ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಸ್ಕೂಲ್ಬ್ಯಾಗ್ನಲ್ಲಿ ಕಾಂಡೋಮ್, ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆ; ಶಿಕ್ಷಕರಿಗೆ ಆಘಾತ
ಕೆಲ ಮಕ್ಕಳ ಬ್ಯಾಗ್ಗಳಲ್ಲಿ ಸ್ಮಾರ್ಟ್ಫೋನ್ಗಳ ಜೊತೆಗೆ, ಕಾಂಡೋಮ್ಗಳು, ಸಿಗರೇಟ್ಗಳು, ಮತ್ತೇರಿಸುವ ವಾಸನೆ ಹೊಂದಿರುವ ವೈಟ್ನರ್ಗಳು ಮತ್ತು ಹೆಚ್ಚಿನ ಮೊತ್ತದ ನಗದು ಪತ್ತೆಯಾಗಿರುವುದು ಶಿಕ್ಷಕರಿಗೆ ಆಘಾತ ತಂದಿದೆ.
ಬೆಂಗಳೂರು: ವಿವಿಧ ಶಾಲೆಗಳ ಮಕ್ಕಳ ಬ್ಯಾಗ್ಗಳಲ್ಲಿ ಹಲವು ಆಘಾತಕಾರಿ ವಸ್ತುಗಳಿರುವುದು ಬೆಳಕಿಗೆ ಬಂದಿದ್ದು, ಶಾಲಾ ಸಿಬ್ಬಂದಿಯಲ್ಲಿ ಆಘಾತ ಉಂಟು ಮಾಡಿದೆ. ಮಕ್ಕಳ ಏಕಾಗ್ರತೆ ಮತ್ತು ಕಲಿಕೆಗೆ ಸ್ಮಾರ್ಟ್ಫೋನ್ಗಳಿಂದ ಭಂಗ ಬರುತ್ತಿದೆ. ಇದೇ ಕಾರಣಕ್ಕೆ ಶಾಲೆಗಳಿಗೆ ಸ್ಮಾರ್ಟ್ಫೋನ್ ತರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಹಲವು ಶಾಲೆಗಳು ವಿದ್ಯಾರ್ಥಿಗಳು ಮಕ್ಕಳ ಬ್ಯಾಗ್ಗಳನ್ನು ತಪಾಸಣೆಗೆ ಒಳಪಡಿಸುತ್ತಿವೆ. ಈ ವೇಳೆ ಕೆಲ ಮಕ್ಕಳ ಬ್ಯಾಗ್ಗಳಲ್ಲಿ ಸೆಲ್ಫೋನ್ಗಳು, ಸ್ಮಾರ್ಟ್ಫೋನ್ಗಳು, ಜೊತೆಗೆ ಕಾಂಡೋಮ್ಗಳು, ಗರ್ಭನಿರೋಧಕ ಮಾತ್ರೆಗಳು, ಲೈಟರ್ಗಳು, ಸಿಗರೇಟ್ಗಳು, ಮತ್ತೇರಿಸುವ ವಾಸನೆ ಹೊಂದಿರುವ ವೈಟ್ನರ್ಗಳು ಮತ್ತು ಹೆಚ್ಚಿನ ಮೊತ್ತದ ನಗದು ಪತ್ತೆಯಾಗಿವೆ. ಈ ಬೆಳವಣಿಗೆಯು ಹಲವು ಶಾಲೆಗಳ ಬೋಧಕ ಸಿಬ್ಬಂದಿಯಲ್ಲಿ ಆಘಾತ ಉಂಟು ಮಾಡಿದೆ. ‘ಮಕ್ಕಳು ದಾರಿ ತಪ್ಪುತ್ತಿದ್ದಾರೆಯೇ? ಇಂಥ ಮಕ್ಕಳನ್ನು ನಿಭಾಯಿಸುವುದು ಹೇಗೆ’ ಎಂಬ ಗೊಂದಲ ಅವರನ್ನು ಕಾಡುತ್ತಿದೆ.
ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವ್ಯವಸ್ಥಾಪಕ ಮಂಡಳಿಯು (Associated Managements of Primary and Secondary Schools in Karnataka – KAMS) ಸಹ ಮಕ್ಕಳ ಬ್ಯಾಗ್ಗಳನ್ನು ತಪಾಸಣೆಗೆ ಒಳಪಡಿಸುವಂತೆ ಎಲ್ಲ ಶಾಲೆಗಳಿಗೆ ಸಲಹೆ ಮಾಡಿದೆ. ಆದರೆ ಮಕ್ಕಳ ಬ್ಯಾಗ್ಗಳಲ್ಲಿ ಇಂಥವೆಲ್ಲಾ ಇರಬಹುದು ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಬ್ಯಾಗ್ ತಪಾಸಣೆಯಲ್ಲಿ ಅನಪೇಕ್ಷಿತ ವಸ್ತುಗಳು ಪತ್ತೆಯಾದ ನಂತರ ಹಲವು ಶಾಲೆಗಳು ಮಕ್ಕಳ ಹಾಗೂ ಪೋಷಕರ ವಿಶೇಷ ಸಭೆಗಳನ್ನು ಆಯೋಜಿಸಿದ್ದವು. ತಮ್ಮ ಮಕ್ಕಳ ಬ್ಯಾಗ್ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಆಲ್ಕೊಹಾಲ್ನಂಥವು ಪತ್ತೆಯಾದ ವಿಷಯ ತಿಳಿದ ಪೋಷಕರು ಸಹ ಆಘಾತಕ್ಕೆ ಒಳಗಾಗಿದ್ದಾರೆ.
ಈ ಬೆಳವಣಿಗೆಯ ಕುರಿತು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಯು ನ 30ರ ಸಂಚಿಕೆಯ ಮುಖಪುಟದಲ್ಲಿ ವರದಿ ಪ್ರಕಟಿಸಿದೆ. ‘ಇದು ಅತ್ಯಂತ ಸೂಕ್ಷ್ಮ ಅಂಶವಾಗಿರುವುದರಿಂದ ಹಲವು ಶಾಲೆಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿವೆ. ಯಾರ ಬ್ಯಾಗ್ನಲ್ಲಿ ಏನೆಲ್ಲಾ ಸಿಕ್ಕಿದೆ ಎಂಬುದನ್ನು ಬಹಿರಂಗಪಡಿಸಿದರೆ ವಿದ್ಯಾರ್ಥಿಗಳಿಗೆ ಅವಮಾನ ಆಗಬಹುದು. ಅವರು ಮಾನಸಿಕವಾಗಿ ಕುಗ್ಗಬಹುದು ಎಂಬ ಕಾರಣಕ್ಕೆ ಆಪ್ತ ಸಮಾಲೋಚನೆಯ ಮೂಲಕ ವಿದ್ಯಾರ್ಥಿಗಳ ನಡವಳಿಕೆಗಳಲ್ಲಿ ಬದಲಾವಣೆ ತರಲು ಮುಂದಾಗಿವೆ. ಇಂಥ ವಿದ್ಯಾರ್ಥಿಗಳಿಗೆ 10 ದಿನಗಳ ರಜೆ ಕೊಡಲು ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿವೆ’ ಎಂಬ ನಾಗರಬಾವಿ ಬಡಾವಣೆಯಲ್ಲಿರುವ ಶಾಲೆಯೊಂದರ ಪ್ರಾಚಾರ್ಯರ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ಉಲ್ಲೇಖಿಸಿದೆ.
ಬೆಂಗಳೂರು ನಗರ ಹಾಗೂ ಹೊರವಲಯದ ಶೇ 80ರಷ್ಟು ಶಾಲೆಗಳಲ್ಲಿ ತಪಾಸಣೆ ನಡೆದಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರ ಬ್ಯಾಗ್ನಲ್ಲಿ ಬಾಯಿಯಿಂದ ತೆಗೆದುಕೊಳ್ಳುವ ಗರ್ಭನಿರೋಧಕ ಮಾತ್ರೆಗಳು (i-Pill) ಹಾಗೂ ನೀರಿನ ಬಾಟಲಿಯಲ್ಲಿ ಮದ್ಯ ಇದ್ದುದು ಪತ್ತೆಯಾಗಿತ್ತು. ಕೆಲ ಶಾಲೆಗಳ 10ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬ್ಯಾಗ್ಗಳಲ್ಲಿ ಕಾಂಡೋಮ್ಗಳು ಪತ್ತೆಯಾಗಿವೆ. ಈ ಕುರಿತು ಶಿಕ್ಷಕರು ಪ್ರಶ್ನಿಸಿದಾಗ ಸಿಕ್ಕ ಉತ್ತರವೂ ಆಘಾತಕಾರಿಯಾಗಿತ್ತು. ‘ಕಾಲ ಬದಲಾಗಿದೆ ಸರ್, ಹುಡುಗ-ಹುಡುಗಿಯರು ಈಗ ಹೆಚ್ಚು ಸಮಯ ಒಟ್ಟೊಟ್ಟಿಗೆ ಕಳೆಯುತ್ತೇವೆ. ಟ್ಯೂಷನ್ಗಳಿಗೆ ಹೋಗುತ್ತೇವೆ. ಕೆಲವೊಮ್ಮೆ ಸ್ವಲ್ಪ ಥ್ರಿಲ್ ಬೇಕು ಅನ್ನಿಸುತ್ತೆ. ಇಂಥ ಸಂದರ್ಭದಲ್ಲಿ ನಮ್ಮ ಮುನ್ನೆಚ್ಚರಿಕೆಯಲ್ಲಿ ನಾವಿರಬೇಕಲ್ವಾ’ ಎಂದು ಕೆಲ ವಿದ್ಯಾರ್ಥಿಗಳು ತಮ್ಮ ಪ್ರಶ್ನಿಸಿದ ಶಾಲಾ ಸಿಬ್ಬಂದಿಗೆ ತಿಳಿಸಿದ್ದಾರೆ.
