾಗುತ್ತಿದ್ದ ಈ ಅಂಶಕ್ಕೆ ಇದೀಗ ಸಂಶೋಧನೆಯ ಪುಷ್ಟಿಯೂ ಸಿಕ್ಕಿದೆ. ‘ಲೋಕಲ್ ಸರ್ಕಲ್ಸ್’ ಹೆಸರಿನ ಸಾಮಾಜಿಕ ಮಾಧ್ಯಮ ಕಮ್ಯುನಿಟಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಪೋಷಕರು ತಮ್ಮ ಮಕ್ಕಳು ಮೊಬೈಲ್ಗೆ ದಾಸರಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಭಾರತದ ವಿವಿಧ ನಗರಗಳಲ್ಲಿ ವಾಸವಿರುವ ಪೋಷಕರನ್ನು ಈ ಸಮೀಕ್ಷೆಗಾಗಿ ಸಂಶೋಧಕರು ಸಂಪರ್ಕಿಸಿ, ಪ್ರತಿಕ್ರಿಯೆ ಪಡೆದಿದ್ದರು. 9ರಿಂದ 13 ವರ್ಷದೊಳಗಿನ ಮಕ್ಕಳ ಪೋಷಕರ ಪೈಕಿ ಶೇ 55ರಷ್ಟು ಮಂದಿ ತಮ್ಮ ಮಕ್ಕಳು ಸದಾ ಫೋನ್ ಹಿಡಿದಿರುತ್ತಾರೆ ಎಂದು ಹೇಳಿದ್ದರು. 13ರಿಂದ 17 ವರ್ಷದೊಳಗಿನ ಮಕ್ಕಳ ಪೋಷಕರ ಪೈಕಿ ಶೇ 71ರಷ್ಟು ಮಂದಿ ತಮ್ಮ ಮಕ್ಕಳಿಗೆ ಮೊಬೈಲ್ ವ್ಯಸನವಿದೆ ಎಂದು ಒಪ್ಪಿಕೊಂಡಿದ್ದರು. ‘ಮೊಬೈಲ್ ಅಥವಾ ಟ್ಯಾಬ್ ಬಳಸಿ ತಮ್ಮ ಮಕ್ಕಳು ಏನು ಮಾಡುತ್ತಾರೆ ಎಂಬ ಅರಿವು ನಮಗಿಲ್ಲ. ಆದರೆ ಅವರ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ’ ಎಂದೂ ಸಾಕಷ್ಟು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಮಕ್ಕಳ ವರ್ತನೆಯಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸಿರುವ ಪೋಷಕರು ಹಾಗೂ ಶಿಕ್ಷಕರು ಶಾಲಾ ಆಡಳಿತ ಮಂಡಳಿಗಳ ನೆರವಿನಿಂದ ಇದೀಗ ಸುಧಾರಣೆಗೂ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಅದರಂತೆ ಬೆಂಗಳೂರಿನ ಹಲವು ಶಾಲೆಗಳು ಪೋಷಕರಿಂದ ಲಿಖಿತ ಆಶ್ವಾಸನೆ ಪಡೆದುಕೊಳ್ಳುತ್ತಿವೆ. ‘ನಮ್ಮ ಮಕ್ಕಳು ಪ್ರಾಪ್ತ ವಯಸ್ಕರಾಗುವವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆಯಲು, ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಮಕ್ಕಳ ಆನ್ಲೈನ್ ಚಟುವಟಿಕೆಯ ಮೇಲೆ ನಿಗಾ ಇರಿಸುತ್ತೇವೆ’ ಎಂದು ಪೋಷಕರು ಶಾಲೆಗಳಿಗೆ ಬರೆದುಕೊಡುವ ಮೂಲಕ ಮಕ್ಕಳನ್ನು ಸರಿದಾರಿಗೆ ತರಲು ಬದ್ಧತೆ ತೋರುತ್ತಿದ್ದಾರೆ.
ಇನ್ಸ್ಟಾ ರೀಲ್ಸ್ಗಳಲ್ಲಿ ಮಕ್ಕಳು
ಹಲವು ಮಕ್ಕಳು ಇನ್ಸ್ಟಾಗ್ರಾಮ್ ರೀಲ್ಸ್ಗಳಲ್ಲಿ ಶಾಲಾ ಸಮವಸ್ತ್ರಗಳಲ್ಲಿಯೇ ಕಾಣಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿತ್ತು. ಇದರ ಜೊತೆಗೆ ಮಕ್ಕಳೇ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ಗಳಲ್ಲಿ ಅಕೌಂಟ್ಗಳನ್ನು ತೆಗೆದು ತಮ್ಮ ಶಿಕ್ಷಕರೂ ಸೇರಿದಂತೆ ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದರು. ಕೆಲವರು ಪ್ರತ್ಯೇಕ ಗ್ರೂಪ್ಗಳನ್ನೂ ಮಾಡಿಕೊಂಡು ಆಕ್ಷೇಪಾರ್ಹ ಚಿತ್ರಗಳು ಹಾಗೂ ಚಾಟ್ಗಳನ್ನು ಶೇರ್ ಮಾಡುತ್ತಿದ್ದರು. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ದಾರಿ ತಪ್ಪುವುದು ಅವರ ಮತ್ತು ಸಮಾಜದ ಭವಿಷ್ಯಕ್ಕೆ ಮಾರಕ ಎಂಬುದನ್ನು ಮನಗಂಡ ಶಿಕ್ಷಕರು ಪೋಷಕರನ್ನು ಕರೆದು ಮಾತನಾಡಲು ಆರಂಭಿಸಿದರು. ಅದರ ಮುಂದಿನ ಬೆಳವಣಿಗೆ ಎಂಬಂತೆ ಪೋಷಕರಿಂದ ಲಿಖಿತ ಆಶ್ವಾಸನೆ ಪಡೆದುಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಸ್ಕೂಲ್ಬ್ಯಾಗ್ನಲ್ಲಿ ಕಾಂಡೋಮ್, ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆ; ಶಿಕ್ಷಕರಿಗೆ ಆಘಾತ