ಮಾದಕ ವ್ಯಸನದ ಅಪಾಯಗಳ ಬಗ್ಗೆ ಎಚ್ಚರವಿರಲಿ
‘ಶಾಲಾ ಮಕ್ಕಳ ಬ್ಯಾಗ್ಗಳಲ್ಲಿ ಪತ್ತೆಯಾದ ವಸ್ತುಗಳ ಬಗ್ಗೆ ಪೋಷಕರು, ಶಾಲಾ ಸಿಬ್ಬಂದಿ ಆಘಾತಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯನ್ನಂತೂ ಕಡ್ಡಾಯವಾಗಿ ವಹಿಸಬೇಕು’ ಎಂದು ಸಲಹೆ ಮಾಡುತ್ತಾರೆ ಬೆಂಗಳೂರು ಕತ್ರಿಗುಪ್ಪೆಯ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್. ‘ಕೊವಿಡ್ನಿಂದ ಮಕ್ಕಳ ವರ್ತನೆ ಮಾತ್ರವಲ್ಲ ಪೋಷಕರ ವರ್ತನೆಯೂ ಬದಲಾಗಿದೆ. ಮನೆಗಳಲ್ಲಿ ಕುಟುಂಬದ ಸಮಯ (ಫ್ಯಾಮಿಲಿ ಟೈಮ್) ಬದಲಾಗಿದೆ. ಎಲ್ಲರೂ ಒಟ್ಟಿಗೆ ಊಟ ಮಾಡುವ, ತಿಂಡಿ ತಿನ್ನುವ ಅಥವಾ ಸಂಜೆ ಕಾಫಿಯ ನಂತರ ಮನೆಮಂದಿಯೆಲ್ಲರೂ ಕುಳಿತು ಒಂದಿಷ್ಟು ಮಾತನಾಡುವ ಪ್ರವೃತ್ತಿ ಕೆಲ ಕುಟುಂಬಗಳಲ್ಲಿ ಕಡಿಮೆಯಾಗಿದೆ. ಪೋಷಕರೊಂದಿಗಿನ ದೈಹಿಕ ಸಾಮಿಪ್ಯ ಮತ್ತು ಆಪ್ತ ಮಾತುಕತೆಯು ಮಕ್ಕಳ ಭಾವಕೋಶಗಳನ್ನು ಬೆಚ್ಚಗಾಗಿಸುತ್ತವೆ. ಇದನ್ನು ಅರಿತು ಪೋಷಕರು ಸಹ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು. ದೊಡ್ಡವರು ಸಹ ಸ್ಮಾರ್ಟ್ಫೋನ್, ಗ್ಯಾಜೆಟ್ ಬಳಕೆ ಕಡಿಮೆ ಮಾಡಬೇಕು’ ಎಂದು ಅಭಿಪ್ರಾಯಪಡುತ್ತಾರೆ.