ಶಾಲಾ ಬ್ಯಾಗ್ಗಳಲ್ಲಿ ಕಾಂಡೋಮ್ ಪತ್ತೆ ವಿದ್ಯಮಾನಕ್ಕೆ ಕನ್ನಡ ಚಿಂತಕರು ಪ್ರತಿಕ್ರಿಯೆಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಆ್ಯಕ್ಟಿವೇಟ್ ಮಾಡಬೇಕು ಎಂದೂ ಹಲವು ಶಾಲೆಗಳು ಪೋಷಕರಿಗೆ ಇಮೇಲ್, ವಾಟ್ಸಾಪ್ ಮೆಸೇಜ್ ಕಳಿಸಿವೆ. ಮಕ್ಕಳಿಂದ ಮೊಬೈಲ್ ದೂರ ಇರಿಸಿ. ಮಾತನಾಡುವ ಅಗತ್ಯ ಇದ್ದರೆ ಮಾತ್ರ ಬೇಸಿಕ್ ಸೆಟ್ನ ಫೋನ್ ಕೊಡಿ ಎಂದು ಕೆಲವು ಶಾಲೆಗಳು ಸಲಹೆ ಮಾಡಿವೆ. ಶಾಲೆಯ ಆವರಣಗಳಲ್ಲಿ ಮಕ್ಕಳು ಸ್ಮಾರ್ಟ್ಫೋನ್ ತರುವುದನ್ನು ಈಗಾಗಲೇ ಹಲವು ಶಾಲೆಗಳ ಆಡಳಿತ ಮಂಡಳಿಗಳು ನಿಷೇಧಿಸಿದ್ದು, ಅತ್ಯಗತ್ಯ-ಅನಿವಾರ್ಯ ಸಂದರ್ಭಗಳಲ್ಲಿ ಮಕ್ಕಳಿಗೆ ಫೋನ್ ಕಳಿಸುವಂತಿದ್ದರೆ ಅದನ್ನು ಶಿಕ್ಷಕರ ಗಮನಕ್ಕೆ ತರುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಈ ನಡುವೆ ರಾಜ್ಯದ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ಕುರಿತು ಜಾಗೃತಿ ಮೂಡಿಸುವ, ಅಪಾಯಗಳನ್ನು ಮನವರಿಕೆ ಮಾಡಿಕೊಡುವ ತರಗತಿಗಳೂ ಆರಂಭವಾಗಿದೆ. ‘ಕರ್ನಾಟಕದಲ್ಲಿ ಸೈಬರ್ ನೀತಿ ಇನ್ನೂ ಬಿಗಿಯಾಗಬೇಕಿದೆ. ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸುವಾಗ ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಹಲವು ಶಾಲೆಗಳು ಇಂದಿಗೂ ಹೋಮ್ವರ್ಕ್ ಮತ್ತಿತರ ಸಂದೇಶಗಳನ್ನು ವಾಟ್ಸಾಪ್ ಮಾಡುವುದು ಮುಂದುವರಿಸಿವೆ. ಇದು ತಕ್ಷಣ ನಿಲ್ಲಬೇಕು. ಮಕ್ಕಳಿಂದ ಮೊಬೈಲ್ಗಳನ್ನು ಎಷ್ಟು ದೂರ ಇಟ್ಟರೆ ಅಷ್ಟು ಒಳ್ಳೆಯದು’ ಎಂದು ತಾಕೀತು ಮಾಡುತ್ತಾರೆ ಪೋಷಕರಾದ ಅರ್ಚನಾ.
‘ಮಕ್ಕಳು ಅಪಾಯಕ್ಕೆ ಸಿಲುಕಬಾರದು ಎನ್ನುವ ಉದ್ದೇಶದಿಂದ ನಾವು ಇಂಥ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ’ ಎಂಬ ಬನಶಂಕರಿ 3ನೇ ಹಂತದ ಲಿಟ್ಲ್ ಫ್ಲವರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಿ.ಗಾಯಿತ್ರಿದೇವಿ ಹಾಗೂ ಆಕ್ಸ್‌ಫರ್ಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಪ್ರಾಂಶುಪಾಲ ಬಿ.ಆರ್.ಸುಪ್ರೀತ್ ಅವರ ಹೇಳಿಕೆಗಳನ್ನು ‘ಪ್ರಜಾವಾಣಿ’ ವರದಿ ಮಾಡಿದೆ.
ಇದನ್ನೂ ಓದಿ: ಆಘಾತ ಆಗಬೇಕಾದ್ದು ಮಕ್ಕಳ ಬ್ಯಾಗ್ನಲ್ಲಿ ಕಾಂಡೋಮ್ ಸಿಕ್ಕಿದ್ದಕ್ಕಲ್ಲ; ಕರ್ನಾಟಕದಲ್ಲಿ ಗರಿಗೆದರಿದೆ ಮಕ್ಕಳ ಮುಗ್ಧತೆಯ ಚರ್ಚೆ
ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಮಕ್ಕಳ ಮನಸ್ಥಿತಿ ಕುರಿತು ತಜ್ಞರು ಏನಂತಾರೆ?
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Mon, 12 December 22