‘ಶಾಲೆಗಳಲ್ಲಿ ಆಪ್ತಸಮಾಲೋಚಕರನ್ನು ಬಳಸಿಕೊಳ್ಳುತ್ತಿರುವ ರೀತಿಯೂ ಸುಧಾರಿಸಬೇಕಿದೆ’ ಎನ್ನುತ್ತಾರೆ ಅವರು. ‘ಬಹುತೇಕ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಸೂಕ್ತ ವಿದ್ಯಾರ್ಹತೆ ಇರುವ ಆಪ್ತಸಮಾಲೋಚಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಇವರಿಗೆ ಪ್ರತಿದಿನ ಕ್ಲಾಸ್ಗಳನ್ನು ತೆಗೆದುಕೊಳ್ಳುವಂತೆ, ಲೆಕ್ಕಪತ್ರ ನಿರ್ವಹಿಸುವಂತೆ ಹಾಗೂ ಆಡಳಿತ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ತಾಕೀತು ಮಾಡಲಾಗುತ್ತಿದೆ. ಇದರಿಂದಾಗಿ ಆಪ್ತಸಮಾಲೋಚಕರಿಗೆ ತಮ್ಮ ಮೂಲ ಚಟುವಟಿಕೆ ನಿರ್ವಹಿಸಲು, ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶಗಳು ಕಡಿಮೆಯಾಗುತ್ತಿವೆ. ಮಕ್ಕಳ ವರ್ತನೆ ಬದಲಾಗಿದೆ, ಅವರ ಬ್ಯಾಗ್ನಲ್ಲಿ ಏನೋ ಸಿಕ್ಕಿದೆ ಎಂದು ಕೇವಲ ಮಕ್ಕಳನ್ನಷ್ಟೇ ದೂರಿದರೆ ಪ್ರಯೋಜನವಿಲ್ಲ. ಈಗ ಹೀಗಾಗಿರುವ ಮಕ್ಕಳನ್ನು ಸರಿದಾರಿಗೆ ತರಲು ಹಾಗೂ ಇತರ ಮಕ್ಕಳು ಹಾಗಾಗದಂತೆ ತಡೆಯಲು ಪೋಷಕರು, ಶಾಲಾ ಸಿಬ್ಬಂದಿ ಹಾಗೂ ಆಪ್ತ ಸಮಾಲೋಚಕರು ಒಗ್ಗೂಡಿ ಶ್ರಮಿಸಬೇಕಿದೆ’ ಎಂದು ಅವರು ಹೇಳುತ್ತಾರೆ.
ಶೂ ಸ್ಟ್ಯಾಂಡ್ನಲ್ಲಿ ಕಾಂಡೋಮ್ ಕಂಡ ತಾಯಿ
‘ಪೋಷಕರು ಮಕ್ಕಳೊಂದಿಗೆ ಬೆರೆಯಬೇಕು, ಮಕ್ಕಳ ವರ್ತನೆಯಲ್ಲಿ ಆಗುವ ಬದಲಾವಣೆಗಳನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಮಕ್ಕಳೊಂದಿಗೆ ಮಾತನಾಡುವ ಅವಧಿಯನ್ನು ಹೆಚ್ಚಿಸಿಕೊಳ್ಳಬೇಕು, ಮುಖ್ಯವಾಗಿ ಮಕ್ಕಳ ಮಾತು ಕೇಳಿಸಿಕೊಳ್ಳಬೇಕು’ ಎಂದು ಅಭಯ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯನಿರ್ವಹಿಸುವ ಎ.ಜಗದೀಶ್ ಸಲಹೆ ಮಾಡುತ್ತಾರೆ. ತಮ್ಮ ಬಳಿಗೆ ಬಂದ ಪ್ರಕರಣವೊಂದನ್ನು ಅವರು ಉದಾಹರಣೆಯಾಗಿ ಕೊಟ್ಟಿದ್ದಾರೆ. ಅವರ ಹೇಳಿಕೆಯನ್ನು ‘ಪ್ರಜಾವಾಣಿ’ ವರದಿ ಮಾಡಿದೆ. ‘ಓರ್ವ ತಾಯಿಗೆ 14 ವರ್ಷದ ಮಗನಿದ್ದಾನೆ. ಆಕೆ ಸಿಂಗಲ್ ಪೇರೆಂಟ್. ಒಮ್ಮೆ ಅವರ ಮಗನ ಶೂ ಇರಿಸುವ ಜಾಗದಲ್ಲಿ ಕಾಂಡೋಮ್ ಕಂಡುಬಂದ ಕಾರಣ ಆ ತಾಯಿ ಆಘಾತಕ್ಕೆ ಒಳಗಾಗಿದ್ದರು. ಇತ್ತೀಚಿನ ದಿನಗಳಲ್ಲಿ ‘ಅಂಥ ಚಟುವಟಿಕೆ’ಗಳಲ್ಲಿ ತೊಡಗಿಸಿಕೊಳ್ಳಲು, ‘ಪ್ರಯೋಗ ಮಾಡಲು’ ಇಷ್ಟಪಡುವ ಕೆಲ ಮಕ್ಕಳಿರುವುದೂ ಗಮನಕ್ಕೆ ಬಂದಿದೆ. ಮಾದಕ ವ್ಯಸನ ಮತ್ತು ಅನ್ಯ ಲಿಂಗಿಯೊಂದಿಗೆ ಅತಿಯಾಗಿ ಬೆರೆಯುವುದು ದೈಹಿಕ ಸಂಪರ್ಕಕ್ಕೂ ಕಾರಣ ಆಗಬಹುದು’ ಎಂದು ಎಚ್ಚರಿಸಿದ್ದಾರೆ.
ಕೊವಿಡ್ ನಂತರದ ಬದಲಾವಣೆ
ಕೊವಿಡ್ ನಂತರ ವಿದ್ಯಾರ್ಥಿಗಳ ಮನೋಭಾವ, ಕಲಿಕೆಯ ರೀತಿ, ವರ್ತನೆಯಲ್ಲಿ ಹಲವು ಬದಲಾವಣೆಗಳು ಕಂಡುಬಂದಿವೆ. ಕೊವಿಡ್ ಲಾಕ್ಡೌನ್ ವೇಳೆ ಮೊಬೈಲ್ ಸೇರಿದಂತೆ ಡಿಜಿಟಲ್ ಸಾಧನಗಳ ಬಳಕೆ ಹೆಚ್ಚಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಕೆಲ ಮೊಬೈಲ್ಗಳಲ್ಲಿ ಅಶ್ಲೀಲ ಕಂಟೆಂಟ್ ಇರುವ ವಯಸ್ಕರ ವೆಬ್ಸೈಟ್ಗಳನ್ನು ನೋಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ದೈಹಿಕ ಚಟುವಟಿಕೆ, ಸ್ನೇಹಿತರೊಂದಿಗೆ ಹಾಗೂ ಶೈಕ್ಷಣಿಕ ಸಿಬ್ಬಂದಿಯೊಂದಿಗೆ ಒಡನಾಟಕ್ಕೆ ಸಿಗದ ಅವಕಾಶ ಹಾಗೂ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಬೇಸರದ ಭಾವ ಅನುಭವಿಸುತ್ತಿದ್ದ ಹಲವು ವಿದ್ಯಾರ್ಥಿಗಳ ಸ್ಕ್ರೀನ್ಟೈಮ್ (ಮೊಬೈಲ್, ಕಂಪ್ಯೂಟರ್, ಟಿವಿ ಮತ್ತಿತರ ಗ್ಯಾಜೆಟ್ಗಳೊಂದಿಗೆ ಕಳೆಯುವ ಅವಧಿ) ಹೆಚ್ಚಾಗಿತ್ತು.
ಕೊವಿಡ್ ಬಿಕ್ಕಟ್ಟು ಮುಕ್ತಾಯವಾಗಿ, ಶಾಲೆಗಳು ಆರಂಭವಾದ ನಂತರ ಬಹುತೇಕ ವಿದ್ಯಾರ್ಥಿಗಳ ಸ್ವಭಾವ ಯಥಾಸ್ಥಿತಿಗೆ ಮರಳಿದೆ. ಮೊದಲಿನಂತೆಯೇ ಆಡಿ, ನಲಿಯುತ್ತಾ ಖುಷಿಯಾಗಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳು ಮಾತ್ರ ಕೊವಿಡ್ ಅವಧಿಯಲ್ಲಿ ರೂಢಿಸಿಕೊಂಡ ಅಭ್ಯಾಸಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥ ಮಕ್ಕಳು ಶಾಲೆಗಳಿಗೂ ಸ್ಮಾರ್ಟ್ಫೋನ್ ತರುವುದು, ಏಕಾಂತ ಅಥವಾ ಸಮಾನಮನಸ್ಕ ಒಡನಾಡಿಗಳೊಂದಿಗೆ ಅಶ್ಲೀಲ ವೆಬ್ಸೈಟ್ ನೋಡುವ ಪ್ರವೃತ್ತಿ ಮುಂದುವರಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳಿಗಿಂತಲೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಖಾಸಗಿ ಶಾಲೆಯ ಮಕ್ಕಳಲ್ಲಿಯೇ ಈ ವರ್ತನೆ ಹೆಚ್ಚಾಗಿ ಕಂಡುಬಂದಿದೆ. ಮಕ್ಕಳ ಈ ದುರಭ್ಯಾಸಕ್ಕೆ ಕಡಿವಾಣ ಹಾಕಲೆಂದು ಅವರ ಬ್ಯಾಗ್ ಪರಿಶೀಲಿಸುವ ನಿರ್ಧಾರವನ್ನು ಹಲವು ಶಾಲೆಗಳ ಆಡಳಿತ ಮಂಡಳಿಗಳು ಕೈಗೊಂಡಿವೆ. ಈ ವೇಳೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
Published On - 7:59 am, Wed, 30 November 22